ಕನ್ನಡಪ್ರಭ ವಾರ್ತೆ ಮಂಡ್ಯ
ಹತ್ತು ವರ್ಷಗಳ ಹಿಂದೆ ತೆರೆಕಂಡ ‘ತಿಥಿ’ ಚಿತ್ರದ ಮೂಲಕ ಪ್ರಖ್ಯಾತಿ ಪಡೆದಿದ್ದ ಗಡ್ಡಪ್ಪ ದೀರ್ಘ ಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಬುಧವಾರ ಸ್ವಗ್ರಾಮದಲ್ಲಿ ಕೊನೆಯುಸಿರೆಳೆದರು.೮೯ ವರ್ಷ ವಯಸ್ಸಾಗಿದ್ದ ಗಡ್ಡಪ್ಪ ಅಲಿಯಾಸ್ ಚನ್ನೇಗೌಡ ಅವರು ಹೃದಯ ಕಾಯಿಲೆ, ಕೆಮ್ಮು ಮತ್ತು ಉಬ್ಬಸ, ಶ್ರವಣದೋಷ ಮತ್ತು ಇತರೆ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳು ಅವರನ್ನು ಬಾಧಿಸುತ್ತಿದ್ದವು. ಇದರ ಜೊತೆಗೆ ತಿಂಗಳ ಹಿಂದಷ್ಟೇ ಬಿದ್ದು ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಆನಂತರ ಅವರಿಗೆ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಅಂತಿಮವಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ನೊದೆಕೊಪ್ಪಲು ಗ್ರಾಮದಲ್ಲಿ ಬುಧವಾರ ನೆರವೇರಿತು.
ತಿಥಿ ಸಿನಿಮಾದಿಂದ ಖ್ಯಾತಿ:ರಾಷ್ಟ್ರಪ್ರಶಸ್ತಿ ಪಡೆದ ‘ತಿಥಿ’ ಸಿನಿಮಾದಲ್ಲಿ ಪಟಾಪಟಿ ಚಡ್ಡಿ, ಹಳೇ ಬನಿಯನ್ -ಶರ್ಟು ತೊಟ್ಟು ‘ಏನ್ ನಿನ್ ಪ್ರಾಬ್ಲಮ್ಮು’ ಅಂತ ನ್ಯಾಚುರಲ್ ಆಗಿ ಡೈಲಾಗ್ ಹೊಡೆದವರು ಗಡ್ಡಪ್ಪ. ‘ತಿಥಿ’ ಸಿನಿಮಾದಲ್ಲಿ ಗಡ್ಡಪ್ಪನ ಪಾತ್ರ ನಿರ್ವಹಿಸಿದ್ದ ಚನ್ನೇಗೌಡ.. ಅದೇ ಹೆಸರಿನಿಂದ ಗುರುತಿಸಿಕೊಂಡರು. ಈ ಸಿನಿಮಾ ಮಂಡ್ಯದ ಸಣ್ಣ ಗ್ರಾಮದ ಹಣ್ಣು ಮುದುಕನ ಬದುಕನ್ನು ದೇಶದ ಜನರ ಮುಂದೆ ತಂದು ನಿಲ್ಲಿಸಿತ್ತು. ನಟನೆಯ ಗಂಧ ಗಾಳಿಯೂ ಗೊತ್ತಿರದ ತೀರಾ ಕಡು ಬಡತನ ಇಳಿ ವಯಸ್ಸಿನ ಗಡ್ಡಪ್ಪ ಅಲಿಯಾಸ್ ಚನ್ನೇಗೌಡ ದೇಶಾದ್ಯಂತ ಫೇಮಸ್ ಆಗಿದ್ದರು. ಸಿನಿಮಾ ನೋಡಿ ಜನರು ಹೊಗದ್ದೇ ಹೊಗಳಿದ್ದು. ಹೊಗಳಿ ಅಟ್ಟಕ್ಕೆ ಏರಿಸಿದ್ದರು.
