ಕನ್ನಡಪ್ರಭ ವಾರ್ತೆ ಮೈಸೂರು
ದಾಸಶ್ರೇಷ್ಠ ಸಂತಕವಿ ಶ್ರೀ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಕಂದಾಚಾರ, ಮೌಢ್ಯವನ್ನು ಹೋಗಲಾಡಿಸಲು ಮುಂದಾಗಿದ್ದರು. ಅಂತಹ ಮಹಾನ್ ವ್ಯಕ್ತಿಯ ಕೀರ್ತನೆಗಳು ಇಡೀ ದೇಶಕ್ಕೆ ಮಾದರಿ ಎಂದು ಶಾಸಕ ಕೆ. ಹರೀಶ್ ಗೌಡ ತಿಳಿಸಿದರು.ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಂತ ಶ್ರೀ ಕನಕದಾಸರ ಜಯಂತ್ಯುತ್ಸವ ಸಮಿತಿ ಸಂಯುಕ್ತವಾಗಿ ಸೋಮವಾರ ಆಯೋಜಿಸಿದ್ದ ದಾಸಶ್ರೇಷ್ಠ ಸಂತ ಕವಿ ಶ್ರೀ ಕನಕದಾಸರ 537ನೇ ಜಯಂತಿಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಒಂದು ಉತ್ತಮ ಕುಟುಂಬದಲ್ಲಿ ಜನಿಸಿದಂತಹ ಕನಕದಾಸರು ಸಮಾಜದಲ್ಲಿರುವ ತಾರತಮ್ಯ ಹಾಗೂ ಮೌಢ್ಯತೆಗಳನ್ನು ತಿಳಿದು, ತಮ್ಮ ಸಿರಿತನವನ್ನು ತ್ಯಜಿಸಿ ಬಡವರಿಗಾಗಿ ಬಂದವರು. ಕನಕದಾಸರ ಪ್ರಸಿದ್ಧ ಕೀರ್ತನೆಯಾದ ಕುಲ-ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲವನ್ನೇನಾದರೂ ಬಲ್ಲಿರಾ? ಇದು ಇಂದಿಗೂ ಪ್ರಸ್ತುತವಾದ ಮಾತಾಗಿದೆ ಎಂದರು.ಕನಕದಾಸರ ಹಾದಿಯಲ್ಲಿಯೇ ಇಂದು ಸರ್ಕಾರವು ಯಾವುದೇ ಜಾತಿ, ಧರ್ಮವನ್ನು ನೋಡದೆ, ರಾಜ್ಯದಲ್ಲಿರುವ ಪ್ರತಿಯೊಬ್ಬರಿಗೂ ಸೌಕರ್ಯವನ್ನು ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧಕ್ಷತೆ ಹಾಗೂ ಪ್ರಾಮಾಣಿಕವಾಗಿ ಆಡಳಿತ ಮಾಡುತ್ತಿದ್ದಾರೆ. ಯಾವುದೇ ಸಮಾಜದ ಜನರಿಗೆ ತೊಂದರೆಯಾಗದಂತೆ ಎಲ್ಲರ ಪರ ನಿಂತು ಕೆಲಸ ಮಾಡುತ್ತಿದ್ದಾರೆ ಎಂದರು.
