ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮತದಾರರು ಗಣತಿ ನಮೂನೆ ವಾಪಸ್ ನೀಡಲು ಮತ್ತು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಗಣತಿ ನಮೂನೆಗಳ ಡಿಜಿಟಲೀಕರಣ ಮಾಡಲು ಇನ್ನು ಕೇವಲ ಎರಡು ದಿನ ಮಾತ್ರ ಬಾಕಿ ಇದೆ.
ಗಣತಿ ನಮೂನೆಗಳ ಡಿಜಿಟಲೀಕರಣ
ಗುರುವಾರ ಸಂಜೆ 4 ಗಂಟೆ ವೇಳೆಗೆ ಎಎಸ್‌ಡಿಡಿಒ ವರ್ಗದ 1.10 ಕೋಟಿ ಮತ್ತು ಮತದಾರರು ಭರ್ತಿ ಮಾಡಿ ವಾಪಸ್ ನೀಡಿದ 4.43 ಕೋಟಿ ಸೇರಿ ಒಟ್ಟು 5.54 ಕೋಟಿ ಗಣತಿ ನಮೂನೆಗಳ ಡಿಜಿಟಲೀಕರಣ ಮಾಡಲಾಗಿದೆ. ಈ ಮೂಲಕ ಶೇ.99.99ರಷ್ಟು ಪ್ರಗತಿ ಸಾಧಿಸಲಾಗಿದೆ. ಇನ್ನು ಕೇವಲ 3,238 ಗಣತಿ ನಮೂನೆಗಳ ಡಿಜಿಟಲೀಕರಣ ಬಾಕಿ ಇದ್ದು, ಶುಕ್ರವಾರ ಪೂರ್ಣಗೊಳ್ಳುವ ಸಾಧ್ಯತೆ.
ಗೈರು/ಪತ್ತೆಯಾಗದವರು 16.12 ಲಕ್ಷ
ಈ ಎಎಸ್‌ಡಿಡಿಒ ವರ್ಗದ 1.10 ಕೋಟಿ ಮತದಾರರ ಪೈಕಿ ಗೈರು/ಪತ್ತೆಯಾಗದವರು 16.12 ಲಕ್ಷ, ಶಾಶ್ವತ ಸ್ಥಳಾಂತರ 66.43 ಲಕ್ಷ, ಮೃತರು 16.32 ಲಕ್ಷ, ಈಗಾಗಲೇ ಬೇರೆಡೆ ನೋಂದಣಿಯಾದವರು 6.93 ಲಕ್ಷ ಹಾಗೂ ಇತರೆ 4.67 ಲಕ್ಷ ಮತದಾರರು ಇದ್ದಾರೆ. ಈ ಮತದಾರರ ಹೆಸರುಗಳು ಹಾಲಿ ಮತದಾರರ ಪಟ್ಟಿಯಿಂದ ತೆಗೆಯಲಾಗುವುದು. ಅಂದರೆ, ಆ.17ರಂದು ಪ್ರಕಟವಾಗುವ ಕರಡು ಮತದಾರರ ಪಟ್ಟಿಯಲ್ಲಿ ಇವರು ಹೆಸರುಗಳು ಇರುವುದಿಲ್ಲ.
ಒಂದು ವೇಳೆ ಅರ್ಹ ಮತದಾರರು ಈ ಎಎಸ್‌ಡಿಡಿಒ ವರ್ಗಕ್ಕೆ ಸೇರಿದ್ದಲ್ಲಿ ಸಂಬಂಧಪಟ್ಟ ಬಿಎಲ್‌ಒ/ಇಆರ್‌ಒ ಸಂಪರ್ಕಿಸಿ ಗಣತಿ ನಮೂನೆ ವಾಪಸ್ ಪಡೆದು ನಿಗದಿತ ಮಾಹಿತಿ ಭರ್ತಿ ಮಾಡಿ ಆ.8ರ ಸಂಜೆಯೊಳಗೆ ವಾಪಸ್ ನೀಡಲು(ರೋಲ್ ಬ್ಯಾಕ್) ಅವಕಾಶವಿದೆ. ಅಂತಹ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟವಾಗಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
