ಗಾಂಧಿ ಚಿಂತನೆ, ಚರಿತೆ ಸಾರುವ ‘ಗಾಂಧಿ ಭವನ’

KannadaprabhaNewsNetwork |  
Published : Sep 04, 2024, 01:59 AM IST
ಸಿಕೆಬಿ-1 ಲೋಕಾರ್ಪಣೆಗೆ ಸಿದ್ದಗೊಳ್ಳುತ್ತಿರುವ ಗಾಂಧಿ ಭವನದ ಹೊರ ನೋಟಸಿಕೆಬಿ-2 ಮೋಹನ ದಾಸ ಟು ಮಹಾತ್ಮ ಗಾಂಧಿ’ ಛಾಯಾಚಿತ್ರಗಳ ಪ್ರಾಂಗಣದಲ್ಲಿ ಕಿರು ಮಾಹಿತಿ ಒಳಗೊಂಡಿರುವ ಚಿತ್ರಗಳು ಗಾಂಧಿ ಜೀವನ ಚರಿತ್ರೆಯನ್ನು ಅನಾವರಣಗೊಳಿಸುತ್ತಿವೆ | Kannada Prabha

ಸಾರಾಂಶ

ಗಾಂಧಿಯ ಕೋಲಿನ ಆಶ್ರಯದಲ್ಲಿ ಬಾಲಕನೊಬ್ಬಮುನ್ನೆಡೆಯುತ್ತಿರುವ ಮೂರ್ತಿ ಭವನದ ಆವರಣವನ್ನು ಪ್ರವೇಶಿಸುತ್ತಿದ್ದಂತೆ ಕಾಣಸಿಗುತ್ತದೆ. ಇಂದಿನ ಮಕ್ಕಳು, ಯುವ ಪೀಳಿಗೆ ಗಾಂಧಿ ಚಿಂತನೆಯಲ್ಲಿ ಮುಂದೆ ಸಾಗಬೇಕು ಎಂಬರ್ಥವನ್ನು ಈ ಮೂರ್ತಿ ಸಾರಿ ಹೇಳುವಂತಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸತ್ಯ, ಅಹಿಂಸೆಯ ಪ್ರತಿಪಾದಕ, ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಮಕ್ಕಳು, ವಿದ್ಯಾರ್ಥಿ, ಯುವ ಪೀಳಿಗೆಗೆ ಪರಿಚಯಿಸುವ ಸದುದ್ದೇಶದಿಂದ ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗದ ಜಿಲ್ಲಾ ಕೇಂದ್ರ ಗ್ರಂಥಾಲಯದ ಆವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಿರ್ಮಿಸುತ್ತಿರುವ ‘ಗಾಂಧಿ ಭವನ’ ಬಾಪು ಚರಿತ್ರೆಯನ್ನು ಕಣ್ಣೆದರು ಅನಾವರಣಗೊಳಿಸಲಿದೆ. 3 ಕೋಟಿ ರೂಗಳ ಮೊತ್ತದಲ್ಲಿ ನಿರ್ಮಿತಿ ಕೇಂದ್ರವು ಆಕರ್ಷಕವಾಗಿ ಗಾಂಧಿ ಭವನವನ್ನು ನಿರ್ಮಿಸುತ್ತಿದ್ದು, ಭವನಕ್ಕೆ ಒಮ್ಮೆ ಭೇಟಿ ನೀಡಿದರೆ ಅಲ್ಲಿರುವ ಮೂರ್ತಿಗಳು, ಭಾವಚಿತ್ರಗಳು, ಚಿತ್ರಪಟಗಳು, ಪುಸ್ತಕಗಳು ಗಾಂಧಿ ಚರಿತ್ರೆಯನ್ನು ಸಾರಲಿವೆ. ಗಾಂಧಿ ಚಿಂತನೆಯಲ್ಲಿ ಮುಂದೆ ಸಾಗಿ

