ರಾಜಕೀಯ ಜೀವನದಲ್ಲಿ ಬ್ಲಾಕ್ ಮೇಲ್ ಮಾಡಿಕೊಂಡೇ ಬಂದಿರುವ ಮಾಜಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಮತ್ತೆ ಅಧಿಕಾರಕ್ಕೆ ಬರುವ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಲೇವಡಿ ಮಾಡಿದರು.
ಮದ್ದೂರು: ರಾಜಕೀಯ ಜೀವನದಲ್ಲಿ ಬ್ಲಾಕ್ ಮೇಲ್ ಮಾಡಿಕೊಂಡೇ ಬಂದಿರುವ ಮಾಜಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಮತ್ತೆ ಅಧಿಕಾರಕ್ಕೆ ಬರುವ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಲೇವಡಿ ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಅವತಾರಗಳು, ನಾಟಕಗಳು, ಕಣ್ಣೀರನ್ನು ನೋಡಿರುವ ರಾಜ್ಯದ ಜನ ತಿರಸ್ಕಾರ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಈ ಸರ್ಕಾರವನ್ನು ಬೀಳಿಸುವ ಅವರ ಕನಸು ಈಡೇರುವುದಿಲ್ಲ ಎಂದರು. ಅಧಿಕಾರವಿಲ್ಲದೇ ನಿರುದ್ಯೋಗಿಗಳಾಗಿರುವ ಅವರನ್ನು ಜನರು ಶಾಶ್ವತವಾಗಿ ಮನೆಗೆ ಕಳುಹಿಸುವ ದಿನಗಳು ದೂರವಿಲ್ಲ. ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನನ್ನ ಸ್ನೇಹಿತರಾಗಿದ್ದರೂ ತಮ್ಮ ರಾಜಕೀಯ ನಿರ್ಧಾರದಿಂದ ಅಧಿಕಾರವಿಲ್ಲದೇ ನಿರುದ್ಯೋಗಿಯಾಗಿದ್ದಾರೆ ಎಂದು ಟೀಕಿಸಿದರು. ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕಾವೇರಿ ನೀರು ನಿರ್ವಹಣ ಮಂಡಳಿ ಅದರದ್ದೆ ಆದ ನಿಯಮದಂತೆ ಆದೇಶ ನೀಡುತ್ತದೆ. ಅದನ್ನು ತಡೆಯಲು, ತಪ್ಪಿಸುವುದಕ್ಕೆ ಆಗುವುದಿಲ್ಲ. ಇದರಲ್ಲಿ ಸರ್ಕಾರ ತೆಗೆದುಕೊಳ್ಳುವ ನಿಲುವು ಮುಖ್ಯವಾಗಿದೆ. ನಮ್ಮ ಸರ್ಕಾರ ಜಿಲ್ಲೆಯ ರೈತರಿಗೆ ನ್ಯಾಯ ಕೊಡಿಸಲು ದೊಡ್ಡ ಮಟ್ಟದಲ್ಲಿ ವಕೀಲರ ಜೊತೆ ಚರ್ಚಿಸಿ ಮೇಲ್ಮನವಿ ಸಲ್ಲಿಸಿದೆ ಎಂದರು. ಮಳೆ ಕಡಿಮೆಯಾಗಿದ್ದರಿಂದ ಲೋಡ್ ಶೆಡ್ಡಿಂಗ್ ಜಾರಿಯಾಗಿದೆ. ಇಷ್ಟು ದಿನ ಇಲ್ಲದ ಸಮಸ್ಯೆ ಈಗ ಆಗಿದೆ ಎಂದರೆ ಅದನ್ನು ಸರ್ಕಾರದ 6ನೇ ಕತ್ತಲ ಭಾಗ್ಯ ಎನ್ನಲಾಗುದು. ಇದು ಆಕಸ್ಮಿಕವಾಗಿ ಉಂಟಾದ ಸಮಸ್ಯೆಯಾಗಿದೆ. ಈ ಬಗ್ಗೆ ಸರ್ಕಾರ ಕ್ರಮ ವಹಿಸಲಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.