ಸಾಲ ಬಾಕಿ ಇರುವ ವಾಹನಗಳನ್ನು ಕಡಿಮೆ ಬೆಲೆಗೆ ಅಡಮಾನ ಪಡೆದು ಬಳಿಕ ಮಾಲೀಕರಿಗೆ ತಿಳಿಯದಂತೆ ಬೇರೆಯವರಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿ ವಂಚಿಸುತ್ತಿದ್ದ ನಾಲ್ವರು ವಂಚಕರನ್ನು ವಿಲ್ಸನ್ ಗಾರ್ಡನ್ ಹಾಗೂ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಪ್ರತ್ಯೇಕವಾಗಿ ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಾಲ ಬಾಕಿ ಇರುವ ವಾಹನಗಳನ್ನು ಕಡಿಮೆ ಬೆಲೆಗೆ ಅಡಮಾನ ಪಡೆದು ಬಳಿಕ ಮಾಲೀಕರಿಗೆ ತಿಳಿಯದಂತೆ ಬೇರೆಯವರಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿ ವಂಚಿಸುತ್ತಿದ್ದ ನಾಲ್ವರು ವಂಚಕರನ್ನು ವಿಲ್ಸನ್ ಗಾರ್ಡನ್ ಹಾಗೂ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಪ್ರತ್ಯೇಕವಾಗಿ ಬಂಧಿಸಿದ್ದಾರೆ.

ಉಲ್ಲಾಳದ ವಿಶ್ವೇಶ್ವರಯ್ಯ ಲೇಔಟ್‌ನ ಗುರುಪ್ರಸಾದ್, ಕೆಂಗೇರಿಯ ಸ್ಯಾಟ್‌ಲೈಟ್‌ ಟೌನ್‌ನ ಸೋಮೇಶ್‌, ಉಲ್ಲಾಳ ಉಪನಗರದ ಸಂತೋಷ್ ಅಲಿಯಾಸ್ ಅಪ್ಪು ಹಾಗೂ ಸೋಲದೇವನಹಳ್ಳಿಯ ಪ್ರಭಾಕರ್ ಬಂಧಿತರಾಗಿದ್ದು, ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಇನ್ನೂ ಕೆಲ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ. ಆರೋಪಿಗಳಿಂದ 24 ,ಕಾರುಗಳು, 7 ಬೈಕ್‌ಗಳು, 1 ಗೂಡ್ಸ್ ವಾಹನ ಹಾಗೂ 2 ಆಟೋಗಳು ಸೇರಿ 3 ಕೋಟಿ ರು.ಮೌಲ್ಯದ ವಾಹನಗಳು ಜಪ್ತಿ ಮಾಡಲಾಗಿದೆ.

ಆರ್‌ಸಿ ಪರಿಶೀಲಿಸಿದಾಗ ವಂಚನೆ ಬೆಳಕಿಗೆ:

ಕೆಲ ದಿನಗಳ ಹಿಂದೆ ಕಡಿಮೆ ಬೆಲೆ ಎಂದು ನಂಬಿಸಿ ಫಾರ್ಚೂನರ್‌ ಕಾರನ್ನು ಮೆಹಬೂಬ್‌ ಲೇಔಟ್‌ನ ನೌಶದ್ ಖಾನ್‌ ಅವರಿಗೆ ಸೋಮೇಶ್ ತಂಡ ಮಾರಾಟ ಮಾಡಿತ್ತು. ಆಗ ಆ ಕಾರಿನ ನೋಂದಣಿ ಪ್ರಮಾಣ ಪತ್ರ (ಆರ್‌ಸಿ) ಸೇರಿದಂತೆ ಇತರೆ ದಾಖಲೆಗಳನ್ನು ಖಾನ್‌ ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ. ತಕ್ಷಣವೇ ವಿಲ್ಸನ್ ಗಾರ್ಡನ್‌ ಠಾಣೆಗೆ ಅವರು ದೂರು ನೀಡಿದರು.

ಈ ವಂಚನೆ ಕುರಿತು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್‌.ಎಂ.ಹಾಕೆ ಹಾಗೂ ಹಲಸೂರು ಗೇಟ್‌ ಉಪ ವಿಭಾಗದ ಎಸಿಪಿ ಎಸ್‌.ಸುಧೀರ್ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಕೆ.ಪ್ರಕಾಶ್ ತಂಡ ಕಾರ್ಯಾಚರಣೆಗಿಳಿದಿದೆ. ಆಗ ಕೆಂಗೇರಿಯ ಸೋಮೇಶ್‌, ಉಲ್ಲಾಳದ ಸಂತೋಷ್ ಹಾಗೂ ಪ್ರಭಾಕರ್ ಸಿಕ್ಕಿಬಿದ್ದಿದ್ದಾರೆ. ಇವರನ್ನು ಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ವಂಚನೆ ಜಾಲ ಬಯಲಾಗಿದೆ. ಆರೋಪಿಗಳಿಂದ 10 ಕಾರುಗಳು ಹಾಗೂ 1 ಬೈಕ್‌ ಸೇರಿದಂತೆ 2 ಕೋಟಿ ರು. ಮೌಲ್ಯದ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಚಾಲಾಕಿ ಮೋಸಗಾರ ಸೆರೆ:

ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ಮತ್ತೊಬ್ಬ ವಂಚಕ ಗಾಳಕ್ಕೆ ಬಿದ್ದಿದ್ದಾನೆ. ಹಲವು ವರ್ಷಗಳಿಂದ ನಗರದಲ್ಲಿ ಮೈಸೂರು ಜಿಲ್ಲೆ ಸುತ್ತೂರು ಗ್ರಾಮದ ಗುರುಪ್ರಸಾದ್‌ ನೆಲೆಸಿದ್ದು, ಜನರಿಗೆ ಕಡಿಮೆ ಬೆಲೆ ಕಾರು ಕೊಡಿಸುವುದಾಗಿ ನಂಬಿಸಿ ಟೋಪಿ ಹಾಕುವುದೇ ಆತನ ವೃತ್ತಿಯಾಗಿದೆ. ತನ್ನ ಕುಟುಂಬದ ಜತೆ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಆತ ವಾಸ್ತವ್ಯ ಹೂಡಿದಿದ್ದಾನೆ. ಇತ್ತೀಚಿಗೆ ಸಾಲದ ಕಂತು ಪಾವತಿಸುವುದಾಗಿ ನಂಬಿಸಿ ಅಜಯ್ ಎಂಬಾತನಿಂದ ಕಾರನ್ನು ಗುರುಪ್ರಸಾದ್ ಖರೀದಿಸಿದ್ದ. ಆದರೆ ಅತ್ತ ಇಎಂಐ ಕೂಡ ಕಟ್ಟದೆ ಇತ್ತ ಕಾರನ್ನು ಮರಳಿಸದೆ ಅಜಯ್ ಅವರಿಗೆ ಆತ ಜೀವ ಬೆದರಿಕೆ ಹಾಕಿದ್ದ. ಕೊನೆಗೆ ಈ ವಂಚನೆ ಬಗ್ಗೆ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದಾಖಲಾಯಿತು. ಅದರನ್ವಯ ಪಶ್ಚಿಮ ವಿಭಾಗದ ಡಿಸಿಪಿ ಎನ್‌. ಯತೀಶ್ ಹಾಗೂ ಬ್ಯಾಟರಾಯನಪುರ ಉಪ ವಿಭಾಗದ ಜಿ.ವಿ.ಉದಯ್‌ ಭಾಸ್ಕರ್ ಮಾರ್ಗ ದರ್ಶನದಲ್ಲಿ ಇನ್ಸ್‌ಪೆಕ್ಟರ್‌ ಲತೇಶ್ ಕುಮಾರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಭಗವಂತ್ ರಾವ್ ಪಾಟೀಲ್ ತಂಡ ತನಿಖೆಗಿಳಿದೆ. ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಿಸಿದಾಗ ಮೋಸದ ಕೃತ್ಯ ಬಯಲಾಗಿವೆ.

ವಂಚನೆ ಹೇಗೆ?: ಸಾಲದ ಮೇಲೆ ಕಾರು ಖರೀದಿಸಿ ಬಳಿಕ ಆರ್ಥಿಕ ಸಂಕಷ್ಟದಿಂದ ಅಡಮಾನ ಅಥವಾ ಮಾರಾಟಕ್ಕೆ ಮುಂದಾಗುವ ವಾಹನಗಳ ಮಾಲಿಕರೇ ವಂಚಕರ ಟಾರ್ಗೆಟ್ ಆಗಿದ್ದರು. ತಾವು ಸಾಲ ತೀರಿಸುವುದಾಗಿ ನಂಬಿಸಿ ಆ ವಾಹನಗಳನ್ನು ಪಡೆದು ಬಳಿಕ ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಆರೋಪಿಗಳು ಮಾರುತ್ತಿದ್ದರು.

ಕಡಿಮೆ ಬೆಲೆಗೆ ವಾಹನ ಖರೀದಿಸುವ ಮುನ್ನ ಆ ವಾಹನಗಳ ಮಾರಾಟಗಾರರ ಪೂರ್ವಾಪರವನ್ನು ಸಾರ್ವಜನಿಕರು ತಿಳಿದುಕೊಳ್ಳಬೇಕು. ಸಾಲದ ವಾಹನಗಳ ಕಡಿಮೆ ಬೆಲೆಗೆ ಮಾರಾಟ ಹೆಸರಿನಲ್ಲಿ ವಂಚಿಸುತ್ತಿದ್ದ ಜಾಲದ ವಿರುದ್ಧ ಸಮಗ್ರ ತನಿಖೆಗೆ ಜಂಟಿ ಆಯುಕ್ತ (ಪಶ್ಚಿಮ) ವಂಶಿಕೃಷ್ಣ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.

ಸೀಮಂತ್ ಕುಮಾರ್ ಸಿಂಗ್ ನಗರ ಪೊಲೀಸ್‌ ಆಯುಕ್ತ