ಕುಡಿವ ನೀರು ಸರಬರಾಜು ಯೋಜನೆ ಹಂತ-2 ರ ಕಾಮಗಾರಿಗೆ ಶಾಸಕ ಬಿ.ಜಿ.ಗೋವಿಂದಪ್ಪ ಕನ್ನಡಪ್ರಭ ವಾರ್ತೆ ಹೊಸದುರ್ಗ
ಶುಕ್ರವಾರ ತಾಲೂಕಿನ ಹೊಸುರಾಳ್ ಹಾಗೂ ಕಪ್ಪನಾಯಕನಹಳ್ಳಿ ಗ್ರಾಮದಲ್ಲಿ ಬಹುಗ್ರಾಮ ಯೋಜನೆಯಡಿ ಭದ್ರಾ ಜಲಾಶಯದಿಂದ ಹೊಸದುರ್ಗ ಪಟ್ಟಣ ಮತ್ತು ತಾಲೂಕಿನ 346 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಯ ಹಂತ-2 ರ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕಳೆದ ಅವಧಿಯಲ್ಲಿ ಶಾಸಕನಾಗಿದ್ದಾಗ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿನ ನೀರಿನ ಗುಣಮಟ್ಟವನ್ನು ಪರೀಕ್ಷೆ ಮಾಡಿಸಿದಾಗ ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದ ಹಿನ್ನಲೆಯಲ್ಲಿ ತರೀಕೆರೆ ತಾಲೂಕಿನ 70 ಗ್ರಾಮ, ಅಜ್ಜಂಪುರ ತಾಲೂಕಿನ 102 ಗ್ರಾಮಗಳಿಗೆ ನೀರು ಕೊಟ್ಟು ನಮ್ಮ ತಾಲೂಕಿನ 346 ಹಳ್ಳಿಗಳಿಗೆ ಶುದ್ಧ ನೀರು ಬರಲಿದ್ದು ಈ ಕಾಮಗಾರಿಯನ್ನು 2 ಹಂತದಲ್ಲಿ ನಡೆಸಲಾಗುತ್ತಿದೆ. ಸುಮಾರು 580 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಈಗಾಗಲೇ ಲಕ್ಕುವಳ್ಳಿ ಜಲಾಶಯದಲ್ಲಿ ಬಳಿ 80 ಲಕ್ಷ ಲೀಟರ್ ಸಾಮರ್ಥ್ಯದ ನೀರು ಸಂಗ್ರಹಣದ ಘಟಕದ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದ್ದು ಡ್ಯಾಂ ಬಳಿ 40 ಲಕ್ಷ, ಸಕ್ಕೆ ಬಳಿ 20 ಲಕ್ಷ, ಗಡಿ ಅಹಮದ್ ನಗರದ ಬಳಿ 28 ಲಕ್ಷ ಹಾಗೂ ಹೊಸದುರ್ಗದ ಡಿಗ್ರಿ ಕಾಲೇಜು ಬಳಿ 20 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ ಎಂದರು.ತಾಲೂಕಿನ ಎಲ್ಲಾ ಗ್ರಾಪಂ ಸದಸ್ಯರು ತಮ್ಮ ಗ್ರಾಮಗಳಲ್ಲಿ ಪೈಪ್‌ಲೈನ್ ಮಾಡಲು ಬಂದಾಗ ಯಾವುದೇ ಅಡೆ ತಡೆ ಮಾಡದೆ ಕೆಲಸ ಮಾಡಿಸಿಕೊಳ್ಳಿ. ಗುತ್ತಿಗೆದಾರರಿಗೆ ಬೇಗ ಕೆಲಸ ಮುಗಿಸಲು ಹೇಳಿದ್ದಾನೆ. ಇದರ ಜೊತೆಯಲ್ಲಿಯೇ ಕೆರೆಗಳಿಗೆ ನೀರು ಹರಿಸುವ ಹಾಗೂ ಹೊಲಗಳಿಗೆ ನೀರು ಕೊಡುವ ಕೆಲಸವೂ ನಡೆಯುತ್ತಿದ್ದು ಈ ಮೂರು ಯೋಜನೆಯನ್ನು ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು. ಈ ವೇಳೆ ಸ್ಥಳಿಯ ಗ್ರಾಪಂ ಅಧ್ಯಕ್ಷರು ಹಾಗೂ ಮುಖಂಡರು ಹಾಜರಿದ್ದರು.