ಈರೇಗೌಡರ ಚಿತ್ರಕಥೆಯನ್ನಾಧರಿಸಿ ರಾಮ್‌ರೆಡ್ಡಿ ನಿರ್ದೇಶನ ಮಾಡಿದ್ದ ‘ತಿಥಿ’ ಸಿನಿಮಾ ಅಪಾರ ಜನಮನ್ನಣೆಗೆ ಪಾತ್ರವಾಗಿತ್ತು. ಚಿತ್ರಮಂದಿರಗಳಿಗೆ ಲಗ್ಗೆ ಇಡುವ ಮುನ್ನವೇ ಹಲವು ಫಿಲಂ ಫೆಸ್ಟಿವಲ್‌ಗಳಲ್ಲಿ ಭಾಗವಹಿಸಿತ್ತು. ಕೊನೆಗೆ ಆ ಚಿತ್ರ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಇದರ ಜೊತೆಗೆ ಹಲವಾರು ಪ್ರಶಸ್ತಿಗಳನ್ನೂ ಬಾಚಿಕೊಂಡಿತ್ತು. ಈ ಚಿತ್ರದ ಮೂಲಕ ತಮ್ಮ ೭೯ನೇ ವಯಸ್ಸಿನಲ್ಲಿ ನಟನಾಗಿ ಗಮನಸೆಳೆದಿದ್ದರು.‘ಗಡ್ಡಪ್ಪ’ ಪಾತ್ರವನ್ನು ನೋಡಿ ಅನೇಕರು ಮೂಕವಿಸ್ಮಿತರಾದರು. ಅವರು ತಮ್ಮ ಸಹಜ ನಟನಾ ಕೌಶಲ್ಯದಿಂದ ಜನಪ್ರಿಯರಾದರು.ನಟಿಸಿದ ಸಿನಿಮಾಗಳು:
‘ತಿಥಿ’ ಚಿತ್ರದಿಂದ ಖ್ಯಾತಿ ಗಳಿಸಿದ ಗಡ್ಡಪ್ಪ ಮುಂದೆ ನಟನಾಗಿ ‘ಗಡ್ಡಪ್ಪನ ಸರ್ಕಲ್’, ತಾತನ್ ತಿಥಿ ಮೊಮ್ಮಗನ ಪ್ರಸ್ಥ’, ಹಾಲು -ತುಪ್ಪ’, ತರ್ಲೇ ವಿಲೇಜ್’, ಏನ್ ನಿನ್ ಪ್ರಾಬ್ಲಮ್ಮು’, ‘ಹಳ್ಳಿ ಪಂಚಾಯ್ತಿ’, ’ಗಡ್ಡಪ್ಪನ್ ದುನಿಯಾ’, ‘ಜಾನಿ ಜಾನಿ ಯೆಸ್ ಪಪ್ಪಾ’ ಮುಂತಾದ ಸಿನಿಮಾಗಳಲ್ಲಿ ಗಡ್ಡಪ್ಪ ಅಭಿನಯಿಸಿದ್ದರು.ಗಡ್ಡಪ್ಪ ಅಲಿಯಾಸ್ ಚನ್ನೇಗೌಡ ರೈತಾಪಿ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ‘ನಾವು ರೈತರು, ನಮಗೆ ಅಭಿನಯ ಗೊತ್ತಿಲ್ಲ, ಗೊತ್ತಿರುವಷ್ಟು ಅಭಿನಯಿಸುತ್ತಿದ್ದೇವೆ’ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಚನ್ನೇಗೌಡ ಹೇಳಿದ್ದರು.
