ಕನ್ನಡಪ್ರಭ ವಾರ್ತೆ ಬೆಂಗಳೂರು

ಬಣ್ಣಗಳ ಹಬ್ಬವಾದ ‘ಹೋಳಿ’ಯನ್ನು ನಗರದ ಹಲವೆಡೆ ಸಡಗರ, ಸಂಭ್ರಮದಿಂದ ಬುಧವಾರ ವಿಭಿನ್ನವಾಗಿ ಆಚರಿಸಲಾಯಿತು. ಮಕ್ಕಳು ಸೇರಿದಂತೆ ಯುವ ಜನರು ನಗರದ ವಿವಿಧ ಕಡೆ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.

ಸಾಮಾನ್ಯವಾಗಿ ಹೋಳಿ ಹಬ್ಬದ ಮೊದಲ ದಿನವನ್ನು ಕಾಮನದಹನ ಮಾಡುವ ಮೂಲಕ ಆಚರಿಸಲಾಗುತ್ತದೆ. ಆದರೆ ರಕ್ತಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಮಂಗಳವಾರ ಹಬ್ಬ ಕಳೆಗುಂದಿತ್ತು. ಆದರೆ ಬುಧವಾರ ಕೆಲವೆಡೆ ಕಾಮನದಹನವನ್ನೂ ಮಾಡಿದ್ದು ಜೊತೆಗೆ ಹೋಳಿಯನ್ನೂ ಸಡಗರದಿಂದ ಆಚರಿಸಲಾಯಿತು.

ಸಂಘ-ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಕೆಲವೆಡೆ ಸಮಾನ ಮನಸ್ಕರು ಗುಂಪುಗೂಡಿ ಪರಸ್ಪರ ಬಣ್ಣವನ್ನು ಎರಚುತ್ತಾ, ಅಬ್ಬರದ ಸಂಗೀತಕ್ಕೆ ಹೆಜ್ಜೆ ಹಾಕುತ್ತಾ ಸಂಭ್ರಮಿಸಿದರು. ಕೆಲ ಮಾಲ್‌ಗಳಲ್ಲಿ ಸಂಪ್ರದಾಯ ಹಾಗೂ ಆಧುನಿಕತೆಯ ಮಿಶ್ರಣವಾಗಿ ಹೋಳಿಯನ್ನು ಆಚರಿಸಲಾಯಿತು. ಬೃಹತ್‌ ಸಂಗೀತ ಉತ್ಸವಗಳಿಂದ ಹಿಡಿದು ಆಕರ್ಷಕ ಪಾರ್ಟಿಯವರೆಗೂ ಹೋಳಿಯ ಸಂಭ್ರಮ ವಿಸ್ತರಿಸಿದ್ದು ಕಂಡುಬಂತು.

ಹಲವು ಐಷಾರಾಮಿ ಹೋಟೆಲ್‌ಗಳಲ್ಲಿ ಹೋಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಸಾಂಪ್ರದಾಯಿಕ ದೋಲ್‌ ಮತ್ತು ವಿಶೇಷ ಆಹಾರ ಪದ್ಧತಿಗಳೊಂದಿಗೆ ಜನರು ಸಂಭ್ರಮದಲ್ಲಿ ಪಾಲ್ಗೊಂಡರು. ನಗರದ ಹೊರ ವಲಯದ ರೆಸಾರ್ಟ್‌ಗಳಲ್ಲಿ ಡೊಳ್ಳು ಕುಣಿತ, ಚೆಂಡೆ ಮೇಳ, ರೇನ್‌ ಡ್ಯಾನ್ಸ್‌, ಪಂಜಾಬಿ ದೋಲ್‌ ಸಂಗೀತದೊಂದಿಗೆ ಅಬ್ಬರದ ಡಿಜೆ ವ್ಯವಸ್ಥೆಯನ್ನೂ ಮಾಡಲಾಗಿತ್ತು.


1956 ರಿಂದಲೂ ಹಳೆಪೇಟೆಯ ತೋಟದೇವರ ಗಲ್ಲಿಯಲ್ಲಿ ಕಾಮಣ್ಣನ ಗುಡಿ ಸೇವಾ ಸಮಿತಿ, ಕುರುಹೀನ ಶೆಟ್ಟಿ ಸಂಘವು ಹೋಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾ ಬರುತ್ತಿದ್ದು ಬುಧವಾರ ಮಧ್ಯಾಹ್ನ ಕಾಮಣ್ಣನ ದಹನ ನಡೆಸಲಾಯಿತು. ಸಮಿತಿಯ ಅಧ್ಯಕ್ಷ ಬಿ.ಎಸ್‌. ರಮೇಶ್‌, ಖಜಾಂಚಿ ನರಸಿಂಹಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.