ಪುನೀತ್ ರಾಜ್‌ಕುಮಾರ್‌ ಪ್ರತಿಮೆ ಸುತ್ತ ಫ್ಲೆಕ್ಸ್ ಹಾವಳಿ

KannadaprabhaNewsNetwork | Published : May 2, 2025 12:17 AM

ಸಾರಾಂಶ

ಎನ್.ಆರ್‌. ವೃತ್ತದಲ್ಲಿರುವ ಪುನೀತ್ ರಾಜಕುಮಾರ್ ಪ್ರತಿಮೆಯ ಸುತ್ತ ಫ್ಲೆಕ್ಸ್, ಬ್ಯಾನರ್‌ಗಳ ಹಾವಳಿ ಹೆಚ್ಚಾಗಿದ್ದು, ತರೆವುಗೊಳಿಸುವಂತೆ ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್, ಶಿವರಾಜಕುಮಾರ್, ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಪ್ರತಿಮೆ ಸುತ್ತ ಪ್ಲೆಕ್ಸ್‌ಗಳಿಂದ ತುಂಬಿ ಹೋಗಿದ್ದು, ಸುಂದರವಾದ ಪ್ರತಿಮೆಯಲ್ಲಿ ಒಳ್ಳೆಯ ಸಂದೇಶವಿದೆ.. ಅದನ್ನ ಇತರರು ನೋಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಎನ್.ಆರ್‌. ವೃತ್ತದಲ್ಲಿರುವ ಪುನೀತ್ ರಾಜಕುಮಾರ್ ಪ್ರತಿಮೆಯ ಸುತ್ತ ಫ್ಲೆಕ್ಸ್, ಬ್ಯಾನರ್‌ಗಳ ಹಾವಳಿ ಹೆಚ್ಚಾಗಿದ್ದು, ತರೆವುಗೊಳಿಸುವಂತೆ ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್, ಶಿವರಾಜಕುಮಾರ್, ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಈ ಸಂಬಂಧ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್. ರತೀಶ್ ರಾಜ್ ಮತ್ತು ಜಕ್ಕನಹಳ್ಳಿ ಮೋಹನ್ ಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ನಗರದ ಎನ್. ಆರ್. ವೃತ್ತದಲ್ಲಿ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಪುತ್ಥಳಿಯನ್ನು ಸ್ಥಾಪಿಸಲಾಗಿದೆ. ಇದು ಮುಚ್ಚಿಹೋಗುವಂತೆ ಕೆಲವು ರಾಜಕಾರಣಿಗಳು ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ಹಾಕುತ್ತಿದ್ದಾರೆ. ಇದರ ಬಗ್ಗೆ ತಮಗೆ ಈ ಜಾಗದಲ್ಲಿ ಯಾರೂ ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕದಂತೆ ಹಾಗೂ ಶುಚಿತ್ವ ಕಾಪಾಡುವಂತೆ, ಹಾಲಿ ಹಾಕಿರುವ ಬ್ಯಾನರ್‌ಗಳನ್ನು ತೆಗೆಸುವಂತೆ ಈಗಾಗಲೇ ಮೂರು ಬಾರಿ ತಮಗೆ ಮನವಿ ಸಲ್ಲಿಸಿ ಸಲ್ಲಿಸಿದ್ದೇವೆ ಎಂದರು.

ಇದೇ ವಿಷಯದಲ್ಲಿ ತಾವುಗಳು ಸೂಕ್ತ ಕ್ರಮ ಕೈಗೊಂಡು ಮುಂದೆ ಈ ಸ್ಥಳದಲ್ಲಿ ಯಾರೂ ಬ್ಯಾನರ್‌ಗಳನ್ನು ಹಾಕದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಮುಂದೆ ಯಾರೇ ಬ್ಯಾನರ್, ಫ್ಲಕ್ಸ್‌ ಹಾಕಿದಲ್ಲಿ ಅವರ ಮೇಲೆ ಶಿಸ್ತು ಕ್ರಮ ಕೈಗೊಂಡು, ಪರವಾನಗಿ ರದ್ದು ಮಾಡಬೇಕೆಂದು ವಿನಂತಿಸಿದರು. ಅಲ್ಲದೇ ಹೇಮಾವತಿ ಪ್ರತಿಮೆಯ ಬಳಿಯೂ ಸಹ ಪ್ರತಿಮೆ ಮುಚ್ಚಿಹೋಗುವಂತೆ ಕೆಲವು ರಾಜಕಾರಣಿಗಳು ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ಹಾಕುತ್ತಿದ್ದಾರೆ. ಕ್ರಮ ಕೈಗೊಂಡು ತಪ್ಪಿಸಬೇಕು ಎಂದರು.

ಪುನೀತ್ ರಾಜಕುಮಾರ್ ಅವರ ಪುತ್ಥಳಿಯ ಮೇಲ್ಭಾಗ ಬಿಸಿಲು, ಮಳೆ, ಗಾಳಿ ತಾಗದಂತೆ ಮೇಲ್ಪಾವಣಿಯನ್ನು ಹಾಕಿಸಿಕೊಡಬೇಕಾಗಿ ವಿನಂತಿಸಿದರು. ನಂತರ ಪುತ್ಥಳಿಯ ಮುಂಭಾಗದಲ್ಲಿ ಧ್ವಜಸ್ತಂಭವನ್ನು ಸರ್ಕಾರದ ವತಿಯಿಂದ ನಿರ್ಮಿಸಿಕೊಡಬೇಕಾಗಿ ಮನವಿ ಮಾಡಿದರು. ಸೂಕ್ತ ಕ್ರಮಕೈಗೊಳ್ಳದಿದ್ದರೇ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ವಿಜಯಲಕ್ಷ್ಮಿ ಅಂಜನಪ್ಪ ಮಾತನಾಡಿ, ಎನ್.ಆರ್‌. ವೃತ್ತದಲ್ಲಿರುವ ಡಾ. ಪುನೀತ್ ರಾಜಕುಮಾರ್ ಪ್ರತಿಮೆ ಸುತ್ತ ಪ್ಲೆಕ್ಸ್‌ಗಳಿಂದ ತುಂಬಿ ಹೋಗಿದ್ದು, ಸುಂದರವಾದ ಪ್ರತಿಮೆಯಲ್ಲಿ ಒಳ್ಳೆಯ ಸಂದೇಶವಿದೆ.. ಅದನ್ನ ಇತರರು ನೋಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಇದೇ ವೇಳೆ ಅಭಿಮಾನಿ ಸಂಘದ ವಿಜಯಲಕ್ಷ್ಮಿ ಅಂಜನಪ್ಪ, ಬಿ.ಎಂ. ಭುವನಾಕ್ಷ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article