- 10-12 ಲಕ್ಷ ರು. ಲಂಚ ಆರೋಪ । ಕೇಂದ್ರ ಕಚೇರಿಯಿಂದಲೇ ಅಭ್ಯರ್ಥಿಗಳಿಗೆ ಕರೆ? । ಅಣ್ಣ, ಅಪ್ಪ, ಅಮ್ಮ ಹೆಸರಿನಿಂದ ಬಂದಿದ್ದ ಅರ್ಜಿ
ಕನ್ನಡಪ್ರಭ ವಾರ್ತೆ ಯಾದಗಿರಿ
545 ಹುದ್ದೆಗಳ ಪಿಎಸ್ಐ ನೇಮಕಾತಿ ಹಗರಣ ಬಯಲಿಗೆಳೆದಿದ್ದ "ಕನ್ನಡಪ್ರಭ " ಇದೀಗ ನೀರಾವರಿ ಇಲಾಖೆಯಲ್ಲಿ ಬ್ಯಾಕ್‌ಲಾಗ್ ಹುದ್ದೆಗಳ ನೇಮಕದಲ್ಲೂ ನಡೆದಿದ್ದ ಭಾರಿ ಗೋಲ್ಮಾಲ್ ಬಯಲಿಗೆಳೆದಿದೆ.ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋವಿಂದ ಕಾರಜೋಳ ಅವರು ಜಲಸಂಪನ್ಮೂಲ ಇಲಾಖೆ ಸಚಿವರಾಗಿದ್ದ ವೇಳೆ ನಡೆದಿದ್ದ ಈ ನೇಮಕಾತಿಗಳಲ್ಲಿ ಭಾರಿ ಅವ್ಯವಹಾರದ ವಾಸನೆ ಮೂಡಿ ಬಂದಿತ್ತು. ನಕಲಿ ಅಂಕಪಟ್ಟಿ ಹಾಗೂ ದಾಖಲೆಗಳನ್ನು ನೀಡಿ ಅನರ್ಹ ಅಭ್ಯರ್ಥಿಗಳು ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದರು ಎಂಬ ಆರೋಪಗಳ ಹಿನ್ನೆಲೆಯಲ್ಲಿ, "ಕನ್ನಡಪ್ರಭ "ದಲ್ಲಿ ಈ ವರದಿಗಳು ಸಂಚಲನ ಮೂಡಿಸಿದ್ದವು.
ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ಬೀದರ್, ಕೊಪ್ಪಳ ಮುಂತಾದೆಡೆ ಅಭ್ಯರ್ಥಿಗಳ ಪೈಕಿ ಕೆಲವರು ನಕಲಿ ದಾಖಲೆಗಳ ಮೂಲಕ ಆಯ್ಕೆಯಾಗುವ ಪ್ರಯತ್ನ ನಡೆಸಿದ್ದು, ಇದಕ್ಕೆ ಇಲಾಖೆಯಲ್ಲೇ ಮಧ್ಯವರ್ತಿಗಳು ಇದ್ದಾರೆ ಎಂಬ ಆರೋಪಗಳು ದಟ್ಟವಾಗಿ ಕೇಳಿ ಬಂದಿದ್ದವು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೂ ದೂರು ನೀಡಿದ್ದ ನೊಂದ ಅಭ್ಯರ್ಥಿಗಳು ತನಿಖೆಗೆ ಆಗ್ರಹಿಸಿದ್ದರು. ಆದರೆ, ತನಿಖೆಗೆ ಆಸಕ್ತಿ ತೋರದ ನೀರಾವರಿ ಇಲಾಖೆ ಅಧಿಕಾರಿಗಳು ಹಾರಿಕೆಯ ಉತ್ತರ ನೀಡಿ ಜಾರಿಕೊಳ್ಳಲೆತ್ನಿಸಿದರಲ್ಲದೆ, ಇದೇ ಜೂ.27 ರಂದು ಅಂತಿಮ ತಾತ್ಕಾಲಿಕ ಪಟ್ಟಿ ಪ್ರಕಟಿಸಿದ್ದರು. ಯಾವಾಗ ಹಗರಣದ ವಾಸನೆ ಹೆಚ್ಚಾಯಿತೋ, ಆಗ ತನಿಖೆಗೆ ವಹಿಸಿದಾಗ, ಈಗ 48 ಜನರ ಬಂಧನದೊಂದಿಗೆ ಆರಂಭವಾಗಿದೆ.
.....ಬಾಕ್ಸ್....
