‘ಗ್ಯಾರಂಟಿ’ ಯಶಸ್ಸು ವಿಪಕ್ಷಗಳಿಗೆ ಸಹಿಸಲಾಗುತ್ತಿಲ್ಲ: ಡಿ.ಸುಧಾಕರ್‌

KannadaprabhaNewsNetwork | Published : Feb 6, 2024 1:31 AM

ಹಿರಿಯೂರು ತಾಲೂಕಿನ ಜೆಜೆ ಹಳ್ಳಿಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಕುರಿತ ಸಮಾವೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಚಾಲನೆ ನೀಡಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಸದುಪಯೋಗಕ್ಕೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಬಿಜೆಪಿಯವರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ಎನ್ನುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಆರೋಪಿಸಿದರು.

ತಾಲೂಕಿನ ಜವನಗೊಂಡನಹಳ್ಳಿಯಲ್ಲಿ ಸೋಮವಾರ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಕುರಿತ ಸಮಾವೇಶವನ್ನು ಉದ್ಘಾಟನೆ ಮಾಡಿ ಮಾತ ನಾಡಿದ ಅವರು, ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳ ಯಶಸ್ಸು ವಿರೋಧಿಗಳಿಗೆ ನುಂಗಲಾರದ ತುತ್ತಾಗಿದೆ. ವಿರೋಧಪಕ್ಷದ ನಾಯಕ ಅಶೋಕ್ ರವರು ಈಗಾಗಲೇ ಗ್ಯಾರಂಟಿ ಯೋಜನೆ ನಿಲ್ಲಿಸಿ ಅಭಿವೃದ್ಧಿಕಾರ್ಯ ಮಾಡಿ ಎಂಬ ಮಾತಾಡಿದ್ದಾರೆ. ನೆನಪಿಟ್ಟುಕೊಳ್ಳಿ, ಅವರೇನಾದರೂ ಅಧಿಕಾರಕ್ಕೆ ಬಂದರೆ ಅವತ್ತೇ ಈ ಜನೋಪಯೋಗಿ ಯೋಜನೆಗಳು ನಿಂತು ಬಿಡುತ್ತವೆ. ಕಾಂಗ್ರೆಸ್ ಸರ್ಕಾರಕ್ಕೆ ಹೆಸರು ಬರುತ್ತದೆಂಬ ಕಾರಣಕ್ಕೆ ಈಗಾಗಲೇ ದುಡ್ದು ಕೊಡುತ್ತೇವೆಂದರೂ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಮಹಿಳೆಯರು ಅಕ್ಕಿಯ ಹಣ ಬೇಡ ಅಕ್ಕಿಯನ್ನೇ ನೀಡಿ ಎಂದು ಕೇಳುತ್ತಿದ್ದಾರೆ. ನಾವೀಗಾಗಲೇ ಸರ್ಕಾರದ ಹಂತದಲ್ಲಿ ಚರ್ಚಿಸಿದ್ದು, ಹೇಗಾದರೂ ಮಾಡಿ ಹತ್ತು ಕೆ.ಜಿ. ಅಕ್ಕಿ ಕೊಟ್ಟೇ ಕೊಡುತ್ತೇವೆ. ನಮ್ಮ ನೇತಾರ ರಾಹುಲ್ ಗಾಂಧಿಯವರು ಘೋಷಿಸಿದ ಗ್ಯಾರಂಟಿಗಳ ಸೌಲಭ್ಯವನ್ನು ಎಲ್ಲರಿಗೂ ಸಮರ್ಪಕವಾಗಿ ತಲುಪಿಸಲು ಸರ್ಕಾರ ಬದ್ಧವಾಗಿದೆ.

