ಪೌರಕಾರ್ಮಿಕರು ಸಮಾಜದ ನಿಜ ಹೀರೋಗಳು: ಶಾಸಕ ದರ್ಶನ್‌ ಧ್ರುವನಾರಾಯಣ

| Published : Sep 24 2025, 01:00 AM IST

ಸಾರಾಂಶ

ಸೇವಾ ಭದ್ರತೆ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಪೌರಕಾರ್ಮಿಕರ ಹೋರಾಟಕ್ಕೆ ಮಣಿದ ಸರ್ಕಾರಗಳು, 2017ರ ಆದೇಶದ ನಂತರ ಹಂತ ಹಂತವಾಗಿ ಸೌಲಭ್ಯಗಳನ್ನು ದೊರಕಿಸಿಕೊಟ್ಟು, ಪೌರಕಾರ್ಮಿಕರಿಗೆ ಸೇವಾ ಭದ್ರತೆಯನ್ನು ಒದಗಿಸುತ್ತಿವೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ನಗರವನ್ನು ಸ್ವಚ್ಛವಾಗಿಡುವ ಕೆಲಸ ಮಾಡುವ ಮೂಲಕ ಆರೋಗ್ಯ ಪರಿಸರ ನಿರ್ಮಾಣ ಮಾಡುವ ಪೌರಕಾರ್ಮಿಕರು ಸಮಾಜದ ನಿಜವಾದ ಹೀರೋಗಳಾಗಿದ್ದಾರೆ, ಅವರ ಕಾಯಕವನ್ನು ಎಲ್ಲರೂ ಪ್ರತಿನಿತ್ಯ ಸ್ಮರಣೆ ಮಾಡಬೇಕಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

ಪಟ್ಟಣದ ನಂದಿ ಕನ್ವೆನ್ಷನ್ ಕಲ್ಯಾಣ ಮಂಟಪದಲ್ಲಿ ನಗರಸಭೆಯ ವತಿಯಿಂದ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಚ್ಛ ಪರಿಸರ ಆರೋಗ್ಯಕರ ಪರಿಸರವಾಗಿದೆ, ಪಟ್ಟಣದ ಸ್ವಚ್ಛತೆಯನ್ನು ಕಾಪಾಡುವ ಸಲುವಾಗಿ ಮಳೆ, ಚಳಿ ಬಿಸಿಲನ್ನು ಲೆಕ್ಕಿಸದೆ ಪೌರ ಕಾರ್ಮಿಕರು ಪ್ರತಿನಿತ್ಯ ತಮ್ಮ ಸೇವೆ ಮಾಡುವ ಮೂಲಕ ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ, ಅವರ ಸೇವೆಯನ್ನು ಪ್ರತಿಯೊಬ್ಬ ನಾಗರಿಕರು ಸಹ ಸ್ಮರಣೆ ಮಾಡಬೇಕಿದೆ ಎಂದರು.

