25 ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪೊನ್ನಣ್ಣ ಚಾಲನೆ

KannadaprabhaNewsNetwork | Published : Mar 8, 2024 1:45 AM

ಸಾರಾಂಶ

ರಸ್ತೆ, ಕುಡಿಯುವ ನೀರು, ವಿದ್ಯುತ್, ಸೇತುವೆ, ತಡೆಗೋಡೆ ಸೇರಿದಂತೆ ಸುಮಾರು 25 ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಗುರುವಾರ ವಿರಾಜಪೇಟೆ ಕ್ಷೇತ್ರದಲ್ಲಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕಿನ ಪೆರಾಜೆ, ಚೆಂಬು, ಸಂಪಾಜೆ, ಮದೆನಾಡು, ಮೇಕೇರಿ, ಹಾಗೂ ಹಾಕತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಚಾಲನೆ ದೊರಕಿತು.

ರಸ್ತೆ, ಕುಡಿಯುವ ನೀರು, ವಿದ್ಯುತ್, ಸೇತುವೆ, ತಡೆಗೋಡೆ ಸೇರಿದಂತೆ ಸುಮಾರು 25 ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು.

ಪೆರಾಜೆ ಗ್ರಾ.ಪಂ.ವ್ಯಾಪ್ತಿಯಲ್ಲಿ ರಸ್ತೆ, ಕುಡಿಯುವ ನೀರು, ಸೇತುವೆ ಕಾಮಗಾರಿ, ಹಾಗೆಯೇ ಚೆಂಬು ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆ, ಆಟದ ಮೈದಾನ ನಿರ್ಮಾಣಕ್ಕಾಗಿ ಕ್ರೀಡಾ ಇಲಾಖೆಗೆ 4 ಎಕರೆ ಭೂಮಿ ಹಸ್ತಾಂತರ, ತಡೆಗೋಡೆ ಉದ್ಘಾಟನೆ, ಮದೆನಾಡು ಗ್ರಾ.ಪಂ.ವ್ಯಾಪ್ತಿಯ ಕಾಟಕೇರಿ ಬಳಿ 12.6 ಕೋಟಿ ರೂ ವೆಚ್ಚದಲ್ಲಿ 66/11 ಕೆ.ವಿ. ಸಾಮರ್ಥ್ಯದ ವಿದ್ಯುತ್ ಉಪ ಕೇಂದ್ರ ನಿರ್ಮಾಣಕ್ಕೆ ಭೂಮಿಪೂಜೆ, ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯ 4 ಕೋಟಿ ರು. ವೆಚ್ಚದ ರಸ್ತೆ ನಿರ್ಮಾಣ ಮತ್ತಿತರ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಸಾರ್ವಜನಿಕರ ಅಹವಾಲು ಆಲಿಸಿ ಮನವಿ ಪತ್ರಗಳನ್ನು ಸ್ವೀಕರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೊಡಗು ಜಿಲ್ಲೆಗೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಸೇರಿದಂತೆ ವಿವಿಧ ಅಭಿವೃದ್ಧಿಗೆ ಸುಮಾರು 250 ಕೋಟಿ ರು.ಗೆ ಅನುಮೋದನೆ ನೀಡಿದೆ ಎಂದು ಎ.ಎಸ್.ಪೊನ್ನಣ್ಣ ಮಾಹಿತಿ ನೀಡಿದರು.

ವಿರಾಜಪೇಟೆ ವಿಧಾನಸಭಾ ಕ್ಷೇತ್ರವು ವಿಶಾಲ ವ್ಯಾಪ್ತಿ ಹೊಂದಿದೆ. ಕರಿಕೆ, ಪೆರಾಜೆ, ಸಂಪಾಜೆಯಿಂದ, ಕುಟ್ಟ, ಮಾಲ್ದಾರೆ ವ್ಯಾಪ್ತಿಗೆ ಒಳಗೊಂಡಂತೆ ವಿಶಾಲ ಭೂವಿಸ್ತೀರ್ಣ ಹೊಂದಿದೆ. ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಆಲಿಸಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದ್ದು, ರಸ್ತೆ, ಕುಡಿಯುವ ನೀರು, ವಿದ್ಯುತ್ ಪೂರೈಕೆಗೆ ಪ್ರಥಮ ಆದ್ಯತೆ ನೀಡಿದೆ. ಆ ನಿಟ್ಟಿನಲ್ಲಿ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.

