ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ: ಅನುಮತಿ ಕೋರಿ ಹೊಸದಾಗಿ ಅರ್ಜಿ

| N/A | Published : Oct 21 2025, 05:54 AM IST

RSS
ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ: ಅನುಮತಿ ಕೋರಿ ಹೊಸದಾಗಿ ಅರ್ಜಿ
Share this Article
  • FB
  • TW
  • Linkdin
  • Email

ಸಾರಾಂಶ

ಹೈಕೋರ್ಟ್‌ ಸೂಚನೆಯಂತೆ ಆರ್‌ಎಸ್‌ಎಸ್‌ ಮುಖಂಡರು ನ.2 ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿ ಕೋರಿ ಜಿಲ್ಲಾಧಿಕಾರಿ, ಚಿತ್ತಾಪುರ ತಹಸೀಲ್ದಾರ್‌, ನಗರ ಪೊಲೀಸರಿಗೆ ಹೊಸ ಅರ್ಜಿ ಸಲ್ಲಿಸಿದ್ದಾರೆ.

 ಕಲಬುರಗಿ :  ಹೈಕೋರ್ಟ್‌ ಸೂಚನೆಯಂತೆ ಆರ್‌ಎಸ್‌ಎಸ್‌ ಮುಖಂಡರು ನ.2 ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿ ಕೋರಿ ಜಿಲ್ಲಾಧಿಕಾರಿ, ಚಿತ್ತಾಪುರ ತಹಸೀಲ್ದಾರ್‌, ನಗರ ಪೊಲೀಸರಿಗೆ ಹೊಸ ಅರ್ಜಿ ಸಲ್ಲಿಸಿದ್ದಾರೆ.

ಅ.19ರ ಭಾನುವಾರ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನ ಹಮ್ಮಿಕೊಂಡಿತ್ತು. ಅದೇ ದಿನ ಭೀಮ್‌ ಆರ್ಮಿ, ದಲಿತ ಪ್ಯಾಂಥರ್‌ ಸಂಘಟನೆಗಳವರೂ ಪಥ ಸಂಚಲನಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಇದರಿಂದಾಗಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗಬಹುದಾದ ಸಾಧ್ಯತೆಗಳಿವೆ ಎಂಬ ಪೊಲೀಸ್‌ ವರದಿ ಆಧರಿಸಿ ಚಿತ್ತಾಪುರ ತಹಶೀಲ್ದಾರ್‌ ಅವರು ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಿದ್ದರು.

ಚಿತ್ತಾಪುರ ತಹಶೀಲ್ದಾರ್‌ ಅವರ ಆದೇಶ ಪ್ರಶ್ನಿಸಿ ಸಂಘ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಭಾನುವಾರವೇ ತುರ್ತು ವಿಚಾರಣೆ ನಡೆಸಿದ್ದ ಕಲಬುರಗಿ ಹೈಕೋರ್ಟ್‌ ಪೀಠ, ಪಥ ಸಂಚಲನದ ಮಾರ್ಗ, ಭಾಗವಹಿಸುವವರ ಸಂಖ್ಯೆ ಇತ್ಯಾದಿ ತಹಶೀಲ್ದಾರ್‌ ಕೋರಿರುವ ಮಾಹಿತಿಯೊಂದಿಗೆ ಮತ್ತೊಮ್ಮೆ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ, ಆರ್‌ಎಸ್‌ಎಸ್‌ ಮುಖಂಡರು ಕಲಬುರಗಿಯಲ್ಲಿ ಭಾನುವಾರವೇ ಹೊಸ ಅರ್ಜಿ ಸಲ್ಲಿಕೆಗೆ ಮುಂದಾಗಿ ನವೆಂಬರ್ 2 ರಂದು ಚಿತ್ತಾಪುರದಲ್ಲಿ ಪಥ ಸಂಚಲನ ನಡೆಸಲು ಅನುಮತಿ ಕೋರಿದ್ದಾರೆ. ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇರಲಿಲ್ಲ. ಹೀಗಾಗಿ, ಜಿಲ್ಲಾಧಿಕಾರಿಯವರ ಸರ್ಕಾರಿ ನಿವಾಸಕ್ಕೆ ತೆರಳಿದ್ದರು. ಅಲ್ಲಿಯೂ ಅವರು ಲಭ್ಯವಿರದ ಕಾರಣ, ಜಿಲ್ಲಾಧಿಕಾರಿಯವರ ಅಧಿಕೃತ ಎರಡು ಇ-ಮೇಲ್‌ಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ಅವರ ಸರ್ಕಾರಿ ದೂರವಾಣಿ ಸಂಖ್ಯೆಗೆ ವಾಟ್ಸ್ ಆಪ್ ಮುಖಾಂತರವೂ ಅನುಮತಿ ಕೋರಿ, ಮನವಿ ಪತ್ರ ರವಾನಿಸಿದ್ದಾರೆ.

ಅಲ್ಲದೆ, ದೂರವಾಣಿ ಮೂಲಕವೂ ಅವರು ಮಾತನಾಡಿದ್ದು, ಮಂಗಳವಾರ ಜಿಲ್ಲಾಧಿಕಾರಿಗೆ ಖುದ್ದು ಲಿಖಿತ ಅರ್ಜಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು, ಚಿತ್ತಾಪುರ ತಹಶೀಲ್ದಾರ್‌, ಅಲ್ಲಿನ ಪೊಲೀಸ್‌ ಅಧಿಕಾರಿಗಳು, ಸಹಾಯಕ ಆಯುಕ್ತರಿಗೂ ಭಾನುವಾರವೇ ಹೊಸದಾಗಿ ಅರ್ಜಿ ಸಲ್ಲಿಸಿದ್ದು, ನ.2ರಂದು ಪಥ ಸಂಚಲನಕ್ಕೆ ಅನುಮತಿ ಕೋರಿದ್ದಾರೆ.

Read more Articles on