ದಂಡಿ ಸತ್ಯಾಗ್ರಹದ ಬೃಹದಾಕಾರದ ಆಕರ್ಷಕ ಮೂರ್ತಿಗಳು ಗಾಂಧಿ ಭವನದತ್ತ ದಾರಿಹೋಕರನ್ನು ಕೈಬೀಸಿ ಕರೆಯುತ್ತವೆ. ಭವನದೋಳಗೆ ಮತ್ತು ಹೊರಬಾಗದಲ್ಲಿನ ಪ್ರತಿಮೆಗಳು ಹಿಂದು, ಮುಸ್ಲಿಂ, ಕ್ರೈಸ್ತ ಧರ್ಮಿಯರು ಗಾಂಧಿ ಮುಂದಾಳತ್ವದಲ್ಲಿ ಸಾಗುವ ದೃಶ್ಯ ಸಾಮರಸ್ಯ ಮತ್ತು ಸಹಬಾಳ್ವೆಯ ಭಾರತವನ್ನು ಪ್ರತಿನಿಧಿಸುತ್ತದೆ. ಗಾಂಧಿಯ ಕೋಲಿನ ಆಶ್ರಯದಲ್ಲಿ ಬಾಲಕನೊಬ್ಬಮುನ್ನೆಡೆಯುತ್ತಿರುವ ಮೂರ್ತಿ ಭವನದ ಆವರಣವನ್ನು ಪ್ರವೇಶಿಸುತ್ತಿದ್ದಂತೆ ಕಾಣಸಿಗುತ್ತದೆ. ಇಂದಿನ ಮಕ್ಕಳು, ಯುವ ಪೀಳಿಗೆ ಗಾಂಧಿ ಚಿಂತನೆಯಲ್ಲಿ ಮುಂದೆ ಸಾಗಬೇಕು ಎಂಬರ್ಥವನ್ನು ಈ ಮೂರ್ತಿ ಸಾರಿ ಹೇಳುವಂತಿದೆ.ಜೀವನ ಸುಂದರವಾಗಿರಬೇಕಾದರೆ, ಸಮಾಜದಲ್ಲಿ ಸಹಿಷ್ಣೆತೆ, ಸಹೋದರತೆಯಿಂದ ಬಾಳಬೇಕೆಂದರೆ ಕೆಟ್ಟದನ್ನು ಕೇಳಬಾರದು, ಕೆಟ್ಟದನ್ನು ಮಾತನಾಡಬಾರದು, ಕೆಟ್ಟದನ್ನು ನೋಡಬಾರದು ಎಂಬ ಗಾಂಧಿ ಸಂದೇಶವನ್ನು ಸಾರುವ ಕಣ್ಣು, ಕಿವಿ, ಬಾಯಿಯನ್ನು ಮುಚ್ಚಿಕೊಂಡಿರುವ ಮೂರು ಗಾಂಧಿ ಕೋತಿಗಳು ಆಕರ್ಷಕವಾಗಿ ಕಾಣುತ್ತವೆ. ಕೆಳಗೆ ಬಿದ್ದಿರುವ ಮಗುವನ್ನು ಎತ್ತಿಕೊಳ್ಳುತ್ತಿರುವ ಗಾಂಧಿ ಮೂರ್ತಿಯು ಅಸ್ಪೃಶ್ಯತೆ ನಿವಾರಣೆಗಾಗಿ ಗಾಂಧಿ ನಡೆಸಿದ ಹೋರಾಟದ ಪ್ರತೀಕವಾಗಿದೆ.

ಗಾಂಧಿ ಚಿಂತನೆ ಪರಿಚಯ‘ಬಾಪು ಕುಟೀರ’ದಲ್ಲಿ ಕುಳಿತ ಭಂಗಿಯಲ್ಲಿರುವ ಗಾಂಧಿ ಪ್ರತಿಮೆ ಹಾಗೂ ಕಟೀರದಲ್ಲಿ ಗಾಂಧೀಜಿಯ ಆಯ್ದ 16 ನುಡಿಮುತ್ತುಗಳು, ಚರಕ, ಖಾದಿ, ದೀನ ದಲಿತ, ಶೋಷಿತರ ಸೇವೆಯಲ್ಲಿ ದೇವರನ್ನು ಕಂಡ ಗಾಂಧಿ ಚಿಂತನೆಯನ್ನು ಪರಿಚಯಿಸುತ್ತವೆ. ಗಾಂಧಿ ಭವನದೊಳಗೆ ಪ್ರವೇಶಿಸುವ ಪ್ರವೇಶ ದ್ವಾರದ ಮೇಲೆ ಕಲಾವಿದ ರಚಿತ ಬೃಹದಾಕಾರದ ಗಾಂಧಿ ಚಿತ್ರ ಎಲ್ಲರೂ ತಲೆ ಎತ್ತಿ ನಡೆಯುವಂತೆ ಮಾಡುತ್ತದೆ. ಧ್ಯಾನನಿರತ ಗಾಂಧಿಯ ಪ್ರತಿಮೆ ಹಾಗೂ ಅದರ ಅಡಿಯಲ್ಲಿ ಬರೆದಿರುವ ‘ನನ್ನ ಜೀವನವೇ ನನ್ನ ಸಂದೇಶ’ ಸೂಕ್ತಿಯು ಗಾಂಧಿ ತಾತನ ಜೀವನ, ಸಂದೇಶ ಸಾರುತ್ತದೆ.

