ಕನ್ನಡಪ್ರಭ ವಾರ್ತೆ ಅರಕಲಗೂಡು
ದೇಶದ ಬದಲಾವಣೆ ವಿದ್ಯಾಭ್ಯಾಸದಿಂದ ಮಾತ್ರ ಸಾಧ್ಯ. ಆದ್ದರಿಂದ ರೈತರು ತಮ್ಮ ಮಕ್ಕಳನ್ನು ವಿದ್ಯಾವಂತರಾಗಿ, ಬುದ್ಧಿವಂತರನ್ನಾಗಿ, ಮಾಡಬೇಕು ಎಂದು ಶಾಸಕ ಎ.ಮಂಜು ಮನವಿ ಮಾಡಿದರು.ಸಮೀಪದ ಮುತ್ತುಗದ ಹೊಸೂರು ಗ್ರಾಮದಲ್ಲಿ ಅರಕಲಗೂಡು ತಾಲೂಕು ಕುಂಚಿಟಿಗರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 11ನೇ ವರ್ಷದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಕೇಂದ್ರ ಒಬಿಸಿ ಮೀಸಲು ಹಕ್ಕೊತ್ತಾಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಪೋಷಕರೂ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿ ಅವರಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ, ಸುಸಂಸ್ಕೃತರಾಗಿ ಬಾಳುವಂತೆ ಮಾಡಬೇಕು ಎಂದು ತಿಳಿಸುತ್ತಾ, ಕುಂಚಿಟಿಗರಿಗೆ ಒಬಿಸಿ ಸವಲತ್ತುಗಳು ಸಿಕ್ಕಿಲ್ಲ. ಕುಂಚಿಟಿಗರು ಬುಡಕಟ್ಟು ಸಂಸ್ಕೃತಿಯಿಂದ ಕೃಷಿ ಹಿನ್ನೆಲೆಯಲ್ಲಿ ಬಂದಿದ್ದು, ಒಕ್ಕಲಿಗ ಸಮುದಾಯದ ಬಹುದೊಡ್ಡ ಅಂಗವೆಂದು ಕುಂಚಿಟಿಗ ಕುಲಶಾಸ್ತ್ರ ಅಧ್ಯಯನದಲ್ಲಿ ಸ್ಪಷ್ಟಪಡಿಸಿದ್ದರೂ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಮೀಸಲಾತಿ ಸಿಕ್ಕಿಲ್ಲ. ಇದಕ್ಕಾಗಿ ನಡೆಸುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.ಕುಂಚಿಟಿಗರ ಸಂಘದ ಅಧ್ಯಕ್ಷ ಎಂ ಟಿ ಪಾಂಡುರಂಗ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ತಮ್ಮ ಜಾತಿ ದೃಢೀಕರಣ ಪತ್ರದಲ್ಲಿ ಕುಂಚಿಟಿಗ ಎಂದು ನಮೂದಿಸಿರುವವರಿಗೆ ಒಬಿಸಿಯಿಂದ ಅನ್ಯಾಯವಾಗಿದೆ. ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಕುಂಚಿಟಿಗ ಸಮಾಜದವರು ಒಕ್ಕಲಿಗ ಎಂದು ನಮೂದಿಸಿಕೊಂಡಿದ್ದಾರೆ. ಕುಂಚಿಟಿಗ ಒಕ್ಕಲಿಗ ಎಂದು ಕರೆಯಲಾಗುತ್ತಿದ್ದು ಅವರಿಗೆ 3ಎ ಸೌಲಭ್ಯ ದೊರೆಯುತ್ತಿದೆ. ಹಿಂದುಳಿದಿರುವ ನಮ್ಮ ಸಮಾಜಕ್ಕೆ ಮೀಸಲಾತಿ ಬೇಕಿದೆ. ಅದು ನಮ್ಮ ಸಮಾಜದ ಹಕ್ಕಾಗಿದ್ದು ಗೊಂದಲಗಳಿಗೆ ಒಳಗಾಗುವುದು ಬೇಡ. ಇಡೀ ಸಮುದಾಯ ಮೀಸಲಾತಿ ಪಡೆಯಲು ಹೋರಾಟ ಮಾಡಬೇಕು ಎಂದರು.ಅರಕಲಗೂಡು ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ ಆಶೀರ್ವಚನ ನೀಡಿದರು. ಸ್ವಸ್ಥ ಸಮಾಜ ನಿರ್ಮಾಣ ಸಮಿತಿ ಅಧ್ಯಕ್ಷ ಪ್ರದೀಪ್ ರಾಮಸ್ವಾಮಿ, ತಾಲೂಕು ಕುಂಚಿಟಿಗರ ಸಂಘದ ಗೌರವಾಧ್ಯಕ್ಷ ಗೋವಿಂದೇಗೌಡ, ಕೃಷ್ಣೇಗೌಡ ಎಚ್.ವಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇಕಡಾ 80ಕ್ಕೂ ಹೆಚ್ಚು ಫಲಿತಾಂಶ ಪಡೆದ ಸುಮಾರು 55 ಕುಂಚಿಟಿಗ ಸಮುದಾಯದ ಮಕ್ಕಳು ಮತ್ತು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಮಕ್ಕಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಸಿ.ಎಸ್. ರಂಗನಾಥ್, ಜಿ.ಪಂ ಮಾಜಿ ಅಧ್ಯಕ್ಷೆ ಭಾಗ್ಯ ಗೋವಿಂದೇಗೌಡ, ತಾಲೂಕು ಕುಂಚಿಟಿಗರ ಸಂಘದ ಉಪಾಧ್ಯಕ್ಷ ವೈ.ಟಿ. ಕುಮಾರ್, ಚಂದ್ರೇಗೌಡ, ಸತೀಶ, ವಿಶ್ವನಾಥ್, ಅಣ್ಣೇಗೌಡ, ಲತಾ ಈರೇಗೌಡ, ಕೆ .ಕೆ. ಹರೀಶ್, ಎನ್.ಕೆ.ರಾಮೇಗೌಡ, ಎನ್.ಅಸರ್. ಭಾಸ್ಕರ್, ರವಿ, ಚಂದ್ರಶೇಖರ್, ಕಾಳೇಗೌಡ , ಶಿವಣ್ಣ, ಮುತ್ತುಗದ ಹೊಸೂರು ಗ್ರಾಮದ ಮುಖಂಡರು, ಸಮಾಜದ ಭಾಂಧವರು ಮತ್ತಿತರರು ಇದ್ದರು.--------ಫೊಟೋ ಶೀರ್ಷಿಕೆ
ಅರಕಲಗೂಡು ತಾಲೂಕು ಕೊಣನೂರು ಸಮೀಪದ ಮುತ್ತುಗದ ಹೊಸೂರು ಗ್ರಾಮದಲ್ಲಿ ಅರಕಲಗೂಡು ತಾಲೂಕು ಕುಂಚಿಟಿಗರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 11ನೇ ವರ್ಷದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಕೇಂದ್ರ ಒಬಿಸಿ ಮೀಸಲು ಹಕ್ಕೊತ್ತಾಯ ಸಭೆಯನ್ನು ಶಾಸಕ ಎ. ಮಂಜು ಉದ್ಘಾಟಿಸಿದರು.ಕೊಣನೂರು ಸಮೀಪದ ಮುತ್ತುಗದ ಹೊಸೂರು ಗ್ರಾಮದಲ್ಲಿ ಅರಕಲಗೂಡು ತಾಲೂಕು ಕುಂಚಿಟಿಗರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 11ನೇ ವರ್ಷದ ವಾರ್ಷಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.