ಕೊಲ್ಲೂರು ದೇವಳದಲ್ಲಿ ‘ಮಾಂಗಲ್ಯ ಭಾಗ್ಯ’ ಸಾಮೂಹಿಕ ವಿವಾಹ

KannadaprabhaNewsNetwork |  
Published : Mar 10, 2025, 12:15 AM IST
ಬಾಬು ಶೆಟ್ಟಿ | Kannada Prabha

ಸಾರಾಂಶ

8 ಗ್ರಾಂ ತೂಕದ ಚಿನ್ನದ ಮಾಂಗಲ್ಯ, ವಧು-ವರರಿಗೆ ನಗದು, ಬಟ್ಟೆ ಸಹಿತ 75,000 ರು. ಮೌಲ್ಯದ ಉಡುಗೊರೆಗಳನ್ನು ದೇವಸ್ಥಾನದ ವತಿಯಿಂದ ನೀಡಲಾಗುತ್ತದೆ. ಮದುವೆ ಹಾಗೂ ಊಟೋಪಚಾರದ ಖರ್ಚು ದೇವಸ್ಥಾನದ ವತಿಯಿಂದಲೇ ನೀಡಲಾಗುತ್ತಿದೆ.

ನಾಲ್ಕು ಜೋಡಿಯ ವಿವಾಹ ಮಹೋತ್ಸವ । ವಧೂವರರಿಗೆ ಮಾಂಗಲ್ಯ, ನಗದು, ಬಟ್ಟೆ, ಉಡುಗೊರೆ

ಕನ್ನಡಪ್ರಭ ವಾರ್ತೆ ಕುಂದಾಪುರ

ಕಳೆದ 5 ವರ್ಷಗಳಿಂದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮಾಂಗಲ್ಯ ಭಾಗ್ಯ ಯೋಜನೆ ಮೂಲಕ ಶ್ರೀ ಕ್ಷೇತ್ರ ಕೊಲ್ಲೂರಿನಲ್ಲಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನವ ದಂಪತಿ ಭವಿಷ್ಯದ ಜೀವನ ಉಜ್ವಲವಾಗಿರಬೇಕು ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ ಹೇಳಿದರು.ಕೊಲ್ಲೂರಿನ ಸ್ವರ್ಣಮುಖಿ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಲಾದ ಸಾಮೂಹಿಕ ವಿವಾಹ ‘ಮಾಂಗಲ್ಯ ಭಾಗ್ಯ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

8 ಗ್ರಾಂ ತೂಕದ ಚಿನ್ನದ ಮಾಂಗಲ್ಯ, ವಧು-ವರರಿಗೆ ನಗದು, ಬಟ್ಟೆ ಸಹಿತ 75,000 ರು. ಮೌಲ್ಯದ ಉಡುಗೊರೆಗಳನ್ನು ದೇವಸ್ಥಾನದ ವತಿಯಿಂದ ನೀಡಲಾಗುತ್ತದೆ. ಮದುವೆ ಹಾಗೂ ಊಟೋಪಚಾರದ ಖರ್ಚು ದೇವಸ್ಥಾನದ ವತಿಯಿಂದಲೇ ನೀಡಲಾಗುತ್ತಿದೆ. ಬಡವರಿಗೆ ಹಾಗೂ ಅಪೇಕ್ಷಿತರಿಗೆ ಈ ಯೋಜನೆ ಉಪಯೋಗವಾಗಲಿ ಎಂದು ಸಾಕಷ್ಟು ಪ್ರಚಾರ ನಡೆಸಿದ್ದರೂ, ನಿರೀಕ್ಷೆಯಷ್ಟು ಜೋಡಿ ಬಾರದೆ ಇರುವ ಕುರಿತು ಬೇಸರವಿದೆ. ಈ ಕಾರ್ಯಕ್ರಮ ಇನ್ನಷ್ಟು ಜನರಿಗೆ ತಲುಪುವ ನಿಟ್ಟಿನಲ್ಲಿ ದೇವಸ್ಥಾನದ ವತಿಯಿಂದ ಮುಂದಿನ ದಿನಗಳಲ್ಲಿ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು. ಜಗನ್ಮಾತೆ ಮೂಕಾಂಬಿಕೆ ಸನ್ನಿಧಿಯಲ್ಲಿ ನವಜೀವನ ಆರಂಭಿಸುವ ದಂಪತಿ ಬಾಳು ಅಭಿವೃದ್ಧಿಯಾಗಲಿ ಎಂದು ಅವರು ಹಾರೈಸಿದರು.

ವ್ಯವಸ್ಥಾಪನಾ ಸಮಿತಿ ಸದಸ್ಯ ರಘುರಾಮ ದೇವಾಡಿಗ ಆಲೂರು ಮಾತನಾಡಿ, ಇಂದು ದಾಂಪತ್ಯ ಜೀವನ ಆರಂಭಿಸಿರುವ ‌ಜೋಡಿಗಳಲ್ಲಿ ಒಬ್ಬರು ವಿಶೇಷ ಚೇತನರು ಇರುವುದು ಖುಷಿ ತಂದಿದೆ. ಸರ್ಕಾರದ ಯೋಜನೆಗಳು ನೊಂದವರ ಬಾಳಿನಲ್ಲಿ ಬೆಳಕನ್ನು ತರುತ್ತದೆ ಎನ್ನುವುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಕಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವ್ಯವಸ್ಥಾಪನಾ ಸಮಿತಿ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುರೇಂದ್ರ ಶೆಟ್ಟಿ ಸಹನಾ ಗ್ರೂಪ್ಸ್, ಧನಾಕ್ಷಿ ವಿಶ್ವನಾಥ್ ಪೂಜಾರಿ, ಮಹಾಲಿಂಗ ನಾಯ್ಕ್, ಸುಧಾ ಕೆ. ಇದ್ದರು.

ಕ್ಷೇತ್ರ ಪುರೋಹಿತ ಗಜಾನನ ಜೋಶಿ ವೇದಘೋಷ ಪಠಣ ಮಾಡಿದರು. ಉಪನ್ಯಾಸಕ ಉದಯ್ ನಾಯ್ಕ್ ನಿರೂಪಿಸಿದರು. ಗಣಪತಿ ಭಟ್ ವಂದಿಸಿದರು.

ನಾಲ್ಕು ಜೋಡಿಗೆ ಮಾಂಗಲ್ಯ ಭಾಗ್ಯ:

ಕೃಷ್ಣ ಖಾರ್ವಿ ಉಪ್ಪುಂದ ಮತ್ತು ಕಲ್ಪನಾ ಖಾರ್ವಿ ನಾವುಂದ, ಮಂಜುನಾಥ ಖಾರ್ವಿ ಪಾಳ್ಯದವರ ತೊಪ್ಲು ತಾರಪತಿ‌ ಮತ್ತು ಮಧುರಾ ಸರಪುರಹಿತ್ಲು ಬಿಜೂರು, ಆನಂದ‌ ನಾಯ್ಕ್ ಹೆಗ್ಡೆಹಕ್ಲು ಕೊಲ್ಲೂರು ಮತ್ತು ಚಂದ್ರಾವತಿ ನಾಯ್ಕ್ ಖಾರ್ವಿಕೇರಿ ಕುಂದಾಪುರ ಹಾಗೂ ಮಂಜುನಾಥ ಕೋಟೇಶ್ವರ ಮತ್ತು ಅಶ್ವಿತಾ ಮಣೂರು ಜೋಡಿ ಸಪ್ತಪದಿ ತುಳಿದು ದಾಂಪತ್ಯ ಜೀವನ ಪ್ರವೇಶಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