ಕನ್ನಡಪ್ರಭ ವಾರ್ತೆ ಹಾಸನ
ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸಿಕೊಂಡು, ಹೊಂದಾಣಿಕೆಯಿಂದಿರಬೇಕು, ಆದರೆ ಇಂದಿನ ದಿನಮಾನಗಳಲ್ಲಿ ಸಣ್ಣಸಣ್ಣ ಮನಸ್ತಾಪದಿಂದ ಹೊಂದಾಣಿಕೆ ಇಲ್ಲದೆ ಕೌಟುಂಬಿಕ ದೌರ್ಜನ್ಯಗಳು ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ -೨೦೦೫ ಅನುಷ್ಠಾನ ಕುರಿತು ಒರಿಯೆಂಟೇಷನ್ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ವಿಚ್ಛೇದನ ಬಹಳ ಕಡಿಮೆ ಇರುತ್ತಿದ್ದವು, ಆದರೆ ಪ್ರಸ್ತುತ ದಿನಮಾನಗಳಲ್ಲಿ ಪಾಶ್ಚಾತ್ಯರಿಗಿಂತ ಹೆಚ್ಚಾಗುತ್ತಿದೆ ಎಂದರು.
ತಂದೆ ತಾಯಿ ಹುಡುಕಿದ ವಧುವರನನ್ನು ವಿವಾಹವಾಗಬೇಕು, ಅವರು ಹುಡುಕಿದ ವಧು-ವರರ ಕುರಿತು ನಕರಾತ್ಮಕ ಆಲೋಚನೆಯನ್ನು ಮಾಡಬಾರದು, ವಿವಾಹವೆಂಬುದು ಕೇವಲ ಇಬ್ಬರು ವ್ಯಕ್ತಿಗಳು ಆಗುವುದು ಅಲ್ಲ ಎರಡು ಕುಟುಂಬಗಳು, ಅವರ ಆಚಾರ ವಿಚಾರಗಳು ಸಮ್ಮಿಲನವಾಗುವಂತಹದ್ದಾಗಿದೆ ಎಂದು ತಿಳಿಸಿದರು.ಹೆಣ್ಣುಮಕ್ಕಳು ಸ್ವಭಾವತಃ ಶಕ್ತಿವಂತರೆ ಆದರೆ, ಕೆಲವು ಮಹಿಳೆಯರು ಬಲಹೀನರಿದ್ದಾರೆ ಅವರ ಸಬಲೀಕರಣಕ್ಕಾಗಿ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದರ ಕುರಿತು ಸಾರ್ವಜನಿಕರಿಗೆ ಹಾಗೂ ದೌರ್ಜನ್ಯ, ಹಿಂಸೆ ಅನುಭವಿಸುತ್ತಿರುವವರಿಗೆ ಹೊಂದಾಣಿಕೆಯಿಂದ ಸಂಬಂಧ ವೃದ್ಧಿಸಿಕೊಳ್ಳಲು ತಿಳಿಹೇಳಿ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಬಿ.ಕೆ ಮಾತನಾಡಿ, ಹೆಣ್ಣು ಅಬಲೆ ಅಲ್ಲ, ಸಬಲಳಾಗಿದ್ದಾಳೆ ಆರ್ಥಿಕವಾಗಿಯೂ ಸ್ವಾತಂತ್ರ್ಯಳಾಗಿದ್ದಾಳೆ, ಕುಟುಂಬದಲ್ಲಿ ಹಿರಿಯರ ಅನುಭವದ ಮಾತುಗಳನ್ನು ಕೇಳಿ ಅದರಂತೆ ನಡೆದುಕೊಂಡರೆ ಕೋರ್ಟ್‌ಗಳಿಗೆ ಹೋಗುವುದನ್ನು ತಪ್ಪಿಸಬಹುದು, ಹಿಂದೆ ಅವಿಭಕ್ತ ಕುಟುಂಬಗಳಿದ್ದವು ಆದರೆ ಇಂದು ವಿಭಕ್ತ ಕುಟುಂಬಗಳಾಗಿ ಮಾರ್ಪಡುತ್ತಿವೆ, ಕೌಟುಂಬಿಕ ಹಿಂಸೆ ಎಂಬುದು ನಾಲ್ಕು ಗೋಡೆಗಳ ಮಧ್ಯೆ ನಡೆಯುವಂತಹದ್ದಾಗಿದೆ. ಗಂಡು ಮಕ್ಕಳಿಗೂ ದೌರ್ಜನ್ಯಗಳಾಗುತ್ತಿವೆ ಆದರೆ ಅವರು ತಮ್ಮ ಘನತೆ ಗೌರವದ ನಿಮಿತ್ತ ವ್ಯಕ್ತಪಡಿಸುತ್ತಿಲ್ಲ, ಇಂದು ವಿಚ್ಛೇದನ ಎಂಬುದು ಸಾಮಾನ್ಯವಾಗಿದೆ, ಸಾರ್ವಜನಿಕರಿಗೆ ಇದರ ಕುರಿತು ಅರಿವು ಮೂಡಿಸಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್ ಪೂರ್ಣಿಮ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಡಿ.ಟಿ ಪ್ರಸನ್ನ, ಪ್ರೇರಣಾ ವಿಕಾಸ ವೇದಿಕೆಯ ರೂಪ ಹಾಸನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಧರಣಿ ಕುಮಾರ್ ಎಮ್.ಆರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಜೋತಿ ಲಕ್ಷ್ಮೀ ಕೆ.ಸಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.