ಭೂಗಳ್ಳರ ಕಾಟ: ನಿಮ್ಮ ಸ್ವತ್ತಿಗೆ ನೀವೇ ಜವಾಬ್ದಾರರು!

KannadaprabhaNewsNetwork | Published : Jun 1, 2024 12:47 AM

ಸಾರಾಂಶ

ಸತ್ತವರನ್ನು ನಕಲಿ ವ್ಯಕ್ತಿಯ ಮೂಲಕ ಬದುಕಿಸಿ ನಕಲಿ ದಾಖಲೆ ಸೃಷ್ಟಿಸುವ ಭೂಗಳ್ಳರ ಗುಂಪುಗಳು ಮಾಲೂರಲ್ಲಿ ಅದರಲ್ಲೂ ಪುರಸಭೆ ಕಚೇರಿಯಲ್ಲೇ ಕಾರ್ಯ ನಿರ್ವಹಿಸುತ್ತಿದ್ದು, ಪ್ರಭಾಗಳಿಂದಾಗಿ ಪ್ರಕರಣಗಳು ಹೊರಬರುತ್ತಿಲ್ಲ ಎನ್ನಲಾಗಿದೆ

ಕನ್ನಡಪ್ರಭ ವಾರ್ತೆ, ಮಾಲೂರು

ಮಾಲೂರು ಪುರಸಭೆ ವ್ಯಾಪ್ತಿಯಲ್ಲಿ ನಿಮ್ಮ ಹೆಸರಿನಲ್ಲಿ ನಿವೇಶನಗಳಿದ್ದರೆ ಈ ತಕ್ಷಣ ಪುರಸಭೆಯಲ್ಲಿ ನಿಮ್ಮ ದಾಖಲೆ ಪರಿಶೀಲಿಸಿಕೊಂಡು ನಿಮ್ಮ ನಿವೇಶನಕ್ಕೆ ಬೇಲಿ ಹಾಕಿಸಿ. ಇಲ್ಲದಿದ್ದರೆ ಬೆಣ್ಣೆಯಲ್ಲಿ ಕೊದಲು ತೆಗೆಯುವ ಹಾಗೆ ನಿಮ್ಮ ಅರಿವಿಗೆ ಬಾರದಂತೆ ನಿಮ್ಮ ಸೈಟ್ ಪರಭಾರೆಯಾಗುವ ಅಪಾಯವಿದೆ. ವಿಚಿತ್ರವೆಂದರೆ, ಸತ್ತವರನ್ನು ನಕಲಿ ವ್ಯಕ್ತಿಯ ಮೂಲಕ ಬದುಕಿಸಿ ನಕಲಿ ದಾಖಲೆ ಸೃಷ್ಟಿಸುವ ಭೂಗಳ್ಳರ ಗುಂಪುಗಳು ಮಾಲೂರಲ್ಲಿ ಅದರಲ್ಲೂ ಪುರಸಭೆ ಕಚೇರಿಯಲ್ಲೇ ಕಾರ್ಯ ನಿರ್ವಹಿಸುತ್ತಿವೆ. ಇಂತಹ ಭೂಕಳ್ಳತನ ಪ್ರಕರಣಗಳು ನಡೆಯುತ್ತಿದ್ದರೂ ಭೂಗಳ್ಳರ ಪ್ರಭಾವದಿಂದ ಪ್ರಕರಣ ಹೊರಬರುತ್ತಿಲ್ಲ.