ಈ ಹೋಬಳಿ ಭಾಗದಲ್ಲಿ ನಾನು 2008 ರಲ್ಲಿ ಶಾಸಕನಾಗಿ ಆಯ್ಕೆಯಾದಾಗ ಒಂದೇ ಒಂದು ಒಳ್ಳೆಯ ರಸ್ತೆ ಇರಲಿಲ್ಲ. ಆಮೇಲೆ ಹತ್ತು ವರ್ಷ ಸಾಕಷ್ಟು ಕೆಲಸ ಮಾಡಿದೆ. ಆನಂತರ 2018 ರಿಂದ 2023 ರವರೆಗೆ ಮತ್ತೆ ಅಭಿವೃದ್ಧಿಯಲ್ಲಿ ಹೋಬಳಿ ಕುಂಠಿತವಾಯಿತು. ಅಕ್ಟೊಬರ್ ಹೊತ್ತಿಗೆ ಅಡೆತಡೆಗಳನ್ನೆಲ್ಲಾ ನಿವಾರಣೆ ಮಾಡಿ ವಿ.ವಿ.ಸಾಗರಕ್ಕೆ ನೀರು ತರಲು ಪ್ರಯತ್ನಿಸಲಾಗುವುದು. ಜೆ.ಜೆ.ಹಳ್ಳಿ ಹೋಬಳಿಯ ಗಾಯಿತ್ರಿ ಜಲಾಶಯಕ್ಕೂ ನೀರು ಹರಿಸುವ ವ್ಯವಸ್ಥೆ ಮಾಡಲಾಗುವುದು. ಅರ್ಹರಿದ್ದು ಸಹ ಗ್ಯಾರಂಟಿ ಯೋಜನೆಗಳ ಉಪಯೋಗ ಪಡೆಯದವರು ಈ ಸಮಾವೇಶವನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.

ತಹಶೀಲ್ದಾರ್ ರಾಜೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಮೀಕ್ಷೆಗಳ ಪ್ರಕಾರ ಸಹಾಯಧನ ನೀಡುವುದರಿಂದ ಜನರ ಜೀವನಮಟ್ಟ ಸುಧಾರಿಸಲಿದೆ ಎಂಬ ಮಾಹಿತಿಯಿದೆ. ಗ್ರಾಮೀಣ ಭಾಗದ ಶಾಲಾ ಮಕ್ಕಳ ಹಾಜರಾತಿಯೂ ಹೆಚ್ಚಳವಾಗಿದೆ. ಈಗಾಗಲೇ ತಾಲೂಕಿನಲ್ಲಿ 65 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಸರ್ಕಾರದ ಭಾಗ್ಯಗಳಿಂದ ಅನುಕೂಲವಾಗಿದೆ. ಅವಕಾಶವಂಚಿತ ಅರ್ಹ ಫಲಾನುಭವಿಗಳು ಸೂಕ್ತ ದಾಖಲಾತಿ ಒದಗಿಸಿ ಸೌಲಭ್ಯ ಪಡೆಯಲು ಈ ಕಾರ್ಯಕ್ರಮ ಉಪಯುಕ್ತವಾಗಿದೆ ಎಂದರು. ಚಿತ್ರದುರ್ಗ ಉಪ ವಿಭಾಗಾಧಿಕಾರಿ ಕಾರ್ತಿಕ್ ಮಾತನಾಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿವೆಯಾ ಎಂಬ ಉದ್ದೇಶಕ್ಕೆ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಈ ಸಮಾವೇಶಗಳನ್ನು ನಡೆಸಲಾಗುತ್ತಿದೆ. ಅರ್ಹರಿದ್ದು, ಸಹ ಯೋಜನೆಗಳ ಲಾಭ ಪಡೆಯದವರು ಇಲ್ಲಿನ ಸಹಾಯದ ಕೌಂಟರ್‌ಗಳಲ್ಲಿ ಪರಿಹರಿಸಿಕೊಳ್ಳಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪವಿಭಾಗಾಧಿಕಾರಿ ಕಾರ್ತಿಕ್, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಕುಮಾರ್, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ ವೆಂಕಟೇಶ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಲ್ತಾಫ್ ಅಹಮದ್, ಉಪಾಧ್ಯಕ್ಷೆ ಸುಮಯ್ಯ ಬಾನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ನಾಗೇಂದ್ರ ನಾಯ್ಕ, ಡಾ.ಸುಜಾತಾ, ಕಾಂತರಾಜ್, ಯಲ್ಲದಕೆರೆ ಮಂಜುನಾಥ್, ಮಹಮ್ಮದ್ ಫಕೃದ್ದೀನ್, ಅಯೂಬ್ ಖಾನ್, ಶಿವಣ್ಣ, ಶಿವಕುಮಾರ್, ಗಿರೀಶ್, ಶಾರದಾoಬ ಮುಂತಾದವರು ಉಪಸ್ಥಿತರಿದ್ದರು.