ಗದಗ: ಅಕ್ಟೋಬರ್ 9ರಂದು ನಗರದ ಕೆ.ಎಚ್.ಪಾಟೀಲ ಸಭಾಭವನದಲ್ಲಿ ಬೆಳಗ್ಗೆ 11ಕ್ಕೆ ಗಾಂಧಿ ಜಯಂತಿ ಗಾಂಧಿಸ್ಮೃತಿ, ವ್ಯಸನಮುಕ್ತ ಸಾಧಕರಿಗೆ ಅಭಿನಂದನೆ ಮತ್ತು ಪದಗ್ರಹಣ ಕಾರ್ಯಕ್ರಮವು ಜರುಗಲಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಬಿ. ಅಸೂಟಿ ಹೇಳಿದರು.
ಅವರು ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾ ಘಟಕ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾನಿಧ್ಯವನ್ನು ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳು ವಹಿಸಲಿದ್ದಾರೆ. ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ನೆರವೇರಿಸಲಿದ್ದಾರೆ. ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಎಚ್.ಬಿ. ಅಸೂಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಗಾಂಧಿಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಮಾಜಿ ಶಾಸಕ ಡಿ.ಆರ್. ಪಾಟೀಲ ಅವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪಾನಮುಕ್ತರಿಗೆ ಅಭಿನಂದನೆಯನ್ನು ಜಿಲ್ಲಾಧಿಕಾರಿ ವೈಶಾಲಿ.ಎಮ್.ಎಲ್ ಅವರು ನಡೆಸಿಕೊಡಲಿದ್ದಾರೆ. ಪದಗ್ರಹಣವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ರಾಜಣ್ಣ ಕೊರವಿ ನಡೆಸಿ ಕೊಡಲಿದ್ದಾರೆ. ಕೊಪ್ಪಳದ ಪ್ರಾದೇಶಿಕ ನಿರ್ದೇಶಕರಾದ ಗಣೇಶ ಬಿ. ಆಶಯ ಭಾಷಣವನ್ನು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್ಪಿ ಬಿ.ಎಸ್. ನೇಮಗೌಡ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಶಿವಪ್ರಕಾಶ ಮಹಾಜನಶೆಟ್ಟರ್ ಆಗಮಿಸಲಿದ್ದಾರೆ. ಇದಕ್ಕೂ ಮುನ್ನ ಬೆಳಗ್ಗೆ 9 ಕ್ಕೆ ತೋಂಟದಾರ್ಯ ಮಠದಿಂದ ಜಾಗೃತಿ ಜಾಥಾ ನಡೆಯಲಿದೆ. ಈ ಜಾಥಾಕ್ಕೆ ಡಿವೈಎಸ್‌ಪಿ ಎಂ.ಬಿ. ಸಂಕದ ಚಾಲನೆ ನೀಡಲಿದ್ದಾರೆ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಯೋಗೀಶ್ ಎ. ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 1992ರಲ್ಲಿ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯನ್ನು ಬೆಳ್ತಂಗಡಿಯಲ್ಲಿ ಪ್ರಾರಂಭ ಮಾಡಿದ್ದು, ಕಳೆದ 32 ವರ್ಷಗಳಿಂದ ಕರ್ನಾಟಕ ರಾಜ್ಯಾದ್ಯಂತ ಮದ್ಯವರ್ಜನ ಶಿಬಿರಗಳನ್ನು ಏರ್ಪಡಿಸುವುದರ ಮೂಲಕ ರಾಜ್ಯದಲ್ಲಿ 1750ಕ್ಕೂ ಹೆಚ್ಚು ಶಿಬಿರಗಳನ್ನು ಏರ್ಪಡಿಸಿ ಸುಮಾರು 13,5000 ಮದ್ಯವ್ಯಸನಿಗಳು ಪಾನಮುಕ್ತರಾಗಿ ಸುಖಸಂಸಾರವನ್ನು ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಜನಜಾಗೃತಿ ವೇದಿಕೆಯನ್ನು 2009ರಲ್ಲಿ ಪ್ರಾರಂಭ ಮಾಡಿ ಇದುವರೆಗೂ 39 ಮದ್ಯವರ್ಜನ ಶಿಬಿರಗಳನ್ನು ಏರ್ಪಡಿಸಿ 2847 ಮದ್ಯವ್ಯಸನಿಗಳನ್ನು ಮದ್ಯಮುಕ್ತರನ್ನಾಗಿ ಮಾಡಿಸಲಾಗಿದೆ ಮತ್ತು 270 ಸ್ವಾಸ್ಥ್ಯಸಂಕಲ್ಪ ಕಾರ್ಯಕ್ರಮಗಳನ್ನು ಮಾಡಿ 24030 ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಶಿವಪ್ರಕಾಶ ಮಹಾಜನಶೆಟ್ಟರ್, ನೂತನ ಅಧ್ಯಕ್ಷ ಶಿವಾನಂದ ಬೆಂತೂರು, ಉಪಾಧ್ಯಕ್ಷ ಚಂದ್ರಶೇಖರ ಹುಣಸಿಕಟ್ಟಿ, ಸದಸ್ಯರುಗಳಾದ ಮಂಜುನಾಥ ಹದ್ದಣ್ಣವರ, ದೇವೇಂದ್ರಪ್ಪ ಕಾಗೆನವರ, ಕ್ಷೇತ್ರ ಯೋಜನಾಧಿಕಾರಿ ಸುರೇಂದ್ರ ನಾಯ್ಕ ಇದ್ದರು.