ಮಾತೃ ಭಾಷೆಯೊಂದಿಗೆ ಅನ್ಯ ಭಾಷೆ ಕಲಿಕೆ ಅವಶ್ಯಕ

KannadaprabhaNewsNetwork | Published : Mar 4, 2024 1:15 AM

ಸಾರಾಂಶ

ಇಂದಿನ ಸ್ಮರ್ಧಾತ್ಮಕ ಕಾಲಘಟ್ಟದಲ್ಲಿ ಮಾತೃ ಭಾಷೆಯೊಂದಿಗೆ ಇತರೆ ಭಾಷೆಗಳನ್ನು ಕಲಿಯಬೇಕಾದ ಅವಶ್ಯಕತೆ ಇದೆ. ಜತೆಗೆ ಎಲ್ಲ ಮಕ್ಕಳು ಶಿಕ್ಷಣ ಪಡೆಯುವುದು ಅತ್ಯವಶ್ಯಕ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿಇಂದಿನ ಸ್ಮರ್ಧಾತ್ಮಕ ಕಾಲಘಟ್ಟದಲ್ಲಿ ಮಾತೃ ಭಾಷೆಯೊಂದಿಗೆ ಇತರೆ ಭಾಷೆಗಳನ್ನು ಕಲಿಯಬೇಕಾದ ಅವಶ್ಯಕತೆ ಇದೆ. ಜತೆಗೆ ಎಲ್ಲ ಮಕ್ಕಳು ಶಿಕ್ಷಣ ಪಡೆಯುವುದು ಅತ್ಯವಶ್ಯಕ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್‌ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಮಹಾ ಸಮ್ಮೇಳನ, ಅಲ್ಪ ಸಂಖ್ಯಾತರ ಕಲ್ಯಾಣ ಹಾಗೂ ಶೈಕ್ಷಣಿಕ, ಔದ್ಯೋಗಿಕ ಯೋಜನೆಗಳ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಮಾತೃ ಭಾಷೆಯನ್ನು ಪ್ರೀತಿಸುವುದರೊಂದಿಗೆ ಬೇರೆ ಭಾಷೆಯನ್ನು ಗೌರವಿಸಬೇಕು. ಜತೆಗೆ ಕಲಿತುಕೊಳ್ಳಬೇಕು. ಅಂದಾಗ ಮಾತ್ರ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬೇರೆಯವರಿಗೊಂದಿಗೆ ಸ್ಪರ್ಧೆಯೊಡ್ಡಲು ಸಾಧ್ಯ. ನಾವು ಮನೆಯಲ್ಲಿ ಯಾವುದೇ ಭಾಷೆ ಮಾತನಾಡಬಹುದು. ಆದರೆ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬೇರೆಯವರಿಗೆ ಸ್ಪರ್ಧೆಯೊಡ್ಡಲು ಕನ್ನಡದೊಂದಿಗೆ ಬೇರೆ ಬೇರೆ ಭಾಷೆಗಳನ್ನೂ ಕಲಿಯಬೇಕಾದ ಅಗತ್ಯವಿದೆ ಎಂದರು.

ಒಂದು ಭಾಷೆಯನ್ನು ದ್ವೇಷಿಸಿದರೆ, ಮತ್ತೊಂದು ಭಾಷೆ ಬೆಳೆಯದು. ಹೀಗಾಗಿ ನಾವು ಮಾತೃಭಾಷೆ ಪ್ರೀತಿಸುವ ಜತೆಗೆ, ಅನ್ಯಭಾಷೆಗಳನ್ನೂ ಗೌರವಿಸಬೇಕು. ಬೇರೆ ಬೇರೆ ಭಾಷೆ ಕಲಿತರೆ, ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬಹುದು. ವಿಶ್ವಾಸದ ಸಮಾಜ ಕಟ್ಟಬಹುದು. ಸಾಧ್ಯವಾದಷ್ಟು ಮಾತೃಭಾಷೆಯೊಂದಿಗೆ ಅನ್ಯ ಭಾಷೆ ಕಲಿಯಲು ಹೆಚ್ಚು ಆಧ್ಯತೆಕೊಡುವಂತೆ ತಿಳಿಸಿದರು.

ಪಾಲಕರು ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು. ನಮ್ಮ ಪರಿಸರದಲ್ಲಿನ ಎಲ್ಲ ಮಕ್ಕಳೂ ಅಕ್ಷರ ಕಲಿಯಲು ಪ್ರೋತ್ಸಾಹಿಸಬೇಕು. ದೇಶದ ಸಂವಿಧಾನದ ಮಹತ್ವವನ್ನು ಜನರಿಗೆ ತಿಳಿಸುವ ಕೆಲಸವಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಿಕೊಂಡು ಹೋಗಬೇಕು. ಒಗ್ಗಟ್ಟಿನಿಂದ ನಿಮ್ಮ ಸಂಘಟನೆಯನ್ನು ಬೆಳೆಸಿ. ನಿಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಚೆಗೆ ರಾಜ್ಯ ಸರ್ಕಾರಿ ನೌಕರರ ಸಮ್ಮೇಳನದಲ್ಲಿ ಭಾಗವಹಿಸಿ, ಹಳೆ ಪಿಂಚಣಿ ಯೋಜನೆ ಜಾರಿ ಮತ್ತು 7ನೇ ವೇತನ ಆಯೋಗದ ವರದಿ ಜಾರಿ ಕುರಿತು ಸ್ಪಷ್ಟವಾಗಿ ಭರವಸೆ ನೀಡಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನವೋ, ಚುನಾವಣೆಯ ನಂತರವೋ ಎನ್ನುವುದಷ್ಟೇ ಸ್ಪಷ್ಟವಾಗಬೇಕಿದೆ. ಆದರೆ ಈ ವಿಷಯದಲ್ಲಿ ಯಾರಿಗೂ ಅನುಮಾನ ಬೇಡ. ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿದೆ ಎಂದು ಹೆಬ್ಬಾಳಕರ್ ಸ್ಪಷ್ಟಪಡಿಸಿದ ಅವರು, 2006ರ ನಂತರ ನೇಮಕವಾಗಿರುವ ರಾಜ್ಯ ಸರ್ಕಾರಿ ನೌಕರರಿಗೆ ಈಗ ಇರುವ ಹೊಸ ಪಿಂಚಣಿ ಯೋಜನೆ ರದ್ಧುಪಡಿಸಿ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೊಳಿಸುವುದು ಖಚಿತ ಎಂದು ಭರವಸೆ ನೀಡಿದರು.