ಸರ್ಕಾರ ಬಡವರ ಪರ ಕೆಲಸ ಮಾಡುತ್ತಿದ್ದು, ಧ್ವನಿ ಇಲ್ಲದವರನ್ನು ಮೇಲೆತ್ತಲು ಪ್ರಯತ್ನಿಸುತ್ತಿದೆ. ಅಭಿವೃದ್ಧಿ ಪರ ಕೆಲಸ ಮಾಡುತ್ತಿದೆ ಎಂದು ಪೊನ್ನಣ್ಣ ಹೇಳಿದರು.

ಸಾರ್ವಜನಿಕರೊಬ್ಬರು ಮಾತನಾಡಿ, ಚೆಂಬು ಗ್ರಾ.ಪಂ.ಕಚೇರಿಯಿಂದ ಕುದುರೆಪಾಯ ಮಾರ್ಗದ ಮೂರು ಕಡೆಗಳಲ್ಲಿ ರಸ್ತೆಯನ್ನು ಅಗೆದಿದ್ದು, ಹಾಳು ಮಾಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು. ರಸ್ತೆ ಕಾಮಗಾರಿ ಹೆಸರಿನಲ್ಲಿ ದುರುಪಯೋಗ ಆಗಬಾರದು ಎಂದು ಶಾಸಕರ ಗಮನಕ್ಕೆ ತಂದರು.

ಪ್ರತಿಕ್ರಿಯೆ ನೀಡಿದ ಪೊನ್ನಣ್ಣ, ಯಾವುದೇ ಕಾಮಗಾರಿಯಲ್ಲಿ ದುರುಪಯೋಗ ಕಂಡುಬಂದರೆ ಅಂತಹ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು. ಎಲ್ಲರೂ ಶ್ರದ್ಧೆ, ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು. ಮೇಲುಚೆಂಬು ಭಾಗದಲ್ಲಿ ಆಟದ ಮೈದಾನ ನಿರ್ಮಾಣ ಸಂಬಂಧ ಜಾಗ ಹಸ್ತಾಂತರ ಸಂದರ್ಭದಲ್ಲಿ ಮೊಬೈಲ್ ಟವರ್ ನಿರ್ಮಾಣ ಮಾಡಿಕೊಡುವಂತೆ ಶಾಸಕರಲ್ಲಿ ಸ್ಥಳೀಯರು ಕೋರಿದರು.

ಚೆಂಬು ಗ್ರಾಮದ ಪ್ರಮುಖರಾದ ಹೊಸೂರು ಸೂರಜ್ ಮಾತನಾಡಿ ಪೆರಾಜೆ, ಚೆಂಬು, ಸಂಪಾಜೆ ಭಾಗಕ್ಕೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕರು ಹೆಚ್ಚಿನ ಅನುದಾನ ಒದಗಿಸಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಮತ್ತಿತರ ಮೂಲ ಸೌಲಭ್ಯಕ್ಕೆ ಒತ್ತು ನೀಡಿದ್ದಾರೆ. ಹಾಗೆಯೇ ದೇವಾಲಯಗಳ ಅಭಿವೃದ್ಧಿಗೂ ಸಹ ಕೈಜೋಡಿಸಿದ್ದಾರೆ ಎಂದು ಹೇಳಿದರು.

ಪ್ರಮುಖರಾದ ಎಂ.ಲಕ್ಷ್ಮಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಟಿ.ವಿಸ್ಮಯಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕಿನ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನೆರವಂಡ ಉಮೇಶ್, ಪ್ರಮುಖರಾದ ಧರ್ಮಜ ಉತ್ತಪ್ಪ, ಇಸ್ಮಾಯಿಲ್, ಕೊಲ್ಯದ ಗಿರೀಶ್, ತೆನ್ನಿರಾ ಮೈನಾ, ಸುರೇಶ್, ಶಶಿ ಇತರರು ಇದ್ದರು.

Share this article