ಉತ್ತಮ ಆರೋಗ್ಯಕರ ಪರಿಸರ ನಿರ್ಮಿಸುವಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ದೊಡ್ಡ ಜವಾಬ್ದಾರಿಯಿದ್ದು, ಮನೆಯಿಂದಲೇ ತ್ಯಾಜ್ಯಗಳನ್ನು ವಿಂಗಡಿಸಿ ಸ್ವಚ್ಛತೆಗೆ ಸಹಕಾರ ನೀಡಬೇಕು, ಹಸಿ ಕಸ ಮತ್ತು ಒಣ ಕಸಗಳನ್ನು ವಿಂಗಡಿಸಿ ಕಸ ವಿಲಿವೇರಿ ಮಾಡುವ ಮೂಲಕ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು, ಆದರೆ ಪ್ರತಿಯೊಬ್ಬರು ಈ ಕರ್ತವ್ಯವನ್ನು ಮರೆಯುತ್ತಿರುವ ಭಾವನೆ ನಮ್ಮೆಲ್ಲರನ್ನು ಕಾಡುತ್ತಿದೆ, ಬೆಂಗಳೂರಿನಂತ ನಗರಗಳಲ್ಲಿ ಹಸಿ ಕಸ ಮತ್ತು ಒಣ ಕಸಗಳನ್ನು ಬೇರ್ಪಡಿಸದೆ ಕೊಟ್ಟಲ್ಲಿ ದಂಡ ವಿಧಿಸುವಂತಹ ಸನ್ನಿವೇಶವಿದೆ, ಜೊತೆಗೆ ದೊಡ್ಡ ದೊಡ್ಡ ನಗರಗಳಲ್ಲಿ ಕಸ ವಿಲೇವಾರಿ ಒಂದು ದೊಡ್ಡ ಸಮಸ್ಯೆಯಾಗಿದೆ, ಆದ್ದರಿಂದ ನಮ್ಮ ನಂಜನಗೂಡು ನಗರಸಭೆಯನ್ನು ಸ್ವಚ್ಛವಾಗಿಡಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಕರೆ ನೀಡಿದರು.

ನಗರಸಭಾ ಆಯುಕ್ತ ವಿಜಯ್ ಮಾತನಾಡಿ, ಸೇವಾ ಭದ್ರತೆ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಪೌರಕಾರ್ಮಿಕರ ಹೋರಾಟಕ್ಕೆ ಮಣಿದ ಸರ್ಕಾರಗಳು, 2017ರ ಆದೇಶದ ನಂತರ ಹಂತ ಹಂತವಾಗಿ ಸೌಲಭ್ಯಗಳನ್ನು ದೊರಕಿಸಿಕೊಟ್ಟು, ಪೌರಕಾರ್ಮಿಕರಿಗೆ ಸೇವಾ ಭದ್ರತೆಯನ್ನು ಒದಗಿಸುತ್ತಿವೆ, ನಮ್ಮ ನಗರಸಭೆಯ ಎಸ್ಎಫ್ ಅನುದಾನದ ಅಡಿಯಲ್ಲಿ 14.37 ಲಕ್ಷ ಕ್ರಿಯಾಯೋಜನೆ ಸಿದ್ಧಪಡಿಸಿ ಎಲ್ಲ ಪೌರಕಾರ್ಮಿಕರಿಗೂ ಸುಮಾರು 15 ಲಕ್ಷ ದವರೆಗೆ ಜೀವ ವಿಮೆಯನ್ನು ಮಾಡಿಸಿಕೊಡಲು ನಿರ್ಧರಿಸಲಾಗಿದೆ, ಇದರ ವ್ಯಾಪ್ತಿಗೆ ಹೊರಗುತ್ತಿಗೆಯ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೀರು ಗಂಟೆಗಳು ಮತ್ತು ಚಾಲಕರು ಸ್ವಚ್ಛತಾ ಸಿಬ್ಬಂದಿಗಳಿಗೂ ಅನ್ವಯವಾಗಲಿದೆ ಎಂದು ಮಾಹಿತಿ ನೀಡಿದರು.

ಉತ್ತಮವಾಗಿ ಕಾರ್ಯನಿರ್ವಹಿಸಿ ಜನಮನ್ನಣೆ ಗಳಿಸಿದ 12 ಜನ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ. ಶಂಕರ್, ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ, ನಗರಸಭಾ ಸದಸ್ಯರಾದ ಗಂಗಾಧರ್, ಎಸ್.ಪಿ. ಮಹೇಶ್, ಎನ್.ಎಸ್. ಯೋಗೀಶ್, ಗಾಯತ್ರಿ, ಸಿದ್ದಿಕ್, ಸಿದ್ದರಾಜು, ಶ್ವೇತಲಕ್ಷ್ಮಿ, ಪಿ. ದೇವ, ಸೌಭಾಗ್ಯ, ರಮೇಶ್, ಕೆ.ಎಂ. ಬಸವರಾಜು, ರವಿ ಇದ್ದರು.