ಅಪರೂಪದ 15 ಫೋಟೊಮಾರ್ಟಿನ್‌ ಲೂಥರ್‌ ಕಿಂಗ್‌, ಬರಾಕ್‌ ಒಬಾಮ, ನೆಲ್ಸನ್‌ ಮಂಡೇಲಾ, ಐನ್‌ಸ್ಟಿನ್‌ ಗಾಂಧಿ ಕುರಿತು ನೀಡಿದ ಶ್ಲಾಘನೀಯ ಹೇಳಿಕೆಯನ್ನು ತಿಳಿಸುವ ಹಾಗೂ ಗಾಂಧೀಜಿ ಅವರು ನೆಹರೂ, ಸುಭಾಶ್ಚಂದ್ರ ಬೋಸ್‌, ರವೀಂದ್ರನಾಥ ಟ್ಯಾಗೋರ್‌, ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ಅವರೊಂದಿಗೆ ಇರುವ ಅಪರೂಪದ 15 ಎಲ್‌ಇಡಿ ಫೋಟೊಗಳನ್ನು ಗೋಡೆಗಳ ಮೇಲೆ ನೇತು ಹಾಕಲಾಗುತ್ತದೆ. ‘ಮೋಹನ ದಾಸ ಟು ಮಹಾತ್ಮ ಗಾಂಧಿ’ ಛಾಯಾಚಿತ್ರಗಳ ಪ್ರಾಂಗಣದಲ್ಲಿ ಕಿರು ಮಾಹಿತಿ ಒಳಗೊಂಡಿರುವ100 ಚಿತ್ರಗಳು ಗಾಂಧಿ ಜೀವನ ಚರಿತ್ರೆಯನ್ನು ಅನಾವರಣಗೊಳಿಸುತ್ತವೆ.ಗಾಂಧಿ ಗ್ರಂಥಾಲಯ, ಗಾಂಧಿ ಸಭಾಂಗಣ, ಹೃದಯ ಕುಂಜ(ಧ್ಯಾನ ಮಂದಿರ) ಹಾಗೂ ಕಸ್ತೂರಬಾ ಗಾಂಧಿ ಅವರೊಂದಿಗೆ ಮಹಾತ್ಮನ ಪ್ರತಿಮೆ ನೋಡುಗರಲ್ಲಿ ಗಾಂಧಿ ಎಂಬ ಅಗಾದ ವ್ಯಕ್ತಿತ್ವವನ್ನು ಅಚ್ಚಳಿಯದಂತೆ ಮನದೊಳಗೆ ಉಳಿಸುತ್ತದೆ.ಅಕ್ಟೋಬರ್‌ 2ಕ್ಕೆ ಉದ್ಘಾಟನೆ

2018 ರ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಗೊಂದು ಗಾಂಧಿಭವನ ಯೋಜನೆಯಡಿ ಜಿಲ್ಲೆಗೆ ಗಾಣಧಿಭವನ ಮಂಜೂರಾಗಿ ಅಂದಿನ ಶಾಸಕ ಡಾ.ಕೆ.ಸುಧಾಕರ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಹೆಚ್.ಶಿವಶಂಕರರೆಡ್ಡಿ ಶಂಕುಸ್ಥಾಪನೆ ನೆರವೇರಿಸಿದ್ದರು. ಅಂದಿನಿಂದ ಕುಂಟುತ್ತಾ ಸಾಗಿದ ಕಾಮಗಾರಿ, ಕೊನೆಗೂ ಈಗ ಸಿದ್ದವಾಗುತ್ತಿದೆ. ಕಾಂಪೌಂಡ್, ಚರಕ ತಿರುಗಿಸುತ್ತಿರುವ ಗಾಂಧಿ ಪ್ರತಿಮೆ, ಸೇರಿದಂತೆ ಸಣ್ಣ-ಪುಟ್ಟ ಕಾಮಗಾರಿಗಳು ಬಾಕಿ ಇದ್ದು, ಅಕ್ಟೋಬರ್ 2ರ ಗಾಂಧಿಜಯಂತಿಗೆ ಲೋಕಾರ್ಪಣೆ ಗೊಳ್ಳಲು ಸಿದ್ದವಾಗುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