ಸರ್ಕಾರದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿ ಆಚರಿಸಲಿ

KannadaprabhaNewsNetwork |  
Published : Jun 07, 2026, 01:45 AM IST
5ಎಚ್ಎಸ್ಎನ್19 :  | Kannada Prabha

ಸಾರಾಂಶ

ನಾಲ್ವಡಿ ಕೃಷ್ಣರಾಜ ಒಡೆಯರು ಕೇವಲ ಮೈಸೂರಿಗೆ ಸೀಮಿತವಾಗಿರಲಿಲ್ಲ. ಇಡೀ ಕರ್ನಾಟಕದ ನ್ಯಾಯ ಜಾರಿಗೆ ತಂದು, ದೇವದಾಸಿ ಅಭಿವೃದ್ಧಿಗೆ ಅಡಿಪಾಯ ಹಾಕಿದ ದೂರದೃಷ್ಟಿಯ ರಾಜರಾಗಿದ್ದು, ಅವರ ಹೆಸರು ಮುಂದಿನ ಪೀಳಿಗೆಯಲ್ಲೂ ಚಿರಸ್ಥಾಯಿಯಾಗಿ ಉಳಿಯುವಂತೆ ಸರ್ಕಾರ ಕಾರ್ಯಕ್ರಮ ರೂಪಿಸಬೇಕು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಾಮಾ ಜಿಕ ನ್ಯಾಯದ ಅನುಷ್ಠಾನಕ್ಕಾಗಿ ರಾಜಾಡಳಿತದಲ್ಲಿಯೇ ಪ್ರಜಾಡಳಿತ ಜಾರಿ ಮಾಡಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಮೂಲಕ ಸಾಮಾಜಿಕ ನ್ಯಾಯ ಜಾರಿಗೆ ತಂದು ದೇವದಾಸಿಯಂತಹ ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ರದ್ದುಗೊಳಿಸಿ, ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ ಮಾಡಿ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರೆಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಮೈಸೂರು ಸಂಸ್ಥಾನದ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ಹರಿಕಾರರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯನ್ನು ಸರ್ಕಾರದಿಂದಲೇ ಆಚರಿಸುವಂತಾಗಬೇಕೆಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ೧೪೨ನೇ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರು ಕೇವಲ ಮೈಸೂರಿಗೆ ಸೀಮಿತವಾಗಿರಲಿಲ್ಲ. ಇಡೀ ಕರ್ನಾಟಕದ ನ್ಯಾಯ ಜಾರಿಗೆ ತಂದು, ದೇವದಾಸಿ ಅಭಿವೃದ್ಧಿಗೆ ಅಡಿಪಾಯ ಹಾಕಿದ ದೂರದೃಷ್ಟಿಯ ರಾಜರಾಗಿದ್ದು, ಅವರ ಹೆಸರು ಮುಂದಿನ ಪೀಳಿಗೆಯಲ್ಲೂ ಚಿರಸ್ಥಾಯಿಯಾಗಿ ಉಳಿಯುವಂತೆ ಸರ್ಕಾರ ಕಾರ್ಯಕ್ರಮ ರೂಪಿಸಬೇಕು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಾಮಾ ಜಿಕ ನ್ಯಾಯದ ಅನುಷ್ಠಾನಕ್ಕಾಗಿ ರಾಜಾಡಳಿತದಲ್ಲಿಯೇ ಪ್ರಜಾಡಳಿತ ಜಾರಿ ಮಾಡಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಮೂಲಕ ಸಾಮಾಜಿಕ ನ್ಯಾಯ ಜಾರಿಗೆ ತಂದು ದೇವದಾಸಿಯಂತಹ ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ರದ್ದುಗೊಳಿಸಿ, ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ ಮಾಡಿ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರೆಂದು ತಿಳಿಸಿದರು.ಏಷ್ಯಾ ಖಂಡದಲ್ಲಿಯೇ ಮೊದಲಿಗೆ ಜಲವಿದ್ಯುತ್ ಉತ್ಪಾದನೆ ಮಾಡಿ ನಾಡನ್ನು ಬೆಳಗಿಸಿ ಆಧುನಿಕ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿಸಿ ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವಾಗಿ ರೂಪಿಸಿದ್ದಾರೆ. ಇತಂಹ ಮಹನೀಯರ ಜಯಂತಿ ಆಚರಣೆಗೆ ಸರ್ಕಾರದ ಉದಾಸೀನ ಧೋರಣೆ ಸರಿಯಲ್ಲ. ವಿಶ್ವಕ್ಕೆ ಮಾದರಿ ಆಡಳಿತ ಆಧುನಿಕ ಮೈಸೂರಿನ ನಿರ್ಮಾತೃ ಎಂದೇ ಕರೆಯಲ್ಪಡುವ ಅವರ ಜಯಂತಿಯನ್ನು ರಾಜ್ಯಾದ್ಯಂತ ಸರ್ಕಾರದ ವತಿಯಿಂದ ಅದ್ಧೂರಿಯಾಗಿ ಆಚರಿಸಬೇಕು. ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಸದನದಲ್ಲಿ ಅಧಿವೇಶನದ ವೇಳೆ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆಯಲಾಗುವುದೆಂದು ತಿಳಿಸಿದರು.