ಶ್ರದ್ದೆ ಭಕ್ತಿಯಿಂದ ಕನಕದಾಸರು ಶ್ರೀ ಕೃಷ್ಣನ ದರ್ಶನ ಪಡೆದಂತೆ, ಸಿದ್ದರಾಮಯ್ಯ ಅವರ ದಕ್ಷ ಹಾಗೂ ಪ್ರಾಮಾಣಿಕ ಆಡಳಿತದಿಂದ ರಾಜ್ಯವನ್ನು ದೇಶದಲ್ಲಿಯೇ ಉತ್ತಮ ಸ್ಥಾನಕ್ಕೆ ಕೊಂಡೊಯ್ದು ಇಡೀ ರಾಷ್ಟ್ರವೇ ಕರ್ನಾಟಕವನ್ನು ತಿರುಗಿ ನೋಡುವಂತೆ ಮಾಡುತ್ತಾರೆ ಎಂದು ಅವರು ಹೇಳಿದರು.ಕನಕದಾಸರ ವ್ಯಕ್ತಿತ್ವ ಎಲ್ಲರಿಗೂ ಮಾದರಿ:
ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, 500 ವರ್ಷಗಳಿಗಿಂತಲೂ ಹಿಂದೆ ಜನಿಸಿದಂತಹ ಕನಕದಾಸ ಎಂಬ ಮಹಾನ್ ವ್ಯಕ್ತಿಯು ತನ್ನೆಲ್ಲ ಸಿರಿತನವನ್ನು ಬಿಟ್ಟು ಬಡವರ ಕಷ್ಟವನ್ನು ಅರಿತು ಅವರಿಗೆ ಸ್ಪಂದಿಸಲು ಮುಂದಾದರು. ಇಂತಹ ವ್ಯಕ್ತಿಯ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದು ತಿಳಿಸಿದರು.ಸುಮಾರು 316 ಕೀರ್ತನೆಗಳನ್ನು ರಚಿಸಿರುವ ಕನಕದಾಸರು, ತಮ್ಮಲ್ಲಿರುವ ಶ್ರದ್ದೆ, ಭಕ್ತಿಯಿಂದ ಶ್ರೀ ಕೃಷ್ಣನ ದರ್ಶನವನ್ನು ಪಡೆದರು. ಇದಕ್ಕೆ ಸಾಕ್ಷಿಯಾಗಿ ಇಂದು ಉಡುಪಿಯಲ್ಲಿರುವ ಕನಕನ ಕಿಂಡಿಯನ್ನು ಕಾಣಬಹುದಾಗಿದೆ. ಇದರಿಂದ ಕನಕದಾಸರ ಸಾಧನೆ, ಶಕ್ತಿಯು ತಿಳಿಯುತ್ತದೆ ಎಂದರು.
ಮೈಸೂರಿನ ಶ್ರೀ ಕಾಗಿನೆಲೆ ಕನಕ ಗುರುಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ವಿಧಾನಪರಿಷತ್ತು ಸದಸ್ಯ ಸಿ.ಎನ್. ಮಂಜೇಗೌಡ, ಸಂತ ಶ್ರೀ ಕನಕದಾಸ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷರಾದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಸಾಹಿತಿ ಪ್ರೊ.ಸಿ. ನಾಗಣ್ಣ, ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ, ಪಾಲಿಕೆ ಮಾಜಿ ಸದಸ್ಯ ಎಂ. ಶಿವಣ್ಣ, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಕೆ.ಎಂ. ಗಾಯತ್ರಿ‘ಯಾವುದೇ ವ್ಯಕ್ತಿಗೆ ಶಕ್ತಿ ಬರಬೇಕೆಂದರೆ ಸಾಧನೆ ಮುಖ್ಯವಾಗುತ್ತದೆ. ಸಾಧನೆ ಮಾಡಲು ಪರಿಶ್ರಮ ಮುಖ್ಯ. ತಮ್ಮನ್ನು ತಾವು ನಂಬಿ ಇತರರಿಗೆ ಕೇಡನ್ನು ಬಯಸದೆ ಉತ್ತಮ್ಮ ದಾರಿಯಲ್ಲಿ ತನ್ನ ಸಾಧನೆಯ ದಾರಿಯಲ್ಲಿ ನಡೆದರೆ ಅದಕ್ಕೆ ಒಳ್ಳೆಯ ಪ್ರತಿಫಲ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.’
- ಡಾ.ಡಿ. ತಿಮ್ಮಯ್ಯ, ವಿಧಾನಪರಿಷತ್ ಸದಸ್ಯ