ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಗ್ಯಾರಂಟಿ ಯೋಜನೆಗಳ ಮೂಲಕ ಗ್ರಾಮೀಣ ಭಾಗದ ಬಡ ಜನರು ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗುತ್ತಿದೆ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹೇಳಿದರು. ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಬಹುತೇಕ ಎಲ್ಲ ಮನೆಗಳಿಗೆ ತಲುಪಿದ್ದು, ಕಷ್ಟ ಕಾಲದಲ್ಲೂ ಯೋಜನೆಯು ಬಡ ಜನರ ಕೈ ಹಿಡಿದಿದೆ ಎಂದರು.ಗ್ರಾಪಂ ವ್ಯಾಪ್ತಿಯ ಕಾಮಗಾರಿಮುಂದಿನ ಒಂದು ವರ್ಷದ ಕಾಲ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಡಬೇಕಿರುವ ಕಾಮಗಾರಿಗಳನ್ನು ಪಟ್ಟಿ ಮಾಡಲಾಗಿದ್ದು, ಗ್ರಾಮ ಸಭೆಯ ಮೂಲಕ ಅನುಮೋದನೆ ಮಾಡಿ ಶೀಘ್ರವಾಗಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಮಾಗೊಂದಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಾಲ್ಕು ಬಾರಿ ಅಭಿವೃದ್ದಿ ಮಾಡಲಾಗಿದೆ. ಬಂಗಾರಪೇಟೆ ಹುಣಸಹಳ್ಳಿ ಮಾರ್ಗವಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯವರೆಗೂ ರಸ್ತೆಯನ್ನು ಮಾಡಲಾಗಿದೆ. ಮಾಗೊಂದಿ ಸಕ್ಕನಹಳ್ಳಿ ಮಾರ್ಗದ ಮದ್ಯೆ ೧.೭೦ ಕೋಟಿ ವೆಚ್ಚದಲ್ಲಿ ಬ್ರಿಡ್ಜ್ ನಿರ್ಮಿಸಲಾಗುತ್ತದೆ ಎಂದರು. ಮಾಗೊಂದಿ ಗ್ರಾಮದಲ್ಲಿನ ಸೂರಿಲ್ಲದವರಿಗೆ ಸೂರನ್ನು ಕಲ್ಪಿಸಲು ರಾಮಚಂದ್ರಪುರ ಗ್ರಾಮ ಬಳಿ ಸರ್ಕಾರಿ ಭೂಮಿಯನ್ನು ಸರ್ವೆ ಮಾಡಿಸಿ ಜಾಗವನ್ನು ಗುರ್ತಿಸಿ ನಿವೇಶನವನ್ನು ಹಂಚಲು ಕ್ರಮ ತೆಗೆದುಕೊಳ್ಳಬೇಕು ಎಂದು ಇಒ ರವಿಕುಮಾರ್ ಗೆ ಸೂಚಿಸಿದರು.
ಕೇಂದ್ರ- ರಾಜ್ಯದ ಯೋಜನೆಜೆಜೆಎಂ ಯೋಜನೆ ಕೇಂದ್ರ ಸರ್ಕಾರದ ಯೋಜನೆ ಎಂದು ಕೆಲವರು ಜನರಿಗೆ ತಪ್ಪು ಸಂದೇಶವನ್ನು ನೀಡುತ್ತಿದ್ದಾರೆ. ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಯಾಗಿ ನಡೆಸುತ್ತಿದ್ದು, ಯೋಜನೆಗೆ ಕೇವಲ ಶೇ ೪೦ ಪರ್ಸೆಂಟ್ ಕೇಂದ್ರ ಸರ್ಕಾರದಿಂದ ಅನುದಾನ ಬರಲಿದ್ದು, ಉಳಿದ ೬೦ ಪರ್ಸೆಂಟ್ ರಾಜ್ಯ ಸರ್ಕಾರ ನೀಡುತ್ತಿದೆ ಎಂದು ವಿವರಿಸಿದರು.ಗ್ರಾಮೀಣ ಭಾಗದಲ್ಲಿ ನಿರ್ಮಿಸಿರುವ ಸಿಸಿ ರಸ್ತೆಗಳನ್ನು ಜೆಜೆಎಂ ಕಾಮಗಾರಿ ಹೆಸರಿನಲ್ಲಿ ಹಾಳು ಮಾಡುತ್ತಿದ್ದಾರೆ. ರಸ್ತೆಯನ್ನು ಸರಿಪಡಿಸದೇ ಹೋದರೆ ಗುತ್ತಿಗೆದಾರರಿಗೆ ಅನುದಾನವನ್ನು ಬಿಡುಗಡೆ ಮಾಡಬಾರದು. ಅಕಸ್ಮಾತ್ ಅನುದಾನ ಬಿಡುಗಡೆ ಮಾಡಿದರೆ ಇಲಾಖೆಯ ಎಇಇ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕರು ಎಚ್ಚರಿಸಿದರು.
ತಾ.ಪಂ ಇಒ ರವಿಕುಮಾರ್, ಗ್ರಾಪಂ ಅಧ್ಯಕ್ಷೆ ಅಮರಾವತಿ ಮುನೀಂದ್ರ, ಉಪಾಧ್ಯಕ್ಷ ಕೃಷ್ಣಾರೆಡ್ಡಿ, ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಪಿಡಿಒ ಸರಸ್ವತಿ ಅಧಿಕಾರಿಗಳಾದ ಶಿವಾರೆಡ್ಡಿ, ಮುನಿರಾಜು, ಪ್ರತಿಭಾ, ಶ್ರೀಲಕ್ಷ್ಮಿ, ಸುಕುಮಾರ್ ರಾಜ್, ಅ.ನಾ.ಹರೀಶ್, ಮುಖಂಡರಾದ ಕುಪೇಂದ್ರ, ಬಾಲರಾಜ್, ಚಂಗಾರೆಡ್ಡಿ ಇದ್ದರು.