ಕಾಂಗ್ರೆಸ್‌ ಗೆಲುವಿಗೆ ಗ್ಯಾರಂಟಿಗಳೇ ಕಾರಣ

KannadaprabhaNewsNetwork |  
Published : Nov 24, 2024, 01:47 AM IST
23ಎಚ್ಎಸ್ಎನ್17 : ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬೋಸರಾಜು. | Kannada Prabha

ಸಾರಾಂಶ

ಸರ್ಕಾರದ ಅಭಿವೃದ್ಧಿ ಕೆಲಸಗಳು ಹಾಗೂ ಗ್ಯಾರಂಟಿ ಯೋಜನೆಗಳ ಜತೆಗೆ ಸಿಎಂ-ಡಿಸಿಎಂ ಜೋಡಿ ಒಂದಾಗಿ ಮಾಡಿದ ತಂತ್ರಗಾರಿಕೆಯಿಂದ ಈ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಪಡೆದಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಹೇಳಿಕೆ ನೀಡಿದ್ದಾರೆ. ಫಲಿತಾಂಶ ನಮ್ಮ ವಿರುದ್ಧ ಬಂದಿದ್ದರೆ ಜನ ನಮ್ಮ ಪರವಾಗಿದ್ದಾರೆ ಎಂದು ಹೇಳಲು ಆಗುತ್ತಿರಲಿಲ್ಲ. ಈಗ ಬಂದಿರುವ ಫಲಿತಾಂಶ ಇಡೀ ರಾಜ್ಯದ ಜನರ ಅಭಿಪ್ರಾಯ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಸರ್ಕಾರದ ಅಭಿವೃದ್ಧಿ ಕೆಲಸಗಳು ಹಾಗೂ ಗ್ಯಾರಂಟಿ ಯೋಜನೆಗಳ ಜತೆಗೆ ಸಿಎಂ-ಡಿಸಿಎಂ ಜೋಡಿ ಒಂದಾಗಿ ಮಾಡಿದ ತಂತ್ರಗಾರಿಕೆಯಿಂದ ಈ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಪಡೆದಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಹೇಳಿಕೆ ನೀಡಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿ, ಉಪಚುನಾವಣೆ ಬಹಳ ವಿಶೇಷವಾಗಿರುತ್ತದೆ. ಒಂದು ಭಾಗದಲ್ಲಿ ಉಪಚುನಾವಣೆ ಆಗಿದ್ರೆ ತೀರ್ಮಾನ ಬೇರೆ ಬೇರೆ ರೀತಿ ಇರುತ್ತೆ. ಕಲ್ಯಾಣ ಕರ್ನಾಟಕದಲ್ಲಿ ಸಂಡೂರು, ಉತ್ತರ ಕರ್ನಾಟಕದಲ್ಲಿ ಶಿಗ್ಗಾಂವಿ ಹಾಗೂ ಹಳೇ ಮೈಸೂರು ಭಾಗದಲ್ಲಿ ಚನ್ನಪಟ್ಟಣ ಮೂರು ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು, ಮೂರು