ಶಾಸಕಿ ಎಂ.ಪಿ. ಲತಾ ಕಚೇರಿಯಲ್ಲಿ ಕಳ್ಳತನ: ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ

| Published : Nov 06 2025, 02:30 AM IST

ಶಾಸಕಿ ಎಂ.ಪಿ. ಲತಾ ಕಚೇರಿಯಲ್ಲಿ ಕಳ್ಳತನ: ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಹರಪನಹಳ್ಳಿ ಪೊಲೀಸರ ಕಾರ್ಯಾಚರಣೆ ನಡೆಸಿ ಬಂಧಿತರಿಂದ ₹11.65 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಜಪ್ತಿ ಮಾಡಿದ್ದಾರೆ.

ಹೊಸಪೇಟೆ: ವಿಜಯನಗರ ಜಿಲ್ಲೆ ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಅವರ ಕಚೇರಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಭೇದಿಸಿರುವ ಹರಪನಹಳ್ಳಿ ಪೊಲೀಸರು ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ₹11.65 ಲಕ್ಷ ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿದ ಎಸ್ಪಿ ಎಸ್. ಜಾಹ್ನವಿ, ಮಧ್ಯಪ್ರದೇಶ ಮೂಲದ ಜಿಲ್ಯ ಅಲಿಯಾಸ್‌ ಜೀಲು ಮತ್ತು ರಾಕೇಶ್ ಪವಾರ್‌ ಅಲಿಯಾಸ್‌ ರಾಕೇಶ್ ಎಂಬ ಅಂತಾರಾಜ್ಯ ಕಳ್ಳರಿಬ್ಬರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಹರಪನಹಳ್ಳಿ ಠಾಣೆಯ ಪೊಲೀಸರು ಉತ್ತಮ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿ ಚಿನ್ನಾಭರಣ ವಶಪಡಿಸಿದ್ದಾರೆ ಎಂದು ತಿಳಿಸಿದರು.

ಪ್ರಕರಣದ ವಿವರ:

ಕಳೆದ ಜು. 17ರಂದು ಮಧ್ಯರಾತ್ರಿ ಒಂದು ಗಂಟೆಯಿಂದ ಬೆಳಗಿನ ಜಾವ 4ರ ಅವಧಿಯಲ್ಲಿ ಹರಪನಹಳ್ಳಿ ಪಟ್ಟಣದ ಕಾಶಿ ಸಂಗಮೇಶ್ವರ ಬಡಾವಣೆಯ ಶಾಸಕಿ ಎಂ.ಪಿ. ಲತಾ ಅವರ ಕಚೇರಿಯ ಬಾಗಿಲಿನ ಚಿಲಕ ಮುರಿದ ಕಳ್ಳರು, ಗೋದ್ರೇಜ್ ಬೀರುವಿನ ಬೀಗ ಒಡೆದು, ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿ ಪರಾರಿ ಆಗಿದ್ದರು. ಈ ಕುರಿತು ಹರಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ಬೇಧಿಸಲು ಎಸ್ಪಿ ಎಸ್. ಜಾಹ್ನವಿ, ಎಎಸ್ಪಿ ಜಿ. ಮಂಜುನಾಥ, ಹರಪನಹಳ್ಳಿ ಡಿವೈಎಸ್ಪಿ ವೆಂಕಟಪ್ಪ ನಾಯಕ ಮಾರ್ಗದರ್ಶನದಲ್ಲಿ ಹರಪನಹಳ್ಳಿ ಪಿಐ ಮಹಾಂತೇಶ ಜಿ. ಸಜ್ಜನ್ ಹಾಗೂ ಪಿಎಸ್‌ಐ ಶಂಭುಲಿಂಗ ಹಿರೇಮಠ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿತ್ತು.

ಸಿಪಿಐ ಮಹಾಂತೇಶ್ ಸಜ್ಜನ್ ಹಾಗೂ ಪಿಎಸ್‌ಐ ಶಂಭುಲಿಂಗ ಹಿರೇಮಠ ನೇತೃತ್ವದ ಅಧಿಕಾರಿಗಳ ತಂಡ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಕಾರ್ಯಾಚರಣೆ ನಡೆಸಿ, ಮಧ್ಯಪ್ರದೇಶ ಮೂಲದ ಜಿಲ್ಯ ಅಲಿಯಾಸ್‌ ಜೀಲು ಮತ್ತು ರಾಕೇಶ್ ಪವಾರ್‌ ಅಲಿಯಾಸ್‌ ರಾಕೇಶ್ ಎಂಬ ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ಶಾಸಕಿ ಎಂ.ಪಿ. ಲತಾರ ಮನೆಯಿಂದ ಕಳ್ಳತನವಾಗಿದ್ದ ಅಂದಾಜು ₹11.65 ಲಕ್ಷ ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಬಿ. ಮೀನಾಕ್ಷಿ, ಸಿಬ್ಬಂದಿ ರವಿ ದಾದಾಪುರ, ಆನಂದ, ಮಾಲತೇಶ, ಗುರುರಾಜ, ನಾಗರಾಜ, ಮುಬಾರಕ್, ಯರ‍್ರಿಸ್ವಾಮಿ, ನಾಗನಗೌಡ ಬಿ., ಜಗದೀಶ್, ಇಮಾಮ್ ಸಾಹೇಬ್, ನಾಗರಾಜ ಎಲ್., ಕುಮಾರ ನಾಯ್ಕ ಭಾಗವಹಿಸಿದ್ದರು.

ಕಳ್ಳತನ ಪ್ರಕರಣ ಭೇದಿಸಿದ ತಂಡಕ್ಕೆ ಎಸ್ಪಿ ಜಾಹ್ನವಿ ಅವರು ವಿಶೇಷ ಬಹುಮಾನ ಘೋಷಿಸಿದ್ದಾರೆ. ಎಎಸ್ಪಿ ಜಿ.ಮಂಜುನಾಥ, ಹರಪನಹಳ್ಳಿ ಸಿಪಿಐ ಮಹಾಂತೇಶ ಬಿ.ಸಜ್ಜನ್, ಪಿಎಸ್‌ಐ ಶಂಭುಲಿಂಗ ಹಿರೇಮಠ, ಸಿಬ್ಬಂದಿ ಇದ್ದರು.