ಅತಿಥಿ ಬೋಧಕರಿಂದ ಅರೆಬೆತ್ತಲೆ ಹೋರಾಟ

KannadaprabhaNewsNetwork | Published : Dec 29, 2023 1:31 AM

ಸಾರಾಂಶ

ಅತಿಥಿ ಬೋಧಕರು ಕಳೆದ 20-25 ವರ್ಷದಿಂದಲೂ ಕಾರ್ಯ ನಿರ್ವಹಿಸುತ್ತಿದ್ದೇವೆ. ಸೇವೆ ಕಾಯಂಗೆ ಒತ್ತಾಯಿಸಿ ನಿರಂತರ ಹೋರಾಡುತ್ತ ಬಂದಿದ್ದರೂ ಸರ್ಕಾರ ಮಾತ್ರ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ನಮ್ಮಲ್ಲಿ ರ್‍ಯಾಂಕ್ ಬಂದವರು, ಪಿಎಚ್‌ಡಿ, ನೆಟ್‌, ಸ್ಲೆಟ್‌ ಮಾಡಿದವರು, ಚಿನ್ನದ ಪದಕ ಪಡೆದವರಿದ್ದಾರೆ. ಆದರೆ, ವಿದ್ಯೆ, ಪದಕಗಳು ನಮಗೆ ಗೌರವದ ಬಾಳು ತಂದು ಕೊಡದ ಸ್ಥಿತಿ ಇದೆ

ಸೇವೆ ಕಾಯಂಗಾಗಿ ತರಗತಿ ಬಹಿಷ್ಕರಿಸಿ 36 ದಿನದಿಂದ ಪ್ರತಿಭಟನೆ । ನಿರಂತರ ಹೋರಾಟಕ್ಕೂ ಸ್ಪಂದಿಸದ ರಾಜ್ಯ ಸರ್ಕಾರ

ಕನ್ನಡಪ್ರಭ ವಾರ್ತೆ ದಾವಣಗೆರೆ

ಸೇವೆ ಕಾಯಂಗೆ ಒತ್ತಾಯಿಸಿ ಕಳೆದ 36 ದಿನಗಳಿಂದಲೂ ತರಗತಿ ಬಹಿಷ್ಕರಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಹೋರಾಟ ಕೈಗೊಂಡಿರುವ ಅತಿಥಿ ಬೋಧಕರು ಗುರುವಾರ ನಗರದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಡಳಿತ ಭವನದ ಬಳಿ ಬಳಿ ಸಂಘದ ನೇತೃತ್ವದಲ್ಲಿ ತಮ್ಮ 36ನೇ ದಿನದ ಹೋರಾಟದಲ್ಲಿ ಸಂಘದ ಅಧ್ಯಕ್ಷ ಸೇರಿ ಪದಾಧಿಕಾರಿಗಳು ತಮ್ಮ ಸೇವೆ ಕಾಯಂಗೊಳಿಸಲು ಒತ್ತಾಯಿಸಿ ಅಂಗಿಗಳ ಕಳಚಿಟ್ಟು ಘೋಷಣೆಗಳ ಕೂಗಿದರು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಡಾ.ಕೊಸಗಿ ಶ್ಯಾಮಪ್ರಸಾದ, ರಾಜ್ಯದ 430 ಸಪ್ರದ ಕಾಲೇಜುಗಳಲ್ಲಿ 11 ಸಾವಿರಕ್ಕೂ ಅಧಿಕ ಅತಿಥಿ ಬೋಧಕರು ಕಳೆದ 20-25 ವರ್ಷದಿಂದಲೂ ಕಾರ್ಯ ನಿರ್ವಹಿಸುತ್ತಿದ್ದೇವೆ. ಸೇವೆ ಕಾಯಂಗೆ ಒತ್ತಾಯಿಸಿ ನಿರಂತರ ಹೋರಾಡುತ್ತ ಬಂದಿದ್ದರೂ ಸರ್ಕಾರ ಮಾತ್ರ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ನಮ್ಮಲ್ಲಿ ರ್‍ಯಾಂಕ್ ಬಂದವರು, ಪಿಎಚ್‌ಡಿ, ನೆಟ್‌, ಸ್ಲೆಟ್‌ ಮಾಡಿದವರು, ಚಿನ್ನದ ಪದಕ ಪಡೆದವರಿದ್ದಾರೆ. ಆದರೆ, ವಿದ್ಯೆ, ಪದಕಗಳು ನಮಗೆ ಗೌರವದ ಬಾಳು ತಂದು ಕೊಡದ ಸ್ಥಿತಿ ಇದೆ ಎಂದು ವಿಷಾದಿಸಿದರು.