ನಿವೇಶನ ಅಕ್ರಮ ಪರಭಾರೆ

ಆದರೆ ಈಗ ಕಾಂಗ್ರೆಸ್ ಮುಖಂಡರೊಬ್ಬರ ನಿವೇಶನವನ್ನೇ ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡಿರುವುದರಿಂದ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಈ ಬಾರಿ ಪುರಸಭೆ ಆಡಳಿತದ ಕೊನೆ ಅಧ್ಯಕ್ಷರಾಗಿದ್ದ ಮಂಜುನಾಥ್ ಹೆಸರು ಈ ನಕಲಿ ದಾಖಲೆ ಸೃಷ್ಟಿ ಪ್ರಕರಣದಲ್ಲಿ ಬಯಲಾಗಿದೆ. ಪುರಸಭೆ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತ ವ್ಯಕ್ತವಾಗಿದೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ಮಧುಸೂಧನ್ ಅವರ ತಾತಾ ಕೋಲ್ಮಿ ರಾಮಯ್ಯ ೨೦೧೧ ರಲ್ಲಿ ಮೃತಪಟ್ಟಿದ್ದಾರೆ. ಆದರೆ ಅವರ ಹೆಸರಿನಲ್ಲಿ ನಕಲಿ ಕೋಲ್ಮಿ ರಾಮಯ್ಯ ಎಂಬ ಹೆಸರಿನ ವ್ಯಕ್ತಿಯನ್ನು ಸೃಷ್ಟಿಸಿ ಅವರ ನಿವೇಶನ ಪರಬಾರೆ ಮಾಡಲಾಗಿದೆ. ಇದರ ವಿರುದ್ಧ ಮಧುಸೂಧನ್‌ ದೂರು ನೀಡಿದ್ದಾರೆ. ಆರೋಪಿಗಳಾದ ಸಿ.ಬಾಲಾಜಿ, ನಕಲಿ ಕೋಲ್ಮಿ ರಾಮಯ್ಯ, ಪುರಸಭೆ ಹಾಲಿ ಸದಸ್ಯ ಎನ್.ಮಂಜುನಾಥ್, ವಿ.ನಾಗೇಶ್ ಹಾಗೂ ಪತ್ರ ಬರಹಗಾರ ಗೋಪಾಲ್ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

ಶುದ್ಧ ಕ್ರಯ ನೋಂದಣಿ

೨೦೧೧ ರಲ್ಲಿ ವಯೋಸಹಜವಾಗಿ ಸಾವನ್ನಪ್ಪಿರುವ ನನ್ನ ತಾತ ಕೋಲ್ಮಿ ರಾಮಯ್ಯ ಅವರ ಸ್ವಯಾರ್ಜಿತ ಹಾಗೂ ಪಿತ್ರಾರ್ಜಿತ ಆಸ್ತಿಗಳಿದ್ದು,ನಮ್ಮ ಸಮಸ್ತ ಕುಟುಂಬ ಆಸ್ತಿಗಳನ್ನು ಭಾಗವಾಗಿ ಮಾಡಿಕೊಳ್ಳಲು ಕಾನೂನಾತ್ಮಕವಾಗಿ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಅವರ ಹೆಸರಿನಲ್ಲಿದ್ದ ಪಟ್ಟಣದ ಕುಂಭೇಶ್ವರ ಬಡಾವಣೆಯಲ್ಲಿದ್ದ ನಿವೇಶನವನ್ನು ನಕಲಿ ದಾಖಲೆ ಸೃಷ್ಟಿಸಿ ಮಾಲೂರಿನ ನೋಂದಣಾಧಿಕಾರಿ ಕಚೇರಿಯಲ್ಲಿ ಶುದ್ಧ ಕ್ರಯ ಪತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇಲ್ಲಿಯ ಕಾಂಗ್ರೆಸ್ ಅಧ್ಯಕ್ಷರೇ ಈ ಕೃತ್ಯ ನಡೆಸಿರುವುದು ಬೇಸರ ತರಿಸಿದೆ. ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಶಾಸಕರು ನನಗೆ ತಿಳಿಸಿದ್ದು, ತಪ್ಪೇ ಯಾರೇ ಮಾಡಿದರೂ ಅದು ತಪ್ಪೇ ಆಗಿದ್ದು, ಮಾಲೂರಿನ ಜನತೆ ನಿಮ್ಮ ನಿವೇಶನಗಳ ಬಗ್ಗೆ ಹೆಚ್ಚು ಹುಷಾರಾಗಿರಬೇಕಾಗಿದೆ ಎಂದಿದ್ದಾರೆ.

Share this article