ಒಡೆಯರ್‌ ಕೊಡುಗೆ ಅಪಾರ:ನಾಲ್ವಡಿಯವರ ಕೊಡುಗೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ನವೋದಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮಂಜಪ್ಪ, ನಾಲ್ವಡಿ ಕೃಷ್ಣರಾಜ ಒಡೆಯರ ೩೯ ವರ್ಷಗಳ ಆಳ್ವಿಕೆ ಮೈಸೂರು ರಾಜ್ಯವನ್ನು ಪ್ರಗತಿಪರ, ಸ್ವಾವಲಂಬಿ ಮಾಡಿತು. ಶಿಕ್ಷಣಕ್ಕೆ ಆದ್ಯತೆ ನೀಡಿದ್ದು, ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿದರು. ಆಧುನಿಕ ಮೈಸೂರಿನ ನೈಜ ನಿರ್ಮಾತೃ, ನಾಲ್ವಡಿಯವರ ದೂರದೃಷ್ಟಿ ಮೈಸೂರನ್ನು ನಾವೀನ್ಯತೆಯ ತಾಣವನ್ನಾಗಿ ರೂಪಿಸಿತು. ೧೯೦೨ರಲ್ಲಿ ಶಿವನ ಸಮುದ್ರ ಜಲಪಾತ ಯೋಜನೆಯ ಮೂಲಕ, ಮೈಸೂರು ಜಲವಿದ್ಯುತ್ ಉತ್ಪಾದಿಸುವ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಆ ಮೂಲಕ ೧೯೦೫ರಲ್ಲಿ ಬೆಂಗಳೂರು ವಿದ್ಯುತ್ ಬೀದಿದೀಪಗಳನ್ನು ಹೊಂದಿರುವ ಏಷ್ಯಾದ ನಗರ ಎಂಬ ಕೀರ್ತಿ ಪಡೆಯಿತು ಎಂದು ಶ್ಲಾಘಿಸಿದರು. ೧೯೧೧ರಿಂದ ೧೯೩೨ರ ನಡುವೆ ನಿರ್ಮಾಣಗೊಂಡ ಕೃಷ್ಣರಾಜ ಸಾಗರ ಅಣೆಕಟ್ಟು ಆ ಸಮಯದಲ್ಲಿ ಏಷ್ಯಾದ ಅತಿದೊಡ್ಡ ಅಣೆಕಟ್ಟಾಗಿದ್ದು, ಇಂದಿಗೂ ಅಪಾರ ಪ್ರಮಾಣದ ಭೂಮಿಗೆ ನೀರಾವರಿ ಒದಗಿಸಿ, ಹಾಸನ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ರೈತರ ಜೀವನಾಡಿಯಾಗಿದೆ. ಅವರು ಪ್ರಮುಖ ಉದ್ಯಮಗಳಿಗೂ ಚಾಲನೆ ನೀಡಿದ್ದು, ಮೈಸೂರು ಪೇಪರ್‌ ಮಿಲ್ಸ್, ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ ಸ್ಥಾಪಿಸಿ ಕೈಗಾರಿಕಾ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಅವರ ದೂರದೃಷ್ಟಿ ಮತ್ತು ದಿಟ್ಟ ನಿರ್ಧಾರಗಳಿಂದಾಗಿ ಮೈಸೂರು ರಾಜ್ಯವು ಮಾದರಿ ಕೈಗಾರಿಕಾ ರಾಜ್ಯವಾಗಿ ರೂಪುಗೊಂಡಿತು. ಅವರ ಆಡಳಿತಾವಧಿಯ ಬಗ್ಗೆ ಇನ್ನಷ್ಟು ಆಳವಾಗಿ ತಿಳಿದುಕೊಳ್ಳಲು ನಾಲ್ವಡಿ ಕೃಷ್ಣರಾಜ ಒಡೆಯರ ಜೀವನ ಚರಿತ್ರೆಯನ್ನು ಓದಬೇಕು ಎಂದರು.ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಸಿ. ಕೃಷ್ಣ ಗೌಡ ಹಾಗೂ ಶಿವನಗೌಡ ಪಾಟೀಲ್ ಅವರನ್ನು ಗೌರವಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ನಾಲ್ವಡಿ ಕೃಷ್ಣರಾಜರ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಬಿ. ಆರ್‌. ರಮೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಪದಾಧಿಕಾರಿಗಳಾದ ಮುಳ್ಳುಕೆರೆ ಪ್ರಕಾಶ್, ಜಬಿವುಲ್ಲಾ ಬೇಗ್, ದಿಂಡಗೂರು ಗೋವಿಂದರಾಜು, ಯಶೋಧ ಜೈನ್, ಮಮತಾ ಸೇರಿ ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

-----ಫೋಟೋ

ಚನ್ನರಾಯಪಟ್ಟಣಧ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ೧೪೨ನೇ ಜಯಂತ್ಯುತ್ಸವ ಕಾರ್ಯಕ್ರಮ ನೆರವೇರಿತು.*ಹೇಳಿಕೆ:

ನಾಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆಗಳು ನಿಜಕ್ಕೂ ಅಪಾರ. ಅವರ ಆಳ್ವಿಕೆಯ ಕಾಲವನ್ನು ಮೈಸೂರು ಸಂಸ್ಥಾನದ ಸುವರ್ಣಯುಗ ಎಂದು ಕರೆಯಲಾಗುತ್ತದೆ. ಅವರ ಜನಪರ ಆಡಳಿತ ಮತ್ತು ದೂರದೃಷ್ಟಿಯ ಯೋಜನೆಗಳು ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಬುನಾದಿಯಾದವು.

- ಹಡೇನಹಳ್ಳಿ ಲೋಕೇಶ್‌, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಿಗೆ ಪರಿಸರ ಸಂರಕ್ಷಣೆ ಪಾಠ ಬಹುಮುಖ್ಯ: ವೈ.ಕೆ.ತಿಮ್ಮೇಗೌಡ
ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಿ ಮತ್ತೊಂದು ಜೀವ ಉಳಿಸಬೇಕು