ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಇಲಾಖೆ ಡಿಡಿಯಿಂದ ಕಿರುಕುಳ

KannadaprabhaNewsNetwork |  
Published : Jan 22, 2025, 12:34 AM IST
21ಎಚ್ಎಸ್ಎನ್10 : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಹಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೆ. ಕೃಷ್ಣಪ್ಪ. | Kannada Prabha

ಸಾರಾಂಶ

ಸುಮಾರು 490 ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಇಲಾಖೆಯ ಜಂಟಿ ನಿರ್ದೇಶಕರು ವಿನಾಕಾರಣ ನೋಟಿಸ್ ನೀಡುವ ಮೂಲಕ ಪಡಿತರ ಅಂಗಡಿ ಮಾಲೀಕರಿಗೆ ಕಿರುಕುಳ ನೀಡುತ್ತಿದ್ದು, ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಸಹಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೆ. ಕೃಷ್ಣಪ್ಪ ಆಗ್ರಹಿಸಿದರು. ಈ ಹಿಂದೆ ಹಾಸನಕ್ಕೆ ಬರುವ ಮುನ್ನವೇ ಅನೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕೂಡಲೇ ಜಿಲ್ಲಾಧಿಕಾರಿ ಬಗ್ಗೆ ಗಮನಹರಿಸಿ ಜೆಡಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಮಾರು 490 ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಇಲಾಖೆಯ ಜಂಟಿ ನಿರ್ದೇಶಕರು ವಿನಾಕಾರಣ ನೋಟಿಸ್ ನೀಡುವ ಮೂಲಕ ಪಡಿತರ ಅಂಗಡಿ ಮಾಲೀಕರಿಗೆ ಕಿರುಕುಳ ನೀಡುತ್ತಿದ್ದು, ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಸಹಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೆ. ಕೃಷ್ಣಪ್ಪ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತಾಡಿದ ಅವರು, ಹಾಸನ ಜಿಲ್ಲೆಯ ಆಹಾರ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಹಣ ವಸೂಲು ಮಾಡುವುದು. ಬ್ಲ್ಯಾಕ್‌ಮೇಲ್ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿರುವ ಹಾಸನ ಜಿಲ್ಲೆಯ ಆಹಾರ ಇಲಾಖೆಯ ಜಂಟಿ ನಿರ್ದೇಶಕ, ಈ ಹಿಂದೆ ಹಾಸನಕ್ಕೆ ಬರುವ ಮುನ್ನವೇ ಅನೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕೂಡಲೇ ಜಿಲ್ಲಾಧಿಕಾರಿ ಬಗ್ಗೆ ಗಮನಹರಿಸಿ ಜೆಡಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಿಡಿಕಾರಿದರು.

ಪ್ರಸ್ತುತ ಸರ್ವರ್ ಸಮಸ್ಯೆ ಬಗೆಹರಿಸಿ ಹೊಸ ಸರ್ವರ್ ಅಳವಡಿಸಿರುವುದರಿಂದ ನ್ಯಾಯಬೆಲೆ ಅಂಗಡಿ ಮಾಲೀಕರು ಬಾಗಿಲು ತೆರೆದ ಕೂಡಲೇ ಎಲ್ಲಾ ಪಡಿತರ ಕಾರ್ಡುದಾರರು ಬಂದು 2-3 ದಿನಗಳಲ್ಲಿ ಪಡಿತರ ಪಡೆದುಕೊಂಡು ಹೋಗುತ್ತಿದ್ದಾರೆ. ಆದರೆ ಜಂಟಿ ನಿರ್ದೇಶಕರು ಕಾರಣ ಕೇಳಿ ನೋಟಿಸ್ ನೀಡಿ ಕನಿಷ್ಠ 10 ದಿನದೊಳಗೆ ವಿತರಣೆ ಮಾಡಿದವರಿಗೆ ನೋಟಿಸ್ ಜಾರಿ ಮಾಡಿ ನ್ಯಾಯಬೆಲೆ ಅಂಗಡಿಯ ಠೇವಣಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ತಿಳಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಪಡಿತರ ಕಾರ್ಡುದಾರರು ಎಲ್ಲರೂ ಪಡಿತರ ಪಡೆದುಕೊಂಡು ಮೇಲೆ ಬಾಗಿಲು ತೆರೆದರೆ ಅದು ಆನ್‌ಲೈನ್‌ನಲ್ಲಿ ತೋರಿಸಿರುವುದಿಲ್ಲ. ಸಾರ್ವಜನಿಕರು 30ನೇ ತಾರೀಖಿನವರೆಗೆ ಸಾರ್ವಜನಿಕರಿಗೆ ಪಡಿತರ ನೀಡುವುದಾಗಿ ತಿಳಿಸಿದರೂ ಸಹ ಒಮ್ಮೆಲೆ ಬಂದು ಬಯೋ ನೀಡಿ ಅವರ ಪಡಿತರವನ್ನು ಪಡೆದುಕೊಳ್ಳುತ್ತಿರುತ್ತಾರೆ. ಆದ ಕಾರಣ ಕನಿಷ್ಠ 10 ದಿನಗಳಿಗಿಂತ ಹೆಚ್ಚು ದಿವಸ ನ್ಯಾಯಬೆಲೆ ಅಂಗಡಿ ಬಾಗಿಲು ತೆರೆಯಲು ಸಾಧ್ಯವಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇಷ್ಟೆಲ್ಲಾ ಬೆಳವಣಿಗೆಯಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರ ದೋಷ ಇರುವುದಿಲ್ಲ. ಹಾಗೂ ಪಡಿತರ ಪಡೆದಿರುವುದಿಲ್ಲ ಎಂದು ಕಾರ್ಡುದಾರರು ಯಾರೂ ಸಹ ದೂರನ್ನು ನೀಡಿಲ್ಲ. ಆದುದರಿಂದ ಈ ರೀತಿ ಕಾರಣ ಕೇಳಿ ನೋಟಿಸ್ ನೀಡಿ ತೊಂದರೆ ಕೊಡಬಾರದೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರು.

ಸುಮಾರು 6 ವರ್ಷದಿಂದ ಇ.ಕೆ.ವೈ.ಸಿ. ಮಾಡಿದ ಹಣ ಬಿಡುಗಡೆ ಆಗದ ಬಗ್ಗೆ ಮಾನ್ಯ ಜಂಟಿ ನಿರ್ದೇಶಕರು ಕ್ರಮ ಒಳಗೊಂಡಿರುವುದಿಲ್ಲ ಮತ್ತು ಋಣಾತ್ಮಕದ ಬಗ್ಗೆ ದಂಡ ವಸೂಲಿ ಮಾಡಲು ನೋಟೀಸ್‌ನ್ನು ನೀಡಿದ್ದಾರೆ. ಆದರೆ ತಾಂತ್ರಿಕ ದೋಷದಿಂದ ಋಣಾತ್ಮಕ ವ್ಯತ್ಯಾಸವಾಗಿರುತ್ತದೆ, ಅದು ದುರುಪಯೋಗವಾಗಿರುವುದಿಲ್ಲ. ಆದ್ದರಿಂದ ಮಾಲೀಕರಿಗೆ ಮಾನಸಿಕವಾಗಿ ತೊಂದರೆಯಾಗಿರುತ್ತದೆ ಎಂದು ತಮ್ಮ ಅಳಲು ತೋಡಿಕೊಂಡರು .

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಚನ್ನಕೇಶವಗೌಡ, ದಾಮೋದರ, ಮೇಘನ, ಜಯಣ್ಣ, ಶ್ರೀ ಕಂಠಯ್ಯ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''