3 ಲೀಡ್‌.......ಕೂಲಿಕಾರರ ಮಕ್ಕಳ ಪಾಲನೆಗೆ ‘ಕೂಸಿನ ಮನೆ’

KannadaprabhaNewsNetwork | Published : Jan 24, 2024 2:03 AM

ಸಾರಾಂಶ

ಕೂಲಿಗೆ ತೆರಳುವ ಮಹಿಳೆಯರು ತಮ್ಮ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಅವರು ಮನೆಗೆ ಬರವವರೆಗೆ ಕೂಸಿನ ಮನೆಯಲ್ಲಿ ಅವರ ಮಕ್ಕಳ ಪಾಲನ, ಪೋಷಣ ಮಾಡಲಾಗುವುದು

ಕನ್ನಡಪ್ರಭ ವಾರ್ತೆ ಕೆಜಿಎಫ್

ಕೂಲಿ ಕಾರ್ಮಿಕರ ಮಕ್ಕಳ ಲಾಲನೆ-ಪಾಲನೆಗಾಗಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕೂಸಿನ ಮನೆ ಯೋಜನೆಯಡಿ ನಿರ್ಮಿಸಿರುವ ಮನೆಗಳನ್ನು ಸಾಂಕೇತಿವಾಗಿ ಬೇತಮಂಗಲದಲ್ಲಿ ಶಾಸಕಿ ರೂಪಕಲಾ ಶಶಿಧರ್ ಮಂಗಳವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿ, ಕೆಜಿಎಫ್ ತಾಲೂಕಿನಲ್ಲಿ ೧೬ ಗ್ರಾಪಂ, ಪೈಕಿ ೧೨ ಗ್ರಾಪಂ, ಮೊದಲ ಹಂತದಲ್ಲಿ ಅಯ್ಕೆ ಮಾಡಿ ಅಲ್ಲಿ ಕೂಸಿನ ಮನೆಯನ್ನು ನಿರ್ಮಾಣ ಮಾಡಲಾಗಿದ್ದು, ಅವು ಈಗ ಮಕ್ಕಳ ಲಾಲನೆ ಪಾಲನೆಗೆ ಸಿದ್ದವಾಗಿವೆ ಎಂದರು.

ತಾಲೂಕಿನ ವಿವಿಧೆಡೆ ಮನೆ ನಿರ್ಮಾಣ

ರಾಜ್ಯದಲ್ಲಿ ಕೂಲಿ ಕಾರ್ಮಿಕರ ಕುಟುಂಬಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕುಟುಂಬದ ೩ ವರ್ಷದ ಒಳಗಿನ ಮಕ್ಕಳ ರಕ್ಷಣೆಗಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಗ್ರಾಪಂಗಳ ವ್ಯಾಪ್ತಿಯಲ್ಲಿ ಕೂಸಿನ ಮನೆ ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಕೆಜಿಎಫ್ ತಾಲೂಕಿನ ಪಾರಂಡಹಳ್ಳಿ, ಕಮ್ಮಸಂದ್ರ, ಸುಂದರಪಾಳ್ಯ, ವೆಂಗಸಂದ್ರ, ಎನ್.ಜಿ.ಹುಲ್ಕೂರು, ಹುಲ್ಕೂರು, ಬೇತಂಮಗಲ, ಮಾರಿಕುಪ್ಪಂ, ಘಟ್ಟಮಾದಮಂಗಳ, ಜಕ್ಕರನಕುಪ್ಪ, ರಾಮಸಾಗರ, ಕಂಗಾಡ್ಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕೂಸಿನ ಮನೆ ನಿರ್ಮಾಣಗೊಂಡಿವೆ ಎಂದರು.ಸರಕಾರದ ಆದೇಶದಂತೆ ಮೊದಲ ಹಂತದಲ್ಲಿ ೧೨ ಗ್ರಾಪಂಗಳಲ್ಲಿ ಮಕ್ಕಳ ಪೋಷಣೆಯ ಬಗ್ಗೆ ತಾಪಂ, ಮಹಿಳಾ ಮತ್ತು ಕಲ್ಯಾಣ ಅಭಿವೃದ್ದಿ ಇಲಾಖೆ, ಗ್ರಾಪಂನಿಂದ ೫೦ ಮಂದಿ ಕೇರ್ ಟೇಕರ್‌ಗಳಿಗೆ ತರಬೇತಿ ನೀಡಿ ಮಕ್ಕಳ ಪಾಲನಗೆ ಸಿದ್ದರಾಗಿದ್ದಾರೆ. ಶಿಶುಪಾಲನಾ ಕೇಂದ್ರಗಳ ಕುರಿತು ಸಾರ್ವಜನಿಕರ, ಪೋಷಕರ ಕುಂದುಕೊರತೆ ಪರಿಹಾರ ತಿಳಿಸಲು ಸಲಹಾ ಪಟ್ಟಿಗೆ ವ್ಯವಸ್ಥೆ ಮಾಡಲಾಗಿದೆ. ಕೂಲಿಕಾರರ ಮಕ್ಕಳ ಪಾಲನೆ

