ಕರಡಹಳ್ಳಿ ಸೀತಾರಾಮು
ಕನ್ನಡಪ್ರಭ ವಾರ್ತೆ ನಾಗಮಂಗಲಚಿಕ್ಕತಿರುಪತಿ ಎಂದೇ ಖ್ಯಾತಿ ಪಡೆದಿರುವ ತಾಲೂಕಿನ ಎಚ್.ಎನ್.ಕಾವಲ್ ಸಮೀಪದ ಬೆಟ್ಟದಗುಡಿ ಶ್ರೀವೆಂಕಟರಮಣ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಡಿ.22 ರಂದು ಸಂಭ್ರಮದ ಗಿಡದ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಜಾತ್ರೆ ಎಂದಾಕ್ಷಣ ರಥೋತ್ಸವ, ಜನಜಂಗುಳಿ, ಪೂಜೆ, ವ್ಯಾಪಾರ ವಹಿವಾಟಿನ ದೃಶ್ಯಗಳು ಕಂಡುಬರುವುದು ಸಹಜ. ಆದರೆ, ಇಲ್ಲಿ ನಡೆಯುವ ಗಿಡದ ಜಾತ್ರೆಯು ಮಾತ್ರ ಇತರೆಡೆಗಳಲ್ಲಿ ನಡೆಯುವ ಜಾತ್ರೆಗಳಿಗಿಂತ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ.ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ ಗಿಡದ ಜಾತ್ರೆ ನಡೆಯುತ್ತದೆ. ಜಾತ್ರೆಗೆ ಆಗಮಿಸುವ ಭಕ್ತರಿಗೆ ಎಲ್ಲೆಡೆ ತಿರುಪತಿ ತಿಮ್ಮಪ್ಪನ ಸ್ಮರಿಸುವ ಗೋವಿಂದ ನಾಮಸ್ಮರಣೆ, ಮೈನವಿರೇಳಿಸುವ ಜಾಗಟೆ ಸದ್ದು ತದೇಕ ಚಿತ್ತದಿಂದ ಕೇಳಿ ಬರುತ್ತದೆ.
ಗಿಡಮರಗಳ ನಡುವೆ ನಡೆಯುವ ಪೂಜೆ ಪುರಸ್ಕಾರ, ಅದರಾಚೆ ದೇವರಿಗೆ ಭಕ್ತರಿಂದ ಮಾಂಸ ಮದ್ಯದ ನೈವೇದ್ಯ ಎಲ್ಲವೂ ಗಮನಸೆಳೆಯಲಿದೆ. ಅರಣ್ಯ ಪ್ರದೇಶದಲ್ಲಿ ನಡೆಯುವ ಈ ಜಾತ್ರೆಗೆ ಗಿಡದ ಜಾತ್ರೆ ಎಂದು ಹೆಸರು ಬಂದಿದೆ.ಶತಮಾನಗಳ ಹಿಂದೆ ಬೆಟ್ಟದಗುಡಿ ಶ್ರೀವೆಂಕಟರಮಣಸ್ವಾಮಿ ದೇವಸ್ಥಾನವು ಸಹಸ್ರಾರು ಭಕ್ತರ ನೆಲೆಯಾಗಿತ್ತು. ನಂತರದಲ್ಲಿ ದೇವಸ್ಥಾನ ಶಿಥಿಲಗೊಂಡು ನಿರ್ವಹಣೆ ಕೊರತೆಯಿಂದಾಗಿ ಸಮೀಪದ ನಾಗನಕೆರೆಯ ಅರಣ್ಯ ಪ್ರದೇಶದಲ್ಲಿ ಈ ಜಾತ್ರೆ ನಡೆಯುತ್ತಿತ್ತು. ದೇವಸ್ಥಾನ ಪುನರ್ ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ ಹಲವು ವರ್ಷಗಳ ಕಾಲ ನಾಗನಕೆರೆಯಲ್ಲಿ ನಡೆಯುತ್ತಿದ್ದ ಜಾತ್ರೆಯು ಕಳೆದೆರಡು ವರ್ಷದಿಂದ ಮೂಲದೇವಸ್ಥಾನದ ಆವರಣದಲ್ಲಿ ನಡೆಯುತ್ತಿದೆ.