ರಾಜ್ಯ ಜಲಸಂಪನ್ಮೂಲ ಇಲಾಖೆಯು 2022 ರ ಸೆಪ್ಟೆಂಬರಿನಲ್ಲಿ ಗ್ರೂಪ್-ಸಿ ವೃಂದದ ದ್ವಿತೀಯ ದರ್ಜೆ ಸಹಾಯಕರ ಪರಿಶಿಷ್ಟ ಜಾತಿ ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆಂದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆದಿತ್ತು. ಒಟ್ಟು 182 ಎಸ್ಡಿಸಿ ಬ್ಯಾಕ್‌ಲಾಗ್ ಹುದ್ದೆಗಳಿಗೆ 1.12 ಲಕ್ಷ ಅರ್ಜಿಗಳು ಸ್ವೀಕೃತಗೊಂಡಿದ್ದವು. ಈ ಅರ್ಜಿಗಳ ಪೈಕಿ 1:2 ರ ಪರಿಶೀಲನಾ ಅರ್ಹತಾ ಪಟ್ಟಿಯನ್ನು ಡಿ.5, 2022 ರಂದು ಬಿಡುಗಡೆಗೊಳಿಸಿ, 364 ಜನರ ಅಭ್ಯರ್ಥಿಗಳ ಹೆಸರುಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಿತ್ತು.
ಪರಿಶೀಲನಾ ಅರ್ಹತಾ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡ ಭಾಗಶಃ ಅಭ್ಯರ್ಥಿಗಳ ಪಿಯುಸಿ ಅಥವಾ ತತ್ಸಮಾನ ಶೈಕ್ಷಣಿಕ ಅಂಕಗಳು ಅನುಮಾನ ಮೂಡಿಸಿದ್ದವು. ಉದಾಹರಣೆಗೆ, ಶೇ.100ಕ್ಕೆ ನೂರರಷ್ಟು ಅಂಕ ಪಡೆದ ಅಭ್ಯರ್ಥಿಗಳ ಅರ್ಜಿ ಪರಿಶೀಲಿಸಿದಾಗ, ಪಿಯುಸಿಯಲ್ಲಿ ಒಟ್ಟು 600 ಅಂಕಗಳಿದ್ದಾಗ್ಯೂ ಕೂಡ, ತಾವು ಪಡೆದ ಅಂಕಗಳಷ್ಟೇ ಒಟ್ಟು ಅಂಕಗಳು ಎಂದು ನಮೂದಿಸಿ, ಶೇ.100 ರಷ್ಟು ಅಂಕಗಳ ಪಡೆದಿರುವ ಬಗ್ಗೆ ನಮೂದಿಸಿರುವುದು. ಉದಾಹರಣೆಗೆ, ಅಂದರೆ, 60 ಅಂಕಗಳ ಪಡೆದ ಅಭ್ಯರ್ಥಿ ಅಷ್ಟೇ ಒಟ್ಟು ಅಂಕಗಳು ಎಂದು ನಮೂದಿಸಿದ್ದ. ಇಂತಹ ಅನೇಕ ಪ್ರಮಾದಗಳು ಅಲ್ಲಿದ್ದವು.
ಅರ್ಜಿ ಸಲ್ಲಿಸಿದ ಅಭ್ಯರ್ಥಿಯೊಬ್ಬ ತನ್ನ ಹೆಸರನ್ನು ''''''''ಅಣ್ಣ'''''''' ಎಂದು, ತಂದೆಯ ಹೆಸರು ''''''''ಅಪ್ಪ'''''''' ಹಾಗೂ ತಾಯಿ ಹೆಸರಿನ ಮುಂದೆ ''''''''ಅಮ್ಮ'''''''' ಎಂದು ನಮೂದಿಸಿ, ಓಕೆಓಕೆ @ಜಿಮೇಲ್.ಕಾಮ್ ವಿಳಾಸ ನಮೂದಿದ್ದಾರೆ. ಇಂತಹ ಅರ್ಜಿಗಳನ್ನು ಯಾವ ಮಾನದಂಡದ ಮೇಲೆ ಪರಿಶೀಲನಾ ಅರ್ಹತಾ ಪಟ್ಟಿಗೆ ಸೇರ್ಪಡೆ ಮಾಡಿದ್ದರು ಅನ್ನೋದು ಬಾರಿ ಶಂಕೆ ಮೂಡಿಸಿತ್ತು.
----31ವೈಡಿಆರ್15 : ಡಿ.18, 2022 ರಂದು ಕನ್ನಡಪ್ರಭದಲ್ಲಿ ಪ್ರಕಟಗೊಂಡಿದ್ದ ವರದಿ.
31ವೈಡಿಆರ್16 : ಅಣ್ಣ, ಅಪ್ಪ, ಅಮ್ಮ ಎಂಬ ಹೆಸರಿನ ವಿಚಿತ್ರಗಳಿಂದ ಕೂಡಿದ್ದ ಅರ್ಜಿ.