ಕಲಾವಿದರನ್ನು ಸರ್ಕಾರ ಗುರುತಿಸಲಿ

KannadaprabhaNewsNetwork | Published : Aug 22, 2024 12:49 AM

ಸಾರಾಂಶ

ಗುಳೇದಗುಡ್ಡದಲ್ಲಿ ಅಸಂಖ್ಯಾತ ರಂಗಕಲಾವಿದರಿದ್ದಾರೆ. ಕುರುಹಿನಶೆಟ್ಟಿ ಸಮಾಜದ ಹವ್ಯಾಸಿ ಕಲಾವಿದರ ಸಂಖ್ಯೆ ಬೆಳೆಯಬೇಕು. ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ವಿಶ್ರಾಂತ ಪ್ರಾಚಾರ್ಯ, ಚಿಂತಕ ಸಿದ್ದಲಿಂಗಪ್ಪ ಬರಗುಂಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಗುಳೇದಗುಡ್ಡದಲ್ಲಿ ಅಸಂಖ್ಯಾತ ರಂಗಕಲಾವಿದರಿದ್ದಾರೆ. ಕುರುಹಿನಶೆಟ್ಟಿ ಸಮಾಜದ ಹವ್ಯಾಸಿ ಕಲಾವಿದರ ಸಂಖ್ಯೆ ಬೆಳೆಯಬೇಕು. ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ವಿಶ್ರಾಂತ ಪ್ರಾಚಾರ್ಯ, ಚಿಂತಕ ಸಿದ್ದಲಿಂಗಪ್ಪ ಬರಗುಂಡಿ ಹೇಳಿದರು.

ಪಟ್ಟಣದ ಗಿರೀಶ ಪ್ರಕಾಶನದ ಆಶ್ರಯದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಮಹಾದೇವಯ್ಯ ನೀಲಕಂಠಮಠ ರಚಿಸಿದ ಎರಡು ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿಗಳ ಕುರಿತು ವಿಮರ್ಶೆ ಮಾಡಿ ಮಾತನಾಡಿ, ನೀಲಕಂಠ ಮಲ್ಲಿಕಾರ್ಜುನ ಪುರಾಣ ಶಾಸ್ತ್ರಬದ್ಧವಾಗಿ ಗ್ರಂಥ ರಚನೆಯಾಗಿದೆ. ಇದು ಕುರುಹಿನಶಟ್ಟಿ ಸಮಾಜದ ಧರ್ಮ ಗ್ರಂಥವೆಂತಲೂ ಕರೆಯಬಹುದು. ಗ್ರಂಥ ರಚನೆ, ಸಂಪಾದನೆ ಕಷ್ಟದ ಕೆಲಸ. ಸಾಕಷ್ಟು ಅಲೆದಾಟ, ವಿಷಯ ಗ್ರಹಿಕೆ, ಸಂಗ್ರಹದ ಮೂಲಕ ಪುರಾಣ ಗ್ರಂಥ ರಚನೆಗೊಂಡಿದೆ. ಅದರಂತೆ ಗುಳೇದಗುಡ್ಡದ ಕುರುಹಿನಶೆಟ್ಟಿ ಸಮಾಜದ ಹವ್ಯಾಸಿ ಕಲಾವಿದರ ಕುರಿತಾಗಿ ಬರೆದ ಗ್ರಂಥವೂ ಚಿಕ್ಕದಾಗಿದ್ದರೂ ಅನೇಕ ರಂಗಕಲಾವಿದರ ಮಾಹಿತಿ ಸಂಗ್ರಹಿಸಲಾಗಿದೆ. ಇಂದು ರಂಗಭೂಮಿಯ ಕಲಾವಿದರ ಅಭಿವೃದ್ಧಿ ಅವಶ್ಯಕವಾಗಿದೆ. ಕಲಾವಿದರಿಗೆ ಸರ್ಕಾರ ಸಾಲ ಸೌಲಭ್ಯ, ಸಹಾಯ ನೀಡುವ ಕೆಲಸ ಮಾಡಲಿ ಎಂದರು.

ಧಾರವಾಡದ ವಿಶ್ರಾಂತ ಪ್ರಾಚಾರ್ಯ ಟಿ.ಬಿ. ಚಿಲಕವಾಡ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಲೇಖಕ ಮಹಾದೇವಯ್ಯ ನೀಲಕಂಠಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಪಾದನಾ ಕೃತಿಯಾಗಿರುವ ಶ್ರೀನೀಲಕಂಠ ಮಲ್ಲಿಕಾರ್ಜುನ ಪುರಾಣದ ಹಸ್ತಪ್ರತಿಯನ್ನು ಸಂಗ್ರಹಿಸಿ ಮುದ್ರಣ ಮಾಡಿರುವುದಾಗಿ ಹಾಗೂ ಗುಳೇದಗುಡ್ಢ ಕುರುಹಿನಶೆಟ್ಟಿ ಹವ್ಯಾಸಿ ಕಲಾವಿದರ ಕುರಿತಾದ ಸಂಕ್ಷಿಪ್ತ ಮಾಹಿತಿ ಸಂಗ್ರಹಿಸಿ ಪುಸ್ತಕ ರೂಪ ಕೊಟ್ಟಿದ್ದೇನೆ. ಇದಕ್ಕೆ ಬಹಳ ವರ್ಷಗಳ ಪರಿಶ್ರಮವೂ ಇದೆ ಎಂದು ಹೇಳಿದರು.

ಹುಬ್ಬಳ್ಳಿ ವೀರಭಿಕ್ಷಾವರ್ತೆಮಠದ ಪೀಠಾಧ್ಯಕ್ಷ ಶ್ರೀಶಿವಶಂಕರ ಶಿವಾಚಾರ್ಯ ಶ್ರೀಗಳು, ಗುರುಸಿದ್ದೇಶ್ವರ ಬ್ರಹನ್ಮಠದ ಬಸವರಾಜ ಪಟ್ಟದಾರ್ಯ ಶ್ರೀಗಳು, ಶ್ರೀ ಗುರುಬಸವ ದೇವರು ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ಕಲೆಗೆ ತಮ್ಮ ಜೀವ ಸವೆದು ಹೋದ ಕಲಾವಿದರನ್ನು ಈ ಗ್ರಂಥ ಗುರುತಿಸುವ ಕೆಲಸ ಮಾಡಿದೆ. ಒಂದು ಜನಾಂಗದವರ ಕಲೆ ಮತ್ತು ಸಂಸ್ಕೃತಿಯ ಪರಿಚಯಿಸುವ ಕೆಲಸವನ್ನು ಲೇಖಕರು ಮಾಡಿದ್ದಾರೆ. ಅವರ ಶ್ರಮ ಸಾರ್ಥಕವಾದುದು ಎಂದರು. ದ್ರಾಕ್ಷಾಯಣಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಮುರಗೇಶ ಶೇಖಾ ವಂದಿಸಿದರು.

Share this article