ವರ್ಷಕೊಮ್ಮೆ ನಡೆಯುವ ಗಿಡದ ಜಾತ್ರೆಗೆ ತಿರುಪತಿಗೆ ತೆರಳುತ್ತಿದ್ದ ಯಾತ್ರಿಕರು ಇಲ್ಲಿಗೆ ಬಂದು ಒಂದೆರಡು ದಿನಗಳ ಕಾಲ ವಾಸ್ತವ್ಯ ಹೂಡಿ ದೇವರ ಸೇವೆ ಮುಗಿಸಿ ನಂತರ ತಿರುಪತಿಗೆ ತೆರಳುತ್ತಿದ್ದರು. ಇಲ್ಲಿನ ದೇವರ ದರ್ಶನದಿಂದ ತಮ್ಮ ಅರ್ಧ ಯಾತ್ರೆ ಮುಗಿಯಿತು ಎಂಬ ನಂಬಿಕೆಯಿಟ್ಟಿದ್ದ ಭಕ್ತರು ಈ ಸ್ಥಳವನ್ನು ಚಿಕ್ಕತಿರುಪತಿ ಎಂದೇ ಕರೆಯುತ್ತಾರೆ.ತಿರುಪತಿಗೆ ಹೋಗಲಾಗದವರು ಇದನ್ನೆ ತಿರುಪತಿ ಎಂದು ಭಾವಿಸಿ ಇಲ್ಲಿಗೆ ಆಗಮಿಸಿ ಹರಕೆ ತೀರಿಸಿ ತಮ್ಮ ಭಕ್ತಿಭಾವ ಸಮರ್ಪಿಸಿ ಹೋಗುವುದು ವಾಡಿಕೆಯಾಗಿದೆ. ತಿರುಪತಿ ತಿಮ್ಮಪ್ಪನ ದರ್ಶನ ಪಡೆದಷ್ಟೇ ನಂಬಿಕೆ ಭಕ್ತರದ್ದಾಗಿರುತ್ತದೆ. ಒಂದು ದಿನ ನಡೆಯುವ ಈ ಜಾತ್ರೆಗೆ ಜಿಲ್ಲೆಯವರು ಮಾತ್ರವಲ್ಲದೆ ನಾಡಿನ ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯ ಬರುತ್ತಾರೆ.
ಎಲ್ಲರೂ ಒಂದೆಡೆ ಸೇರಿ ತಿಮ್ಮಪ್ಪನನ್ನು ಸ್ಮರಿಸಿ, ಪೂಜೆ ಮಾಡಿ ಹರಕೆ ಸಲ್ಲಿಸುತ್ತಾರೆ. ಇಲ್ಲಿ ಮದ್ಯ ಮತ್ತು ಮಾಂಸದ ಎಡೆ ಇಡುತ್ತಾರೆ ಎನ್ನುವುದೇ ಮತ್ತೊಂದು ವಿಶೇಷ.ಜಾತ್ರೆಗೆ ಆಗಮಿಸುವ ದಾಸಪ್ಪಂದಿರು ತಮ್ಮ ಜೋಳಿಗೆಯಲ್ಲಿ ದೇವರನ್ನು ತಂದು ಪೂಜಿಸುತ್ತಾರೆ. ಈ ಸಂಪ್ರದಾಯ ಬಹಳ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದು ಹೇಳಲಾಗುತ್ತದೆ. ಪೂಜೆಮುಗಿದ ಬಳಿಕ ಬುತ್ತಿಯಲ್ಲಿ ತರುವ ಮಾಂಸದೂಟವನ್ನು ಸೇವಿಸಿ ತಮ್ಮ ಊರುಗಳಿಗೆ ಹಿಂತಿರುಗುತ್ತಾರೆ.
ಅಪಾರ ಭಕ್ತರ ಸಂಗಮ:ಸುಮಾರು 30 ಸಾವಿರಕ್ಕೂ ಹೆಚ್ಚು ತಿಮ್ಮಪ್ಪನ ಭಕ್ತರು ಈ ಜಾತ್ರೆಗೆ ಸೇರುವ ನಿರೀಕ್ಷೆಯಿದೆ. ಹರಕೆ ಹೊತ್ತು ಬರುವ ಭಕ್ತರು ಕೇಶಮುಂಡನ ಮಾಡಿಸಿಕೊಂಡು ಹರಕೆ ತೀರಿಸಿದರೆ, ಕೆಲ ಭಕ್ತರು ಬಾಯಿಬೀಗದ ಹರಕೆ ತೀರಿಸುತ್ತಾರೆ.