ಶಿಶುಪಾಲನಾ ಕೇಂದ್ರಗಳ ಮುಖ್ಯ ಉದ್ದೇಶ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮೀನುಗಳಿಗೆ ಕೃಷಿ ಕೆಲಸಕ್ಕೆ ತೆರಳುತ್ತಾರೆ, ಕೂಲಿ ಕಾರ್ಮಿಕರು ಹಾಗೂ ಕೃಷಿ ಕಾರ್ಮಿಕರು ಬಹುತೇಕರು ಬಡ ಕುಟುಂಬದವರಾಗಿದ್ದು, ಪ್ರತಿನಿತ್ಯ ಕೂಲಿ ಕೆಲಸಕ್ಕೆ ತೆರಳುವ ಅನಿವಾರ್ಯತೆ ಇರುತ್ತದೆ, ಇಂತಹ ಕುಟುಂಬದ ಮಹಿಳೆಯರು ತಮ್ಮ ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವುದು ಅಸಾಧ್ಯ. ಈ ಹಿನ್ನೆಲೆಯಲ್ಲಿ ಮಕ್ಕಳ ಲಾಲನೆ, ಪಾಲನೆಗೆಗಾಗಿ ಕೂಸಿನ ಮನೆ ನಿರ್ಮಿಸಲಾಗಿದೆ ಎಂದರು.

ಕೂಲಿಗೆ ತೆರಳುವ ಮಹಿಳೆಯರು ತಮ್ಮ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಅವರು ಮನೆಗೆ ಬರವವರೆಗೆ ಮಗುವಿಗೆ ತಾಯಿ ಹಾಲು ದೊರೆಯುವುದಿಲ್ಲ, ಜೊತೆಗೆ ಪೌಷ್ಟಿಕ ಆಹಾರ ದೊರೆಯುವುದಿಲ್ಲ, ಇದರಿಂದ ಮಕ್ಕಳು ಅಪೌಷ್ಟಿಕತೆಗೆ ಒಳಗಾಗುತ್ತಾರೆ, ಇದರಿಂದ ಗ್ರಾಮೀಣರ ಮಾನಸಿಕ ಆರೋಗ್ಯವು ಹಾಳಾಗುತ್ತದೆ. ಗ್ರಾಮೀಣ ಭಾಗದ ಮಹಿಳೆಯರು ಕೂಸಿನ ಮನೆಯಲ್ಲಿ ೬ ತಿಂಗಳಿಂದ ೩ ವರ್ಷದೊಳಗಿನ ಮಕ್ಕಳನ್ನು ಬಿಟ್ಟು ನೆಮ್ಮದಿಯಿಂದ ಕೆಲಸಕ್ಕೆ ತೆರಳಬಹುದು ಎಂದರು.ಪೌಷ್ಟಿಕ ಆಹಾರ ವಿತರಣೆಗೆ ಸಿದ್ಧತೆ

ಮಕ್ಕಳ ಪ್ರಾರಂಭಿಕ ಬಾಲ್ಯದ ಬೆಳವಣಿಗೆಗೆ ಪೌಷ್ಟಿಕ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ, ಕೂಸಿನ ಮನೆಯಲ್ಲಿ ಮಕ್ಕಳಿಗೆ ಸಿರಿಧಾನ್ಯದಿಂದ ತಯಾರಿಸಿದ ಗಂಜಿ, ಹಾಲು, ಮೊಟ್ಟೆ ಜೊತೆಗೆ ಬೆಳಗ್ಗೆ ಉಪಹಾರ, ಮಧ್ಯಾಹ್ನ ಬಿಸಿಯೂಟ, ಸಂಜೆ ಲಘು ಉಪಹಾರ ನೀಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಕ್ಕಳ ಸಂಖ್ಯೆ ಆಧಾರಿಸಿ ಪೌಷ್ಟಿಕ ಆಹಾರ ವಿತರಣೆ ಮಾಡಲು ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ.

ತಾಲೂಕು ಪಂ, ಇ.ಒ ಮಂಜುನಾಥ್ ಹರ್ತಿ ಮಾತನಾಡಿ, ಕೂಸಿನ ಮನೆಯಲ್ಲಿ ಚಿಕ್ಕ ಮಕ್ಕಳಿಗಾಗಿ ಮಕ್ಕಳ ಸ್ನೇಹಿ ಶೌಚಾಲಯಗಳು ಪ್ರತ್ಯೇಕವಾಗಿ ಇರುತ್ತವೆ, ಮಕ್ಕಳಿಗೆ ಆಟವಾಡಲು ಆಟಿಕೆ ವಸ್ತುಗಳಿವೆ, ವಿಶೇಷ ಚೇತನ ಮಕ್ಕಳಿಗಾಗಿ ಇಳಿಜಾರು ಮತ್ತು ಕೈ-ಹಳಿಗಳ ವ್ಯವಸ್ಥೆ ಇದ್ದು, ಕೇರ್ ಟೇಕರ್ಸ್‌ಗಳು ಮಕ್ಕಳಿಗೆ ಊಟ ಮಾಡಿಸಿ ಮಲಗಿಸುವ ವ್ಯವಸ್ಥೆ ಸಹ ಇರುತ್ತದೆ, ಸಂಜೆ ಲಘು ಉಪಹಾರ ನೀಡಿ ಮಕ್ಕಳನ್ನು ತಮ್ಮ ಪೋಷಕರ ಜೊತೆ ಕಳುಹಿಸಿಕೊಡುವುದು ಕೇರ್ ಟೇಕರ್ಸ್‌ಗಳ ಜವಾಬ್ದಾರಿಯಾಗಿರುತ್ತದೆಂದು ತಿಳಿಸಿದರು.ಈ ಸಂದರ್ಭದಲ್ಲಿ ಸಿಡಿಪಿಒ ರಾಜೇಶ್, ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮಿನಾರಾಯಣ್ ಇದ್ದರು.

Share this article