ಹೊಸ ಮನೆ ನಿರ್ಮಾಣ:ಮಂಡ್ಯ ಕಡೆಯಿಂದ ಪಾಂಡವಪುರಕ್ಕೆ ತೆರಳುವ ಮಾರ್ಗದಲ್ಲಿ ನೊದೆಕೊಪ್ಪಲು ಗ್ರಾಮದ ರಸ್ತೆಯ ಪಕ್ಕದ ಗುಡಿಸಲೊಂದರಲ್ಲಿ ಗಡ್ಡಪ್ಪ ವಾಸವಾಗಿದ್ದರು. ತಿಥಿ ಚಿತ್ರದಿಂದ ಖ್ಯಾತಿ ಪಡೆದ ಬಳಿಕ ನಿರ್ದೇಶಕರು ಸೇರಿದಂತೆ ಹಲವರು ಹೊಸ ಮನೆಯೊಂದನ್ನು ಅವರಿಗಾಗಿ ನಿರ್ಮಿಸಿಕೊಟ್ಟಿದ್ದರು.
ಚಿತ್ರಗಳು ಗೆಲುವು ಕಾಣಲಿಲ್ಲ:‘ತಿಥಿ’ ಸಿನಿಮಾ ಬಳಿಕ ಹಲವಾರು ಸಿನಿಮಾಗಳಲ್ಲಿ ಗಡ್ಡಪ್ಪ ನಟಿಸಿದರೂ ಅವು ಗೆಲುವು ಸಾಧಿಸಲಿಲ್ಲ. ಸಿನಿಮಾಗಳಲ್ಲಿ ನಟಿಸಿದರೂ ಗಡ್ಡಪ್ಪ ಆರ್ಥಿಕವಾಗಿ ಸೃಧಡರಾಗಲು ಸಾಧ್ಯವಾಗಲೇ ಇಲ್ಲ. ರಾತ್ರೋ ರಾತ್ರಿ ಗಡ್ಡಪ್ಪನಾಗಿ ಫೇಮಸ್ ಆಗಿದ್ದ ಚನ್ನೇಗೌಡರು ತನ್ನ ಬದುಕಿನ ಕೊನೆಯ ಘಟ್ಟದಲ್ಲಿ ಸಿಕ್ಕಿದ ಈ ಜನಪ್ರಿಯತೆಯನ್ನು ಹೇಗೆ ತೆಗೆದುಕೊಳ್ಳಬೇಕು ಎಂಬ ಗೊಂದಲ. ತನ್ನನ್ನು ಹುಡುಕಿಕೊಂಡು ಬರುವ ಸಿನಿಮಾ ಮಂದಿಗಳ ಜೊತೆ ಹೇಗೆ ಮಾತಾಡಬೇಕೆಂದು ತಿಳಿಯದ ಮುಗ್ಧ ಮನಸ್ಸು, ಇಂತಹ ಮನಸ್ಸುಗಳನ್ನು ಬಳಸಿಕೊಳ್ಳುವುದಕ್ಕೆ ಕಾಯುತ್ತಿದ್ದ ಸಿನಿಮಾ ಮಂದಿ. ಇವೆಲ್ಲದರ ನಡುವೆ ಗಡ್ಡಪ್ಪನ ಬದುಕು ಬದಲಾಗಲೇ ಇಲ್ಲ.