ನಾಗಮಂಗಲ ಪಟ್ಟಣದಿಂದ 15 ಕಿ.ಮೀ. ದೂರದಲ್ಲಿ ಈ ಜಾತ್ರೆ ನಡೆಯಲಿದೆ. ಜಾತ್ರೆಗೆ ತೆರಳಲು ವಾಹನಗಳ ಸುಗಮ ಸಂಚಾರಕ್ಕೆ ಸಮರ್ಪಕ ವ್ಯವಸ್ಥೆಯೂ ಇಲ್ಲ ಎನ್ನುವುದು ಭಕ್ತರ ಆರೋಪವಾಗಿದೆ. ದೇವಸ್ಥಾನ ಚಿಕ್ಕತಿರುಪತಿ ವೆಂಕಟರಮಣಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಟ್ರಸ್ಟ್‌ನಿಂದ ಭಕ್ತರಿಗೆ ಕುಡಿಯುವ ನೀರು ಸೇರಿದಂತೆ ವ್ಯಾಪಾರಸ್ಥರಿಗೆ ಮತ್ತು ವಾಹನಗಳ ನಿಲ್ದಾಣಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಯಾವುದೇ ಸೌಲಭ್ಯವಿರಲಿ ಇಲ್ಲದಿರಲಿ ಅಪಾರ ಸಂಖ್ಯೆಯ ಭಕ್ತರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಭಾಗವಹಿಸಿ ಧನ್ಯರಾಗುತ್ತಾರೆ.ಜಾತ್ರೆಗೆ ಹೇಗೆ ಪ್ರಚಾರ:
ಜಾತ್ರೆ ನಡೆಯುವ 20 ದಿನಗಳ ಮುಂಚಿತವಾಗಿ ನಾಗಮಂಗಲದ ಕಟ್ಟೆಮನೆ ಯಜಮಾನರ ಕುಟುಂಬಸ್ಥರು ಕಳಶಪೂಜೆ ಹೊತ್ತು ಹರಿಭಕ್ತ ದಾಸಪ್ಪಂದಿರ ಜೊತೆಗೂಡಿ ಪಟ್ಟಣದಲ್ಲಿ ಮೆರವಣಿಗೆ ನಡೆಸುವ ಮೂಲಕ ಜನರಿಗೆ ಜಾತ್ರೆ ನಡೆಯುವ ಮುನ್ಸೂಚನೆಯನ್ನು ರವಾನಿಸುತ್ತಾರೆ.ನಂತರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶ್ರೀ ವೆಂಕಟರಮಣಸ್ವಾಮಿಗೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ಹಾಲ್ತಿ ಗ್ರಾಮದಲ್ಲಿ ಧೂಪಸೇವೆ, ಹೊಸಹಳ್ಳಿಯಲ್ಲಿ ಮಣೆಸೇವೆ, ಕೋಟೆಬೆಟ್ಟದ ಕಂಬದನರಸಿಂಹಸ್ವಾಮಿಯ ಉತ್ಸವ, ಕಾರಗೆರೆಯ ಆಂಜನೇಯಸ್ವಾಮಿ ಉತ್ಸವ ಸೇರದಂತೆ ಬದರಿಕೊಪ್ಪಲು, ಕೊಣನೂರು, ಬೆಟ್ಟದಮಲ್ಲೇನಹಳ್ಳಿ, ಶೆಟ್ಟಹಳ್ಳಿ, ಲಕ್ಕೇಗೌಡನಕೊಪ್ಪಲು, ನಲ್ಕುಂದಿ, ಜುಟ್ಟನಹಳ್ಳಿ, ಇಜ್ಜಲಘಟ್ಟ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿವಿಧ ಬಗೆಯ ಸೇವೆಗಳು ಜರುಗಲಿವೆ.
ಕೆ.ಮಲ್ಲೇನಹಳ್ಳಿಯಲ್ಲಿ ಧೂಪಸೇವೆ ನಡೆದರೆ, ಜೋಡಿಚಿಕ್ಕನಹಳ್ಳಿಯಲ್ಲಿ ಮಾರಮ್ಮದೇವಿ ಉತ್ಸವದೊಂದಿಗೆ ಧೂಪಸೇವೆ ನಡೆಯಲಿದೆ. ಗದ್ದೇಭೂವನಹಳ್ಳಿ ಸಮೀಪ ಗುಂಡುಕಲ್ಲುಜಾತ್ರೆ, ನಲ್ಕುಂದಿಯಲ್ಲಿ ಭೂತಾಳೆ ಜಾತ್ರೆ, ಪಾಲಗ್ರಹಾರ, ಬಿಂಡೇನಹಳ್ಳಿ, ದಂಡಿಗನಹಳ್ಳಿ, ಕರಡಹಳ್ಳಿ, ದೊಡ್ಡಯಗಟಿ, ತೆಂಗಿನಭಾಗ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಹಾಲರಬಿ, ಬಾಯಿಬೀಗ, ಮಣೆಸೇವೆ ನಡೆಯಲಿದ್ದು, ಡಿ.22ರ ಶುಕ್ರವಾರ ಬೆಳಗ್ಗೆಯಿಂದ ಸಂಜೆ ವರೆಗೆ ವಿಜೃಂಭಣೆಯ ಗಿಡದ ಜಾತ್ರಾ ಮಹೋತ್ಸವ ನಡೆಯಲಿದೆ.ಮಾರ್ಕೋನಹಳ್ಳಿಯಲ್ಲಿ ಹರಿಸೇವೆ:
ಗಿಡದ ಜಾತ್ರೆ ಮುಗಿದ ನಂತರ ತಿರುಪತಿಗೆ ತೆರಳುವ ಭಕ್ತರು ಕುಣಿಗಲ್ ತಾಲೂಕಿನ ಮಾರ್ಕೊನಹಳ್ಳಿ ಜಲಾಶಯದ ಸಮೀಪ ಹರಿಸೇವೆ ಮಾಡಿ ಸಾವಿರಾರು ಮಂದಿಗೆ ಮಾಂಸದೂಟ ಉಣಬಡಿಸಿ ತಿರುಪತಿಗೆ ಪ್ರಯಾಣ ಬೆಳೆಸುತ್ತಾರೆ. ತಿರುಪತಿಯಿಂದ ಸ್ವಗ್ರಾಮಗಳಿಗೆ ಆಗಮಿಸಿದ ಬಳಿಕ ಊರಿನ ಜನರಿಗೆ ಪ್ರಸಾದ ನೀಡುತ್ತಾರೆ.