ಚಿತ್ರದುರ್ಗ : ಪರಿಶಿಷ್ಟರಿಗೆ ಒಳ ಮೀಸಲು ಜಾರಿ ಮಾಡುವುದರ ಮೂಲಕ ಐತಿಹಾಸಿಕ ತೀರ್ಮಾನ ಕೈಗೊಂಡ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವ ಸಂಬಂಧ ಶೀಘ್ರವೇ ಒಳಮೀಸಲು ಸಂಭ್ರಮೋತ್ಸವ ಆಚರಿಸಲಾಗುವುದು ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸುವ ಮೂಲಕ ಸಮುದಾಯಕ್ಕೆ ಸಹಾಯ ಮಾಡಿದ ಸಿಎಂ ಸಿದ್ದರಾಮಯ್ಯ ಮತ್ತು ಸಂಪುಟದ ಸದಸ್ಯರು ಹಾಗೂ ಕಾಂಗ್ರೆಸ್‌ ವರಿಷ್ಠ ರಾಹುಲ್ ಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸಿ, ಅವರನ್ನು ಸಮುದಾಯದ ವತಿಯಿಂದ ಗೌರವಿಸಲು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ರಾಯಚೂರು, ಚಿತ್ರದುರ್ಗ ಇಲ್ಲವೇ ಹೊಸಪೇಟೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ಈ ಸಂಬಂಧ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ಅವರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಬಹು ವರ್ಷಗಳ ಹೋರಾಟದ ಫಲವಾಗಿ ಸಮುದಾಯಕ್ಕೆ ಒಳಮೀಸಲಾತಿ ಜಾರಿಗೊಂಡಿದೆ. ಆದರೆ, ಎಸ್ಸಿಗೆ 3ಕ್ಕಿಂತಲೂ ಕಡಿಮೆ ಹುದ್ದೆಗಳಿದ್ದ ವೇಳೆ ಎಸ್ಸಿ ಸಾಮಾನ್ಯ ಎಂದು ಪರಿಗಣಿಸಲಾಗುವುದು ಎಂಬ ಆದೇಶ ಒಳಮೀಸಲಾತಿ ಆಶಯಕ್ಕೆ ಧಕ್ಕೆ ತರಲಿದೆ. ಈ ಸಂಬಂಧ ಚರ್ಚಿಸಲು ಮಾದಿಗ ಸಮುದಾಯದ ಚಿಂತಕರು, ನಿವೃತ್ತ ಅಧಿಕಾರಿಗಳು, ಹೋರಾಟಗಾರರ ದುಂಡು ಮೇಜಿನ ಸಭೆಯನ್ನು ಬೆಂಗಳೂರಿನಲ್ಲಿ ಮೇ 3ರ ಭಾನುವಾರ ಆಯೋಜಿಸಲಾಗಿದೆ. ಬಳಿಕ, ಈ ಲೋಪ ಸರಿಪಡಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.


ಸರ್ಕಾರಕ್ಕೆ ಗೌರವಾರ್ಪಣೆ

ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸುವ ಮೂಲಕ ಸಮುದಾಯಕ್ಕೆ ಸಹಾಯ ಮಾಡಿದ ಸಿಎಂ ಸಿದ್ದರಾಮಯ್ಯ ಮತ್ತು ಸಂಪುಟದ ಸದಸ್ಯರು ಹಾಗೂ ಕಾಂಗ್ರೆಸ್‌ ವರಿಷ್ಠ ರಾಹುಲ್ ಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸಿ, ಅವರನ್ನು ಸಮುದಾಯದ ವತಿಯಿಂದ ಗೌರವಿಸಲು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

- ಎಚ್‌. ಆಂಜನೇಯ, ಮಾಜಿ ಸಚಿವ