ಕನ್ನಡಪ್ರಭ ವಾರ್ತೆ ಬೆಂಗಳೂರು

ಸಾಮಾಜಿಕ, ಧಾರ್ಮಿಕ ಸೇವಾ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಜೊತೆ ಎಲ್ಲರೂ ನಿಲ್ಲಬೇಕು ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.ಶನಿವಾರ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಆಶ್ರಯದಲ್ಲಿ ಒಕ್ಕಲಿಗ ಯುವ ಬ್ರಿಗೇಡ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಯವರ ಸಂಸ್ಮರಣಾ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರು ನಾಥ ಪರಂಪರೆಯ ಮತ್ತೊಬ್ಬ ಯತಿಗಳಾಗಿದ್ದರು. ಮಠವನ್ನು ಸ್ಥಾಪಿಸಿ ಸಾಮಾಜಿಕ, ಧಾರ್ಮಿಕ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಅವರ ನಂತರ ನಿಷ್ಕಲ್ಮಶ, ಅನುಭವಿ ಅಧಿಕಾರಿಯಾಗಿದ್ದವರನ್ನು ಪೀಠಾಧ್ಯಕ್ಷರಾಗಿ ನೇಮಿಸಲಾಗಿದೆ. ಎಲ್ಲರೂ ಅವರ ಬೆನ್ನಿಗೆ ನಿಂತು ಸಲಹೆ, ಮಾರ್ಗದರ್ಶನದೊಂದಿಗೆ ಮುನ್ನಡೆಯೋಣ ಎಂದು ಹೇಳಿದರು.

ಸಚಿವ ಎನ್‌. ಚಲುವರಾಯಸ್ವಾಮಿ ಮಾತನಾಡಿ, ಕುಮಾರ ಚಂದ್ರಶೇಖರನಾಥ ಸ್ವಾಮೀಜಿಯವರು ಬಹಳ ಶ್ರಮದಿಂದ ಈ ಮಠವನ್ನು ಸ್ಥಾಪಿಸಿದ್ದಾರೆ. ಅವರ ನಂತರ ಬಂದಿರುವ ನಿಶ್ಚಲಾನಂದನಾಥ ಸ್ವಾಮೀಜಿ ಕೂಡ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಠದಿಂದ ಭಕ್ತರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡಬೇಕಾಗಿದೆ ಎಂದರು.ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿದರು. ಸಾವಯವ ಸಂತೆ, ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನ, ಉಚಿತ ಆರೋಗ್ಯ ಶಿಬಿರ, ಮಹಾ ಶಿವರಾತ್ರಿ ಪ್ರಯುಕ್ತ ದ್ವಾದಶ ಜ್ಯೋತಿರ್ಲಿಂಗ ಹಾಗೂ ಅನಂತ ಲಿಂಗ ದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.

ಸ್ಪಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಶಾಸಕ ಎಸ್.ಟಿ. ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.