‘ತಿಥಿ’ ಸಿನಿಮಾವನ್ನು ಬಾಲಿವುಡ್ ನಟ ಆಮೀರ್ ಖಾನ್ ಕೂಡ ಮೆಚ್ಚಿ ಕೊಂಡಾಡಿದ್ದರು. ‘ತಿಥಿ’ ಸಿನಿಮಾವನ್ನು ಗಡ್ಡಪ್ಪನ ನಟನೆಯನ್ನು ಬಾಯ್ತುಂಬಾ ಹೊಗಳಿದ್ದರು. ಇಲ್ಲಿಂದ ಗಡ್ಡಪ್ಪನ ಬದುಕು ಬದಲಾಗುತ್ತದೆ. ಇಳಿ ವಯಸ್ಸಿನಲ್ಲಿ ಬಡತನಕ್ಕೆ ಮುಕ್ತಿ ಸಿಗಲಿದೆ ಎಂದೆಲ್ಲಾ ಮಾತಾಡಿಕೊಂಡರು. ವಾಸ್ತವದಲ್ಲಿ ಗಡ್ಡಪ್ಪನ ಬದುಕು ಯಾವ ರೀತಿಯಲ್ಲೂ ಬದಲಾಗಲಿಲ್ಲ ಎಂಬುದೇ ವಿಪರ್ಯಾಸ.ನಟನೆ ಅಂದ್ರೆ ನಮ್ಮ ತಂದೆಗೆ ಪ್ರಾಣ: ಪುತ್ರಿ ಶೋಭಾನಟನೆ ಅಂದರೆ ನಮ್ಮ ತಂದೆಗೆ ಪ್ರಾಣ. ಆದರೆ, ಅನಾರೋಗ್ಯ ಸಮಸ್ಯೆಯಿಂದ ಯಾವುದೇ ಸಿನಿಮಾದಲ್ಲಿ ಅಭಿನಯಿಸಲು ಸಾಧ್ಯವಾಗಲಿಲ್ಲ. ಒಂದು ತಿಂಗಳ ಹಿಂದೆ ಜಾರಿ ಬಿದ್ದು ಸೊಂಟಕ್ಕೆ ಪೆಟ್ಟಾಗಿ ಚಿಕಿತ್ಸೆ ಕೊಡಿಸಲಾಗಿತ್ತು. ಹೃದಯ ಸಮಸ್ಯೆಯಿಂದಲೂ ಬಳಲುತ್ತಿದ್ದರು.೧೦ಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ ಎಂದು ಪುತ್ರಿ ಶೋಭಾ ಹೇಳಿದರು.
ನಟನೆಗೂ ಮೊದಲು ಊರಿನಲ್ಲಿ ಸಣ್ಣ ಹೋಟೆಲ್ ನಡೆಸುತ್ತಿದ್ದರು ಅವಾಗಿಂದಲೂ ಗಡ್ಡಪ್ಪ ಅನ್ನೋ ಹೆಸರು ಇತ್ತು. ಆ ಹೆಸರೇ ತಿಥಿ ಸಿನಿಮಾದಲ್ಲಿ ಹೆಚ್ಚು ಪ್ರಚಾರವಾಯಿತು. ಆನಂತರ ಮನೆ ಬಳಿಗೆ ೫೦೦ ರಿಂದ ೬೦೦ ಜನ ಅಭಿಮಾನಿಗಳು ಬರುತ್ತಿದ್ದರು. ಗಡ್ಡಪ್ಪ ಅವರನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದರು ಎಂದರು.ಸಿನಿಮಾ ಆಫರ್‌ಗಳು ಸಾಕಷ್ಟು ಬರುತ್ತಿದ್ದವು. ಆರೋಗ್ಯ ಸರಿಲ್ಲದ ಕಾರಣ ನಾವೇ ಕಳುಹಿಸುತ್ತಿರಲಿಲ್ಲ. ಅವರ ಆರೋಗ್ಯವಾಗಿದ್ದಿದ್ದರೆ ಸಿನಿಮಾಗಳಲ್ಲಿ ನಟನೆ ಮಾಡೋರು. ಅವರಿಗೆ ಇಷ್ಟವಿದ್ದ ರಂಗ ಸಿನಿಮಾ ರಂಗ. ಸಿನಿಮಾ ಅಂದ್ರೆ ಹುಚ್ಚು. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುತ್ತಿದ್ದರು. ಅವರಿಂದಲೇ ಆರ್ಥಿಕವಾಗಿ ಮನೆ ನಡೆಯುತ್ತಿತ್ತು. ಊಟ ಇಲ್ಲದೆ ನಮ್ಮೆಲ್ಲರನ್ನೂ ಸಾಕಿದ್ದರು ಎಂದು ಕಣ್ಣೀರಿಟ್ಟರು.