ಶಿವದೇಗುಲಗಳಲ್ಲಿ ವಿಶೇಷ ಪೂಜೆ, ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ, ಓಂಕಾರ ನಾಮ ಭಜನೆ, ಜಾಗರಣೆ ವ್ರತಾಚರಣೆ ಮೂಲಕ ಸಿಲಿಕಾನ್ ಸಿಟಿಯಲ್ಲಿ ಭಾನುವಾರ ಮಹಾಶಿವರಾತ್ರಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಶಿವದೇಗುಲಗಳಲ್ಲಿ ವಿಶೇಷ ಪೂಜೆ, ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ, ಓಂಕಾರ ನಾಮ ಭಜನೆ, ಜಾಗರಣೆ ವ್ರತಾಚರಣೆ ಮೂಲಕ ಸಿಲಿಕಾನ್ ಸಿಟಿಯಲ್ಲಿ ಭಾನುವಾರ ಮಹಾಶಿವರಾತ್ರಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.ನಗರದ ಮುರುಗೇಶ ಪಾಳ್ಯದ ಶಿವೋಹಂ ದೇವಾಲಯ, ಗವಿ ಗಂಗಾಧರೇಶ್ವರ ದೇವಾಲಯ, ಬೃಹತ್ ಶಿವನ ಮೂರ್ತಿ ಇರುವ ಹಳೇ ಮದ್ರಾಸ್ ರಸ್ತೆಯ ಶಿವಮಂದಿರ, ಬೇಗೂರು ಪಂಚಲಿಂಗೇಶ್ವರ ದೇಗುಲ, ಓಂಕಾರ್ ಹಿಲ್ಸ್‌ನ ದ್ವಾದಶ ಜ್ಯೋತಿರ್ಲಿಂಗ ದೇವಾಲಯ, ವಿಜಯನಗರ, ಎಚ್‌ಎಸ್‌ಆರ್ ಬಡಾವಣೆ, ಜಯನಗರ, ಚಾಮರಾಜಪೇಟೆ ಸೇರಿ ಬೆಂಗಳೂರಿನ ನಾನಾ ಕಡೆಯ ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೆಯಿತು.
ಕಾಡುಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಬೆಳಗಿನ ಜಾವ 2 ಗಂಟೆಯಿಂದ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಅಲಂಕಾರದೊಂದಿಗೆ ನಿರಂತರ ಜಲಾಭಿಷೇಕ, ಪಂಚಾಮೃತ ಸಹಿತ ರುದ್ರಾಭಿಷೇಕ ಹಾಗೂ ವಿಶೇಷ ದರ್ಶನ ವ್ಯವಸ್ಥೆ ಇತ್ತು. ಇಡೀ ದೇಗುಲವನ್ನು ಕಬ್ಬಿನ ಜಲ್ಲೆ, ಹೂವು, ಜೋಳದಿಂದ ಅಲಂಕರಿಸಲಾಗಿತ್ತು. ಗಿರಿಜಾ ಕಲ್ಯಾಣೋತ್ಸವ ನಡೆಯಿತು. ದೇವಾಲಯದಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸೋಮವಾರ ಬ್ರಹ್ಮ ರಥೋತ್ಸವ ನಡೆಯಲಿದೆ.ಬೆಳಗ್ಗೆ 5 ಗಂಟೆಯಿಂದ ದರ್ಶನ:
ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 5ರಿಂದಲೇ ಭಕ್ತರು ಸರದಿ ಸಾಲಲ್ಲಿ ನಿಂತು ದರ್ಶನ ಪಡೆದರು. ಇಲ್ಲಿ ನಾಲ್ಕು ಆಯಾಮಗಳಲ್ಲಿ ಗಂಗಾಧರೇಶ್ವರನಿಗೆ ಪೂಜೆ ನಡೆಯಿತು. ಮದ್ರಾಸ್ ರಸ್ತೆಯ ಶಿವಮಂದಿರ ಬೃಹತ್ ಶಿವನ ಮೂರ್ತಿಯ ದರ್ಶನಕ್ಕಾಗಿಯೂ ಸಾವಿರಾರು ಭಕ್ತರು ಆಗಮಿಸಿದ್ದರು. ಯಶವಂತಪುರದಲ್ಲಿನ ಮಹಾಯಾಗ ಕ್ಷೇತ್ರ ಶ್ರೀ ಗಾಯತ್ರಿ ದೇವಾಲಯದಲ್ಲಿ ಭಕ್ತರು ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು.ಮಹಾಲಿಂಗೇಶ್ವರ ಸೇವಾ ಟ್ರಸ್ಟ್‌ನಿಂದ ಎಚ್‌ಎಎಲ್ 3ನೇ ಹಂತದ ಶಿಶುಗೃಹ ಪೂರ್ಣಪ್ರಜ್ಞ ಆಟದ ಮೈದಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ನಡೆಯಿತು. ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ, ಮಹಾಕಾಳೇಶ್ವರ ಅಲಂಕಾರ ಮತ್ತು ರೋಮಾಂಚಕ ''''''''ಭಸ್ಮಾರತಿ'''''''' ನೆರವೇರಿಸಿದ್ದು, ಭಕ್ತರ ಕಣ್ಮನ ಸೆಳೆಯಿತು. ಸಂಜೆ 6.30ಕ್ಕೆ ರಥೋತ್ಸವ ಬಳಿಕ ರಾತ್ರಿಯಿಡೀ ಜಾಗರಣೆಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪಂಚವೀಣೆ, ನೃತ್ಯ ಪ್ರದರ್ಶನಗಳು ಹಾಗೂ ಜಾನಪದ ಗೀತೆ ಆಯೋಜಿಸಲಾಗಿತ್ತು.
ಮಲ್ಲೇಶ್ವರದಲ್ಲಿರುವ ನಂಜನಗೂಡು ಶ್ರೀಕಂಠೇಶ್ವರ ಸೇವಾ ಸಂಘದ ಶ್ರೀಕಂಠೇಶ್ವರ ಭವನದಲ್ಲಿ ಮೃತ್ತಿಕಾ ಶಿವಲಿಂಗ ದರ್ಶನ ಏರ್ಪಡಿಸಲಾಗಿತ್ತು. ವಿವಿಧ ಭಜನಾ ಮಂಡಳಿಗಳಿಂದ ವೇದ ಪಠಣ ಮತ್ತು ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ ರುದ್ರಾಭಿಷೇಕ ನಡೆಯಿತು. ಮಲ್ಲತ್ತಹಳ್ಳಿ ಗೌರೀಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಜ್ಯೋತಿ ಆವಾರದಲ್ಲಿನ ಶ್ರೀ ಜ್ಞಾನ ಮುನೇಶ್ವರ ಸ್ವಾಮಿ ದೇವಾಲಯದಲ್ಲಿ ಗಣಹೋಮ, ರುದ್ರಹೋಮ, ನವಗ್ರಹ ಹೋಮ, ಶಾಂತಿ ಹೋಮಗಳು ನಡೆದವು. ಕೆಂಚನಾಪುರ ಕ್ರಾಸ್‌ನ ಜಗಜ್ಯೋತಿ ಬಡಾವಣೆಯ ನದೀಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.
ಶಂಕರಪುರ ಶೃಂಗೇರಿ ಮಠದಲ್ಲಿ ನಾದ ನಾಟ್ಯಾಂಜಲಿ ಅಹೋರಾತ್ರಿ ಶಿವರಾತ್ರಿ ಆಯೋಜಿಸಲಾಗಿತ್ತು. ಇಲ್ಲಿ ಸಂಗೀತ ನೃತ್ಯ ಭಜನಾ ಕಾರ್ಯಕ್ರಮಗಳು ನಡೆದವು.ನಗರದ ಅನೇಕ ಕಡೆ ಜಾಗರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಚನ್ನಸಂದ್ರ ಮುನೇಶ್ವರ ದೇವಸ್ಥಾನ, ಶೇಷಾದ್ರಿಪುರಂ, ಸುಬ್ರಹ್ಮಣ್ಯ ನಗರ, ತ್ಯಾಗರಾಜನಗರ, ನಾಗಶೆಟ್ಟಿಹಳ್ಳಿ ಸೇರಿ ವಿವಿಧ ದೇವಸ್ಥಾನಗಳು, ಬಡಾವಣೆಗಳಲ್ಲಿ ಯಕ್ಷಗಾನ, ಭಕ್ತಿಪ್ರದಾನ ನಾಟಕ, ಧ್ಯಾನ ಸೇರಿ ಇತರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.