ಕ್ಷೇತ್ರಗಳ ತೀರ್ಮಾನ ಒಂದಾಗಿ ಬಂದರೆ ಪರ ಅಥವಾ ವಿರೋಧವಾಗಿರಲಿ ಅದು ರಾಜ್ಯದ ಜನರ ಅಭಿಪ್ರಾಯವಾಗಿರುತ್ತದೆ. ಫಲಿತಾಂಶ ನಮ್ಮ ವಿರುದ್ಧ ಬಂದಿದ್ದರೆ ಜನ ನಮ್ಮ ಪರವಾಗಿದ್ದಾರೆ ಎಂದು ಹೇಳಲು ಆಗುತ್ತಿರಲಿಲ್ಲ. ಈಗ ಬಂದಿರುವ ಫಲಿತಾಂಶ ಇಡೀ ರಾಜ್ಯದ ಜನರ ಅಭಿಪ್ರಾಯ ಎಂದರು. ವಿರೋಧ ಪಕ್ಷಗಳು ಈ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದವು. ಬೆಳಿಗ್ಗೆಯಿಂದ ಸಂಜೆಯವರೆಗೆ ಆಧಾರರಹಿತ ಆರೋಪ ಮಾಡುವುದನ್ನು ಪ್ರವೃತ್ತಿ ಮಾಡಿಕೊಂಡಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಈ ಸರ್ಕಾರ ದುರ್ಬಲಗೊಳಿಸಬೇಕು, ಸರ್ಕಾರ ತೆಗೆಯಬೇಕು, ಸರ್ಕಾರ ಉಳಿಯುವುದಿಲ್ಲ ಎಂದು ಪ್ರಚಾರ ಮಾಡಿದ್ದರು. ಜನರು ಅದಕ್ಕೆ ಮನ್ನಣೆ ಕೊಡಲಿಲ್ಲ. ದೇವೇಗೌಡರಿಗೆ, ಕುಮಾರಸ್ವಾಮಿಗೆ ಜನರು ಉತ್ತರ ನೀಡಿದ್ದಾರೆ ಎಂದು ಗುಡುಗಿದರು. ಡಿಕೆಶಿ, ಡಿ.ಕೆ.ಸುರೇಶ್, ಯೋಗೇಶ್ವರ್ ಒಂದಾಗಿದ್ದು ಅನುಕೂಲವಾಯಿತು. ಒಂದು ಜಾತಿಯನ್ನು ಭಾವನಾತ್ಮಕವಾಗಿ ಉತ್ತೇಜಿಸುವ ನಿಟ್ಟಿನಲ್ಲಿ ಚನ್ನಪಟ್ಟಣದಲ್ಲಿ ಚುನಾವಣೆ ಮಾಡಿದ್ದಾರೆ. ಮೊಮ್ಮಗನ ಸಲುವಾಗಿ ಈ ರೀತಿ ಚುನಾವಣೆ ಮಾಡಿದರು, ಕಾರ್ಯಕರ್ತರಾಗಿದ್ದರೆ ಈ ರೀತಿ ಚುನಾವಣೆ ಮಾಡುತ್ತಿರಲಿಲ್ಲ ಎಂದು ಜನ ಹೇಳುತ್ತಿದ್ದರು. ಜನರು ಕೂಡ ಅದೇ ರೀತಿ ತೀರ್ಪು ಕೊಟ್ಟಿದ್ದಾರೆ. ಚುನಾವಣೆ ಫಲಿತಾಂಶ ನೋಡಿದ ನಂತರವಾದರೂ ಜೆಪಿ-ಜೆಡಿಎಸ್ ಅವರು ಸರ್ಕಾರಕ್ಕೆ ಕೆಲಸ ಮಾಡಲು ಅವಕಾಶ ಕೊಡಬೇಕು. ಅದನ್ನು ಬಿಟ್ಟು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಕ್ಫ್ ವಿಚಾರದಲ್ಲಿ ಬಿಜೆಪಿಯವರು 216 ನೋಟಿಸ್ ಕೊಟ್ಟಿದ್ದಾರೆ:ಪ್ರಣಾಳಿಕೆಯಲ್ಲಿ ವಕ್ಫ್ ಆಸ್ತಿ ರಕ್ಷಣೆ ಮಾಡ್ತೀನಿ ಅಂಥ ಹೇಳಿದ್ದರು. ಹಿಂದೂಗಳಿಗೆ ಮಾತ್ರ ಮತ ಹಾಕಿ ಎಂದು ಹೇಳಿ ಜನರನ್ನು ದಾರಿ ತಪ್ಪಿಸುವ ಅನೇಕ ಪ್ರಯತ್ನ ಮಾಡಿದರು. ಇಡೀ ರಾಜ್ಯದ ಜನ ಮೂರು ಉಪಚುನಾವಣೆಗಳ ಮೂಲಕ ಸಮಂಜಸವಾದ ಉತ್ತರ ಕೊಟ್ಟಿದ್ದಾರೆ ಎಂದು ಟಾಂಗ್ ನೀಡಿದರು.