ಆಲೂರಿನಲ್ಲಿ ಎಚ್.ಡಿ. ಕುಮಾರಸ್ವಾಮಿಗೆ ಜೆಡಿಎಸ್ ಮುಖಂಡರ ಮನವಿ

KannadaprabhaNewsNetwork | Published : Dec 25, 2024 12:47 AM

ಸಾರಾಂಶ

ಆಲೂರು ತಾಲೂಕಿನ ಅಭಿವೃದ್ಧಿಗೆ ಸ್ಪಂದಿಸುವಂತೆ ಆಲೂರು-ಸಕಲೇಶಪುರ ಕ್ಷೇತ್ರದ ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್. ಮಂಜೇಗೌಡ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಲಿಖಿತ ಮನವಿ ಪತ್ರಗಳನ್ನು ಸಲ್ಲಿಸಿದರು.

ಆಲೂರು ತಾಲೂಕಿನಲ್ಲಿ ಆಗಬೇಕಾಗಿರುವ ಯೋಜನೆಗಳ ಅನುಷ್ಠಾನ ಜಾರಿಗೆ ಆಗ್ರಹ

ಕನ್ನಡಪ್ರಭ ವಾರ್ತೆ ಆಲೂರು

ತಾಲೂಕಿನಲ್ಲಿ ಆಗಬೇಕಾಗಿರುವ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ ಮತ್ತು ಜಾರಿಗೆ ಸಂಬಂಧಪಟ್ಟಂತೆ ವಿಶೇಷ ಆಸಕ್ತಿ ವಹಿಸಿ ತಾಲೂಕಿನ ಅಭಿವೃದ್ಧಿಗೆ ಸ್ಪಂದಿಸುವಂತೆ ಆಲೂರು-ಸಕಲೇಶಪುರ ಕ್ಷೇತ್ರದ ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್. ಮಂಜೇಗೌಡ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಲಿಖಿತ ಮನವಿ ಪತ್ರಗಳನ್ನು ಸಲ್ಲಿಸಿದರು.

ಸಕಲೇಶಪುರದಲ್ಲಿ ಆಯೋಜನೆಗೊಂಡಿದ್ದ ಕಾಫಿ ಬೆಳೆಗಾರರ ಒಕ್ಕೂಟದ ಸಭೆಗೆ ಆಗಮಿಸಲು ರಸ್ತೆ ಮಾರ್ಗವಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ಹಾಸನ-ಸಕಲೇಶಪುರ ಮಾರ್ಗಮಧ್ಯದ ಪಾಳ್ಯ ಗ್ರಾಮದಲ್ಲಿ ಕೇಂದ್ರ ಸಚಿವರನ್ನ ಭೇಟಿ ಮಾಡಿದ ಜೆಡಿಎಸ್ ಪಕ್ಷದ ಮುಖಂಡರ ನಿಯೋಗವು ಕೇಂದ್ರ ಸರ್ಕಾರದಿಂದ ತಾಲೂಕಿಗೆ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ಹಾಗೂ ಹಾಲಿ ಚಾಲ್ತಿಯಲ್ಲಿರುವ ಕಾಮಗಾರಿಗಳ ಶೀಘ್ರ ಮುಕ್ತಾಯಕ್ಕೆ ಮನವಿ ಸಲ್ಲಿಸಿದರು.

ಕಳೆದ ಒಂದು ವರ್ಷದಿಂದ ಆಲೂರು ಪಟ್ಟಣದ ಹಂತನಮನೆ ರೈಲ್ವೆ ನಿಲ್ದಾಣದಲ್ಲಿ ರೈಲುಗಾಡಿಗಳ ನಿಲುಗಡೆಗೆ ಅವಕಾಶವಿತ್ತು. ಆದರೆ ಕಳೆದ 10-15 ದಿನಗಳಿಂದ ದಿಢೀರಾಗಿ ರೈಲು ನಿಲುಗಡೆಯನ್ನ ರದ್ದುಪಡಿಸಿರುವುದನ್ನು ಕೇಂದ್ರ ಸಚಿವರ ಗಮನಕ್ಕೆ ತಂದಾಗ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಸ್ಥಳದಲ್ಲಿಯೇ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ, ಆಲೂರು ತಾಲೂಕು ಕೇಂದ್ರದಲ್ಲಿ ರೈಲ್ವೆ ಇಲಾಖೆಯು ಯಾವುದೇ ಆದಾಯದ ನಿರೀಕ್ಷೆ ಮಾಡದೆ ಸಾರ್ವಜನಿಕರ ಅನುಕೂಲದ ಉದ್ದೇಶದಿಂದ ರೈಲು ನಿಲುಗಡೆಯನ್ನು ಮಾಡಬೇಕಾಗಿ ಚರ್ಚಿಸಿದ್ದರಿಂದ ಕೇಂದ್ರ ರೈಲ್ವೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ದೂರವಾಣಿಯಲ್ಲಿ ಸಮ್ಮತಿ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅದೇ ರೀತಿ ಆಲೂರು ತಾಲೂಕಿನ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಹುದ್ದೆಯು ಖಾಲಿ ಇದ್ದು ವಕೀಲರು ಹಾಗೂ ಸಾರ್ವಜನಿಕರಿಗೆ ತುಂಬಾ ಸಮಸ್ಯೆ ಉಂಟಾಗುತ್ತಿರುವುದನ್ನು ಗಮನಕ್ಕೆ ತಂದ ನಿಯೋಗವು, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಮತ್ತು ತಂತಿ ಇಲಾಖೆಯ ಆಲೂರು ತಾಲೂಕಿನ ಅಂಚೆ ಕಚೇರಿಯು ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಾಲೂಕಿನಲ್ಲಿ ಸ್ವಂತ ಜಾಗವನ್ನು ಹೊಂದಿದ್ದರೂ ಕೂಡ ಸ್ವಂತ ಕಟ್ಟಡದ ನೆಲೆ ಇಲ್ಲದಿರುವುದನ್ನು ಕೂಡ ಗಮನಕ್ಕೆ ತಂದರು ಇವೆಲ್ಲ ಸಮಸ್ಯೆಗಳನ್ನು ಆಲಿಸಿದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಶೀಘ್ರದಲ್ಲೇ ಎಲ್ಲ ಸಮಸ್ಯೆ ಹಾಗೂ ಮನವಿಗಳಿಗೆ ಸ್ಪಂದಿಸಿ ಪರಿಹಾರ ದೊರಕಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡರಾದ ಬಿ.ಸಿ ಶಂಕರಾಚಾರ್, ಹಾಸನ ಹಾಲು ಒಕ್ಕೂಟದ ನಿರ್ದೇಶಕ ಪಿ.ಎಲ್ ನಿಂಗರಾಜು, ತಾ.ಪಂ ಸಿ.ವಿ ಲಿಂಗರಾಜು,ಪಾಳ್ಯ ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರಕಾಶ್ ಮುಖಂಡರಾದ ಜಯಪ್ಪ, ಯೋಗೇಶ್, ಕೆ.ವಿ ಮಲ್ಲಿಕಾರ್ಜುನ,ಅಶ್ವಥ್, ಮಂಜೇಗೌಡ, ಪರಮೇಶ್, ಗೋಪಿನಾಥ್ ಇದ್ದರು.

Share this article