ಸಾರಾಂಶ
ಬೇರೆ ಕೈದಿಗಳಿಗೆ ಬೆಡ್, ದಿಂಬು ನೀಡಿದ್ದರೆ, ನಟ ದರ್ಶನ್‌ಗೆ ಹರಿದ ಚಾದರ ನೀಡಿದ್ದಾರೆ. ಒಬ್ಬೊಬ್ಬ ಕೈದಿಗೆ ಒಂದೊಂದು ರೀತಿ ಸೌಲಭ್ಯ ನೀಡಿದರೆ ಹೇಗೆ? ತಾರತಮ್ಯ ಮಾಡಬಾರದು ಎಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಪರ ವಕೀಲರು 57ನೇ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ವಾದ
ಬೆಂಗಳೂರು : ಬೇರೆ ಕೈದಿಗಳಿಗೆ ಬೆಡ್, ದಿಂಬು ನೀಡಿದ್ದರೆ, ನಟ ದರ್ಶನ್‌ಗೆ ಹರಿದ ಚಾದರ ನೀಡಿದ್ದಾರೆ. ಒಬ್ಬೊಬ್ಬ ಕೈದಿಗೆ ಒಂದೊಂದು ರೀತಿ ಸೌಲಭ್ಯ ನೀಡಿದರೆ ಹೇಗೆ? ತಾರತಮ್ಯ ಮಾಡಬಾರದು ಎಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಪರ ವಕೀಲರು 57ನೇ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ವಾದ ಮಂಡಿಸಿದರು.
ಜೈಲಿನಲ್ಲಿ ದರ್ಶನ್‌ಗೆ ಅಗತ್ಯ ಮೂಲಸೌಕರ್ಯ ಒದಗಿಸುವ ಕುರಿತು ವಾದ ಮಂಡಿಸಿದ ದರ್ಶನ್ ಪರ ವಕೀಲ ಸುನೀಲ್ ಅವರು, ಸೌಕರ್ಯ ಪರಿಶೀಲಿಸಲು ಸೂಚಿಸಿದ್ದ ಕಾನೂನು ಪ್ರಾಧಿಕಾರದವರು ಜೈಲಿನ ಅಧಿಕಾರಿಗಳಿಂದ ಅಭಿಪ್ರಾಯ ಪಡೆದಿದ್ದಾರೆ. ಹಾಸಿಗೆ, ದಿಂಬು ನೀಡಲು ಅವಕಾಶವಿಲ್ಲ ಎಂದ ಜೈಲಾಧಿಕಾರಿಗಳ ಹೇಳಿಕೆ ದಾಖಲಿಸಿದ್ದಾರೆ. ಆದರೆ, ಆ ರೀತಿ ಪ್ರತಿಕ್ರಿಯೆ ದಾಖಲಿಸಲು ಅವಕಾಶವಿಲ್ಲ ಎಂದರು.
ಉಗ್ರ ಕೈದಿಗಳಿಗೂ 5 ಬೆಡ್ ನೀಡಿದ್ದಾರೆ. ಬೇರೆ ಕೈದಿಗಳು ರಾಜಾರೋಷವಾಗಿದ್ದಾರೆ. ಗುಬ್ಬಚ್ಚಿ ಸೀನಾ ತನ್ನ ಸಹಚರರೊಂದಿಗೆ ಹುಟ್ಟುಹಬ್ಬ ಆಚರಿಸಿದ್ದಾನೆ. ಅದರ ವಿಡಿಯೋ ಜಾಲತಾಣಕ್ಕೆ ಹರಿಬಿಡಲಾಗಿದೆ. ಆದರೆ, ದರ್ಶನ್ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಎಲ್ಲರಿಗೂ ಸೌಲಭ್ಯ ಕೊಡಬೇಕು. ಒಬ್ಬರಿಗೆ ಒಂದು ಕಾನೂನು ಮತ್ತೊಬ್ಬರಿಗೆ ಮತ್ತೊಂದು ಕಾನೂನು ಏಕೆ? ಎಂದು ವಾದಿಸಿದರು.
ದರ್ಶನ್‌ಗೆ ವಾಕಿಂಗ್‌ಗೆ ಅವಕಾಶ ನೀಡುವ ವಿಚಾರದಲ್ಲಿ ಬೇರೆ ಬೇರೆ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ. ಹೀಗಾಗಿ, ಅವರನ್ನು ಕ್ವಾರಂಟೈನ್ ಜೈಲ್‌ನಿಂದ ಮುಖ್ಯ ಜೈಲಿಗೆ ಶಿಫ್ಟ್ ಮಾಡಿ. ಅಲ್ಲಿ ದೊಡ್ಡ ಗೋಡೆ ಇವೆ. ಯಾರೂ ಫೋಟೋ ತೆಗೆಯುವುದಿಲ್ಲ. ಭದ್ರತೆ ದೃಷ್ಟಿಯಿಂದ ಕನ್ನಡಿ, ಬಾಚಣಿಕೆ ನೀಡಲು ನಿರಾಕರಿಸಿದ್ದಾರೆ. ಆತ್ಮಹತ್ಯೆ ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ. ಆದರೆ, ದರ್ಶನ್‌ಗೆ ಹೆಂಡತಿ, ಮಕ್ಕಳಿದ್ದಾರೆ ಎಂದು ದರ್ಶನ್ ಪರ ವಕೀಲರು ವಾದಿಸಿದರು.
