ಮಹನೀಯರ ಆದರ್ಶ ಯುವ ಪೀಳಿಗೆಗೆ ಪರಿಚಯಿಸಿ

| Published : Nov 06 2025, 02:30 AM IST

ಸಾರಾಂಶ

ನಾಡು ನುಡಿಗೆ ಧಕ್ಕೆ ಬಂದಾಗ ಎಲ್ಲರೂ ಒಟ್ಟಾಗಿ ನಿಲ್ಲುವಂತಹ ಮನೋಭಾವ ಎಲ್ಲರಲ್ಲಿ ಮೂಡಬೇಕಿದೆ.

ಯಲಬುರ್ಗಾ: ಕರ್ನಾಟಕ ಏಕೀಕರಣದ ಹೆಜ್ಜೆ ಗುರುತು ಹಾಗೂ ಏಕೀಕರಣಕ್ಕೆ ಶ್ರಮಿಸಿದ ಮಹನೀಯರ ಆದರ್ಶ ಇಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಹಿರಿಯ ಸಾಹಿತಿ ವೀರಣ್ಣ ನಿಂಗೊಜಿ ಹೇಳಿದರು.

ತಾಲೂಕಿನ ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಗದಗಿನ ಕಲಾವಿದ ಶಂಕರಗೌಡ ಪಾಟೀಲ್ ಸಂಗ್ರಹಿಸಿದ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕರ್ನಾಟಕ ಏಕೀಕರಣ, ನಾಡು ನುಡಿಗಾಗಿ ಸೇವೆ ಸಲ್ಲಿಸಿದ ಮಹನೀಯರ ಲೇಖನಗಳ ಹಳೆಯ ಪತ್ರಿಕೆಗಳ ೨೩ನೇ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ನಾಡು ನುಡಿಗೆ ಧಕ್ಕೆ ಬಂದಾಗ ಎಲ್ಲರೂ ಒಟ್ಟಾಗಿ ನಿಲ್ಲುವಂತಹ ಮನೋಭಾವ ಎಲ್ಲರಲ್ಲಿ ಮೂಡಬೇಕಿದೆ. ಪಾಲಕರು ತಮ್ಮ ಮಕ್ಕಳಿಗೆ ಮಾತೃಭಾಷೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದರು.

ಕರವೇ ತಾಲೂಕಾಧ್ಯಕ್ಷ ರಾಜಶೇಖರ ಶಾಗೋಟಿ, ಸಾಹಿತಿ ಎಸ್‌.ಕೆ.ದಾನಕೈ ಮಾತನಾಡಿದರು. ಪ್ರಾಚಾರ್ಯ ವಿರೂಪಾಕ್ಷಪ್ಪ ಹಣಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಕಲಾವಿದ ಶಂಕರಗೌಡ ಪಾಟೀಲ್, ಶಿಕ್ಷಕರಾದ ಪುರುಷೋತ್ತಮ್ ಪೂಜಾರ, ವಿಜಯಕುಮಾರ ದೊಡ್ಮನಿ, ಹನುಮಪ್ಪ ಬಡಿಗೇರ್, ಶಂಕರ್ ಇಂಗಳದಾಳ, ಶಾಂತಂವೀರಯ್ಯ ಬಲವಂಚಿಮಠ, ಕಳಕೇಶ ಅರಕೇರಿ, ರವೀಂದ್ರ ಮಾಳೆಕೊಪ್ಪ, ಶಿವಲೀಲಾ ಜಕ್ಕಲಿ, ರಾಜೇಶ್ವರಿ ಬಿರಾದಾರ್, ಮಲ್ಲಿಕಾರ್ಜುನ ಅಂಗಡಿ ಉಪಸ್ಥಿತರಿದ್ದರು.