ಸರ್ಕಾರವು ತಾತ್ಕಾಲಿಕ ನೇಮಕಾತಿಯೆಂದು 8 ತಿಂಗಳು, 10 ತಿಂಗಳು ಲೆಕ್ಕಕ್ಕೆ ಅವಧಿ ನಿಗದಿಪಡಿಸಿ, ಪುಡಿಗಾಸಿನ ಗೌರವ ಧನ ನೀಡಿ ಬದುಕನ್ನೇ ಅರೆಬೆತ್ತಲೆ ಮಾಡುತ್ತಿದೆ. ಕಳೆದ 2 ವರ್ಷದಿಂದ ನಮಗೆ ವಿವಿಧ ಹಂತಗಳಲ್ಲಿ ಕನಿಷ್ಟ 26 ಸಾವಿರ ಹಾಗೂ ಗರಿಷ್ಟ 32 ಸಾವಿರ ರು. ಗೌರವಧನ ನೀಡಿ, ದುಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಕರ್ನಾಟಕ ಸರ್ಕಾರವು ಅತಿಥಿ ಉಪನ್ಯಾಸಕರೆಂಬ ಪದನಾಮಕ್ಕೆ ಮುಕ್ತಿ ಕೊಟ್ಟು, ಕಾಯಂ ಉಪನ್ಯಾಸಕರೆಂಬ ಗೌರವದ ಬದುಕು ಕಲ್ಪಿಸಲಿ. ಈ ಮೂಲಕ ಅತಿಥಿ ಎಂಬ ಅರೆಬೆತ್ತಲೆ ವ್ಯವಸ್ಥೆ ನಿರ್ಮೂಲನೆ ಮಾಡಲಿ ಎಂದು ಒತ್ತಾಯಿಸಿದರು.

ಅತಿಥಿ ಉಪನ್ಯಾಸಕರಾದ ಸಂಘದ ಎಸ್.ಶುಭಾ, ಎಂ.ಜಗದೀಶ, ಎಂ.ಕೆ.ಶೀತಲ್, ಸಿದ್ದೇಶ, ಕಳಕಪ್ಪ ಚೌರಿ, ಮೋಹನ, ಜಗದೀಶ, ಹನುಮಂತಪ್ಪ, ಪ್ರವೀಣಕುಮಾರ, ಸಂತೋಷಕುಮಾರ, ವೀರೇಶ, ಡಾ.ಗೋವಿಂದಪ್ಪ, ದೇವೇಂದ್ರಪ್ಪ, ರೇಖಾ, ಶುಭ, ಲಕ್ಷ್ಮಿ, ಚಂದ್ರಿಕಾ, ಪ್ರತಿಭಾ, ವೀಣಾ, ಹಸೀನಾ ಬೇಗಂ, ನರೇಂದ್ರ ರಾಥೋಡ್, ಬಿ.ಪಿ.ರವೀಂದ್ರ, ಅನಂತಾಚಾರಿ, ಡಾ.ಸಿ.ಎಚ್.ಪ್ರವೀಣ ಕುಮಾರ, ಆರ್.ಸಂತೋಷಕುಮಾರ, ಎಂ.ಆರ್.ರಾಘವೇಂದ್ರ, ಬಿ.ಜಿ.ಸಿದ್ದೇಶಪ್ಪ, ಎಸ್.ವೆಂಕಟೇಶ, ಹರೀಶ, ರಂಗನಾಥ, ಇ.ಬೋರೇಶ, ಜಿ.ಬಿ.ಮಂಜುಳಾ, ಇ.ವಿ.ಮಾನಸಾ, ಎಂ.ಎಚ್.ಸ್ಮಿತಾ, ಜಗಳೂರು ಶ್ವೇತಾ, ಸಮ್ರೀನ್ ಬಾನು, ಶ್ವೇತಾ ಹೊಳಲ್ಕೆರೆ, ಅನೀಸ್ ಫಾತಿಮಾ, ಸಮೀನಾ, ಜಿ.ಬಿ.ಅರುಣಕುಮಾರಿ, ಸಮೀನಾ ಎಂ.ರಫೀ, ಇ.ರೇಖಾ, ಟಿ.ಎಸ್.ಲಕ್ಷ್ಮೀದೇವಿ ಇತರರು ಪ್ರತಿಭಟನೆಯಲ್ಲಿದ್ದರು.

ಅಹವಾಲು ಆಲಿಸಿದ ನ್ಯಾಯಾಧೀಶರು

ಸೇವೆ ಕಾಯಂಗೆ ಒತ್ತಾಯಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ್ದ ಸ್ಥಳಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್‌ ನ್ಯಾಯಾಧೀಶ ಮಹಾವೀರ ಎಂ.ಕರೆಣ್ಣವರ್ ಭೇಟಿ ನೀಡಿ, ಅಹವಾಲು ಆಲಿಸಿದರು. ಈ ವೇಳೆ ಅತಿಥಿ ಬೋಧಕರ ಉದ್ದೇಶಿಸಿ ಮಾತನಾಡಿ ಸೇವೆ ಕಾಯಂ ಬೇಡಿಕೆ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಲುಪಿಸಿ, ಸೂಕ್ತ ಕ್ರಮ ಕೈಗೊಳ್ಳಲು ಹೇಳುವೆ. ಆದಷ್ಟು ಬೇಗ ನಿಮ್ಮ ಬೇಡಿಕೆ ಈಡೇರಲಿ ಎಂದು ಹಾರೈಸುವೆ ಎಂದು ತಿಳಿಸಿದರು.

Share this article