ಭದ್ರತಾ ವಿಚಾರವಾಗಿ ಕೆಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ದರ್ಶನ್‌ಗೆ ವಾಕಿಂಗ್ ಮಾಡಲು ಅವಕಾಶ ನೀಡುವ ಮನವಿ ಪರಿಗಣಿಸುತ್ತೇವೆ ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಮರಣ ದಂಡನೆ ಕೊಡಿ:
ದರ್ಶನ್‌ಗೆ ಹಾಸಿಗೆ, ದಿಂಬು ನೀಡುವ ವಿಚಾರವಾಗಿ ವಾದ ಮಂಡಿಸಿದ ವಕೀಲ ಸುನೀಲ್, ಆರೋಪಿಗಳು ವಿಚಾರಣೆ ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಲಾಗಿದೆ. ಆದರೆ, ವಿಳಂಬ ಮಾಡುತ್ತಿಲ್ಲ. 262 ಸಾಕ್ಷಿಗಳಿದ್ದಾರೆ. ತರಾತುರಿ ಮಾಡಬಾರದು ಎಂಬುದು ನಮ್ಮ ಉದ್ದೇಶ. ಜೈಲಿನಲ್ಲಿದ್ದುಕೊಂಡು ಆರೋಪಿ ವಿಚಾರಣೆಗೆ ಸಿದ್ದರಿದ್ದಾರೆ. ನಾಳೆಯೇ ವಿಚಾರಣೆ ನಿಗದಿಪಡಿಸಿ, ನಾಳೆಯೇ ತೀರ್ಪು ನೀಡಿ. ನಾಡಿದ್ದು ಮರಣದಂಡನೆ ಶಿಕ್ಷೆ ನೀಡಿ. ಆದರೆ, ಮೂಲ ಸೌಲಭ್ಯ ವಿಚಾರದಲ್ಲಿ ಜೈಲಾಧಿಕಾರಿಗಳು ತಾರತಮ್ಯ ಮಾಡಬಾರದು ಎಂದು ನ್ಯಾಯಾಲಯಕ್ಕೆ ಕೋರಿದರು.
ನಂದೀಶ್ ಬಿಡುಗಡೆ ಅರ್ಜಿ ವಿಚಾರಣೆ:
ಪ್ರಕರಣದ 5ನೇ ಆರೋಪಿ ನಂದೀಶ್ ಬಿಡುಗಡೆ ಕೋರಿ ಸಲ್ಲಿಸಿದ್ದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ನಂದೀಶ್ ಪರ ವಕೀಲರು ವಾದಿಸಿ, ನಂದೀಶ್‌ನನ್ನು ಪ್ರತ್ಯಕ್ಷದರ್ಶಿಗಳು ಗುರುತು ಹಿಡಿದಿಲ್ಲ. ಈತನೇ ಕೊಲೆ ಮಾಡಿದ್ದಾನೆ ಎಂದೂ ಹೇಳಿಲ್ಲ. ಮರದ ಕೊಂಬೆಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಪ್ರತ್ಯಕ್ಷ ಸಾಕ್ಷಿಗೆ ಈ ಕೇಸ್‌ನಲ್ಲಿ ಮಹತ್ವ ಇಲ್ಲ. ಹೀಗಾಗಿ, ಈ ಕೇಸ್‌ನಿಂದ ಕೈಬಿಡಬೇಕೆಂದರು.
ಇದಕ್ಕೆ ಆಕ್ಷೇಪಿಸಿದ ಸರ್ಕಾರಿ ವಕೀಲರು, ರೇಣುಕಾಸ್ವಾಮಿಯನ್ನು ಹಿಡಿದುಕೊಂಡಿದ್ದ ಆರೋಪಿಗಳಲ್ಲಿ ನಂದೀಶ ಸಹ ಒಬ್ಬ. ಹಲ್ಲೆ ನಡೆಯುವಾಗ ರೇಣುಕಾಸ್ವಾಮಿ ಕೈ-ಕಾಲುಗಳನ್ನು ನಂದೀಶ್ ಹಿಡಿದುಕೊಂಡಿದ್ದ. ಇದಕ್ಕೆ ಪ್ರತ್ಯಕ್ಷದರ್ಶಿಗಳ ಸಾಕ್ಷಿ ಇದೆ. ಆತನೂ ತಪ್ಪೊಪ್ಪಿಕೊಂಡಿದ್ದಾನೆ. ಹೀಗಾಗಿ, ಬಿಡುಗಡೆ ಅರ್ಜಿಯನ್ನು ತಿರಸ್ಕರಿಸಬೇಕೆಂದು ವಾದಿಸಿದರು. ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿತು.
;Resize=(690,390))
)
)

;Resize=(128,128))
;Resize=(128,128))
;Resize=(128,128))
;Resize=(128,128))