ಸರ್ಕಾರಕ್ಕೆ ಒಳ್ಳೆಯ ಹೆಸರು ತರುವುದು ಮತ್ತು ಕೆಟ್ಟ ಹೆಸರು ತರುವುದು ಎರಡೂ ನೌಕರರ ಕೆಲಸದ ಮೇಲೆ ಅವಲಂಭಿಸಿದೆ. ಒಳ್ಳೆಯ ರೀತಿಯಿಂದ ಕೆಲಸ ಮಾಡಿ ಸರ್ಕಾರದ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಿದರೆ ಜನರು ಸರ್ಕಾರವನ್ನು ಪ್ರಶಂಸಿಸುತ್ತಾರೆ. ಇಲ್ಲವಾದಲ್ಲಿ ಬೀದಿ ಬೀದಿಗಳಲ್ಲಿ ಸರ್ಕಾರವನ್ನು ಬಯ್ಯುತ್ತಾರೆ. ಹಾಗಾಗಿ ಉತ್ತಮವಾಗಿ ಕೆಲಸ ಮಾಡಿ ಸರ್ಕಾರಕ್ಕೆ ಒಳ್ಳೆಯ ಹೆಸರು ತನ್ನಿ ಎಂದು ಸಚಿವೆ ಹೆಬ್ಬಾಳಕರ ವಿನಂತಿಸಿದರು.

ಒಳ್ಳೆಯ ಉದ್ದೇಶ ಮತ್ತು ಗುರಿ ಇಟ್ಟುಕೊಂಡು ನೌಕರರ ಸಂಘ ಕೆಲಸ ಮಾಡಬೇಕು. ಸಂಘಟನೆಯಲ್ಲಿ ರಾಜಕೀಯ ತರಬೇಡಿ. ಸರ್ವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ವರ ವಿಕಾಸಕ್ಕಾಗಿ ಒಟ್ಟಾಗಿ ಕೆಲಸ ಮಾಡೋಣ. ಸರಕಾರಕ್ಕೆ ಉತ್ತಮ ಹೆಸರು ತರೋಣ ಎಂದ ಹೆಬ್ಬಾಳಕರ್, ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ನನಗೆ ಸದಾ ಮಾರ್ಗದರ್ಶನ ಮಾಡುತ್ತಿರುತ್ತಾರೆ. ಅವರು ಪಕ್ಷಾತೀತವಾಗಿ ತಮ್ಮ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಈ ಸಮ್ಮೇಳದಲ್ಲಿ ಶಾಸಕ ಆಸೀಫ್‌ ಸೇಠ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಫಿರೋಜ್‌ ಸೇಠ್‌, ಸಂಘದ ರಾಜ್ಯ ಘಟಕದ ಅಧ್ಯಕ್ಷ ಮೊಹಮ್ಮದ್‌ಸಲೀಮ್‌ ಹಂಚಿನಮನಿ, ಗೌರವಾಧ್ಯಕ್ಷ ಮೊಹಮ್ಮದ್‌ರಫಿ ಪಾಷಾ, ಪ್ರಧಾನ ಕಾರ್ಯದರ್ಶಿ ಸಯ್ಯದ್‌ ಇಸ್ಮಾಯಿಲ್‌ ಪಾಷಾ, ಅನ್ವರ್‌ ಲಂಗೋಟಿ, ಸಲೀಮ್‌ ನದಾಫ್‌, ಅಬ್ದುಲ್‌ಖಾದರ್‌ ಮೆಣಸಗಿ, ಮೊಹಮ್ಮದ್‌ ಇಕ್ಬಾಲ್‌ ಅಮ್ಮಿನಭಾವಿ, ಆಸೀಫ್ ಅತ್ತಾರ, ಎ.ಬಿ.ಹಕೀಮ್‌, ಶಬ್ಬೀರ್‌ಅಹಮ್ಮದ್‌ ತಟಗಾರ, ಎಂ.ಎಲ್‌.ಜಮಾದಾರ, ಮೊಹ್ಮದ್ ಪಾಷಾ, ಮಿರ್ಜಾ ಅಜ್ಮತುಲ್ಲಾ, ಡಾ. ಯೂಸೂಫ್ ಅಸ್ಲಂಖಾನ್, ಮೈನೂದ್ಧಿನ ಶಿರಹಟ್ಟಿ, ಮುಸ್ಲಿಂ ಸಮಾಜದ ಮುಖಂಡರು, ಮಹಿಳೆಯರು, ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಹಾಗೂ ಜಿಲ್ಲಾ ಘಟಕ ಬೆಳಗಾವಿಯ ಪದಾಧಿಕಾರಿಗಳು ಇತರರಿದ್ದರು.

Share this article