ಸಿಎಂ ಬದಲಾವಣೆ ಚರ್ಚೆಗೆ ಸಮಯ ಬಂದಿಲ್ಲ:

ಮುಂದಿನ ಸಿಎಂ ಡಿ.ಕೆ.ಶಿವಕುಮಾರ್‌ ಎಂದು ಕಾರ್ಯಕರ್ತರು ಕೂಗಿದ ವಿಚಾರ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿ, ಅವರಿಗೆ ಆಸೆ ಇರುತ್ತದೆ. ಎಲ್ಲರ ಜೊತೆಯಲ್ಲೂ ಕಾರ್ಯಕರ್ತರು ಇರುತ್ತಾರೆ. ಅವರೀಗ ಈಗ ಅಧ್ಯಕ್ಷರಾಗಿದ್ದಾರೆ. ಅದೆಲ್ಲವು ಉತ್ಸಾಹದಿಂದ ಆಡುವ ಮಾತುಗಳು ಅಷ್ಟೆ. ಕಾಂಗ್ರೆಸ್‌ ಪಕ್ಷಕ್ಕೆ 140 ವರ್ಷ ಇತಿಹಾಸವಿದೆ. ಕೇಂದ್ರ ನಾಯಕತ್ವ ಬಹಳ ಗಟ್ಟಿಯಾಗಿದೆ. ಸಂದರ್ಭ ಬಂದಾಗ ಯಾರನ್ನು, ಎಲ್ಲಿ ಏನು ಮಾಡಬೇಕು, ಯಾವ ರೀತಿ ಮಾಡಬೇಕು? ಯಾರನ್ನು ಮುಂದುವರಿಸಬೇಕು, ಯಾವ ಬದಲಾವಣೆ ಮಾಡಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಆ ಪ್ರಶ್ನೆ ಪ್ರಸ್ತುತ ಇಲ್ಲ. ಕಾರ್ಯಕರ್ತರು ಮಾತನಾಡಿದ್ದಾರೆ ಅಷ್ಟೇ. ಸದ್ಯಕ್ಕೆ ಯಾವುದೇ ಬದಲಾವಣೆಗಳಿಲ್ಲ. ಸರ್ಕಾರ ಉತ್ತಮವಾಗಿ ನಡೆಯುತ್ತಿದೆ. ಸಿಎಂ-ಡಿಸಿಎಂ ಜೋಡಿ, ಅವರು ಒಂದಾಗಿ ಮಾಡಿದ ತಂತ್ರಗಾರಿಕೆಯಿಂದ ಈ ಫಲಿತಾಂಶ ಬಂದಿದೆ ಎಂದರು. ಹಣದ ಬಗ್ಗೆ ಮಾತನಾಡಬಾರದು: ಸರ್ಕಾರ ಹಣದ ಹೊಳೆ ಹರಿಸಿದೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಆ ಜಾಗದಲ್ಲಿ ಯಾರಿದ್ದರೂ ಹಾಗೇ ಹೇಳುತ್ತಾರೆ. ಅವರು ಏನು ಮಾಡಿದರು ಎಂದು ನಮಗೂ ಗೊತ್ತಿದೆ. ಚನ್ನಪಟ್ಟಣದಲ್ಲಿ ಏನು ಮಾಡಿದರು ಎಂದು ನಿಮಗೂ ಗೊತ್ತಿದೆ. ಅವರು ಮಾಡಿದ್ದನ್ನು ನಾವು ಮಾಡಲು ಆಗಲಿಲ್ಲ. ಸಂಡೂರಿನಲ್ಲಿ ಜನಾರ್ಧನ ರೆಡ್ಡಿ ಕರೆದುಕೊಂಡು ಬಂದರು. ಜನಾರ್ದನ ರೆಡ್ಡಿ ಅವರಿಗೆ ಉಸ್ತುವಾರಿ ಕೊಟ್ಟರು. ದುಡ್ಡು ಖರ್ಚು ಮಾಡಲಿ ಎಂದು ಹಾಕಿದರು. ಜನಾರ್ದನ ರೆಡ್ಡಿ ಏಕೆ ಬೇಕಿತ್ತು? ಶ್ರೀರಾಮುಲು ಇದ್ದರು. ಎಲ್ಲಾ ರೀತಿ ಖರ್ಚು ಮಾಡಿದ್ರು ಏನಾಯ್ತು? ಬೊಮ್ಮಾಯಿ ಏನ್ ಕಡಿಮೆ ಖರ್ಚು ಮಾಡಿದ್ದಾರಾ. ನಮಗಿಂತ ಡಬಲ್ ಖರ್ಚು ಮಾಡಿದ್ದಾರೆ. ಜವಾಬ್ದಾರಿ ಇರುವವರು ಹಣದ ಬಗ್ಗೆ ಮಾತನಾಡಬಾರದು ಎಂದು ತಿರುಗೇಟು ನೀಡಿದರು. ಸರ್ಕಾರ ಹೋಗುತ್ತೆ ಅಂತ ದೇವೇಗೌಡರು, ಕುಮಾರಸ್ವಾಮಿ, ಯಡಿಯೂರಪ್ಪ ಹೇಳುತ್ತಾ ಕನಸು ಕಾಣುತ್ತಿದ್ದಾರೆ. ಯಾರು ಏನೇ ಹೇಳಿದರು ಬಿಜೆಪಿ-ಜೆಡಿಎಸ್‌ನವರು ಹೆಚ್ಚು ಹಣ ಖರ್ಚು ಮಾಡಿದರೂ ನಮ್ಮ ನಾಯಕರು ತಂತ್ರಗಾರಿಕೆ ಹೇಳಿಕೊಟ್ಟಿದ್ದಾರೆ ಎಂದು ಕುಟುಕಿದರು. ನಿಖಿಲ್‌ ಕುಮಾರಸ್ವಾಮಿ ಹ್ಯಾಟ್ರಿಕ್ ಸೋಲು ವಿಚಾರ ಕುರಿತು ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರದ್ದು ಹಿಟ್ ಅಂಡ್ ರನ್ ಕೇಸ್ ಆಗಿದ್ದು, ಸಿಎಂ ಇರಲಿ, ಮಾಜಿ ಸಿಎಂ ಇರಲಿ ಏನಾದರೂ ಒಂದು ಹೇಳಿ ಬಿಡ್ತಾರೆ. ಜವಾಬ್ದಾರಿಯುತವಾದ ರಾಜಕಾರಣಿಗಳು ಮಾತನಾಡಿದರೆ ಏನಾದರೂ ಅರ್ಥ ಇರಬೇಕು. ಅವರ ಮಾತುಗಳು ಅವತ್ತಿಗೆ ನಡೆಯುತ್ತದೆ ಅಂದುಕೊಂಡಿದ್ದಾರೆ. ಎಲೆಕ್ಷನ್ ಟೈಂ‌ನಲ್ಲಿ ವಿಡಿಯೋ ವೈರಲ್ ಆಗಿತ್ತು. ದೇವೇಗೌಡರು ಕುಟುಂಬ ಆಡಳಿತ ನಡೆಸಲು, ಅಧಿಕಾರಕ್ಕಾಗಿ ಏನೇನು ಮಾಡುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟುತ್ತೇನೆ ಎಂದಿದ್ದರು, ಮೋದಿ ಪ್ರಧಾನಮಂತ್ರಿ ಆದರೆ ದೇಶ ಬಿಡುತ್ತೇನೆ ಎಂದಿದ್ದರು. ಆದರೆ, ಈಗ ದೇವೇಗೌಡರು ಅದೆಲ್ಲವನ್ನೂ ಮೀರಿ ನಡೆಯುತ್ತಿದ್ದಾರೆ ಎಂದು ಚಾಟಿ ಬೀಡಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