ಕನ್ನಡಪ್ರಭ ವಾರ್ತೆ ಬೆಂಗಳೂರು
ಗೋಡೆ ಮೇಲೆ ಮೂತ್ರ ವಿಸರ್ಜಿಸಿದ್ದನ್ನು ಪ್ರಶ್ನಿಸಿದ ಕಾರಣಕ್ಕೆ ವಕೀಲರೊಬ್ಬರ ಮೇಲೆ ಹಲ್ಲೆಗೈದು, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಡಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶಿವಾಜಿನಗರ ಇನ್ಫೆಂಟ್ರಿ ರಸ್ತೆ ನಿವಾಸಿ ಆದರ್ಶ್ ಗಂಗಲ್(50) ಹಲ್ಲೆಗೊಳಗಾದ ವಕೀಲ. ಇವರು ನೀಡಿದ ದೂರಿನ ಮೇರೆಗೆ ಸತೀಶ್ ಹಾಗೂ ಇತರರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 115(2), 126(2), 3(5), 352 ಮತ್ತು 324(4) ಅಡಿ ಎಫ್‌ಐಆರ್ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗೋಡೆ ಮೇಲೆ ಮೂತ್ರ ವಿಸರ್ಜಿಸಿದ ವ್ಯಕ್ತಿ ಪೊಲೀಸ್ ಎನ್ನಲಾಗಿದೆ.
ಏನಿದು ದೂರು?ದೂರುದಾರ ಆದರ್ಶ್ ಗಂಗಲ್ ನೀಡಿದ ದೂರಿನ ಅನ್ವಯ, ನಾನು ವಕೀಲನಾಗಿದ್ದು, ಚರ್ಚ್ ಸ್ಟ್ರೀಟ್‌ನ ಕಲ್ಪಕ್ ಆರ್ಕೇಡ್‌ನ 4ನೇ ಮಹಡಿಯಲ್ಲಿ ಕಚೇರಿ ಹೊಂದಿದ್ದೇನೆ. ಫೆ.6ರಂದು ರಾತ್ರಿ ಸುಮಾರು 9 ಗಂಟೆಗೆ ಕೆಲಸ ಮುಗಿಸಿ ಮನೆಗೆ ಹೋಗಲು ಮೈನ್ ಗೇಟ್ ಬಳಿ ನಡೆದುಕೊಂಡು ಹೋಗುತ್ತಿದ್ದೆ. ಈ ವೇಳೆ ವ್ಯಕ್ತಿಯೊಬ್ಬ ಕಟ್ಟಡದ ಹಿಂಭಾಗದ ಗೋಡೆ ಮೇಲೆ ಮೂತ್ರ ವಿಸರ್ಜಿಸುತ್ತಿರುವುದು ಕಂಡು ಬಂದಿತು. ಈ ವೇಳೆ ನಾನು ಅದು ಮೂತ್ರ ವಿಸರ್ಜಿಸುವ ಸ್ಥಳವಲ್ಲ. ಶೌಚಾಲಯದಲ್ಲಿ ಮೂತ್ರ ವಿಸರ್ಜಿಸಿ ಎಂದು ಹೇಳಿದೆ. ಈ ವೇಳೆ ಮೂತ್ರ ವಿಸರ್ಜಿಸುತ್ತಿದ್ದ ವ್ಯಕ್ತಿಯ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ಮದ್ಯ ಸೇವಿಸುತ್ತಿದ್ದರು.
ಮುಖಕ್ಕೆ ಹೊಡೆದು ಕನ್ನಡಕ ಮುರಿದ ಪಾನಮತ್ತರು
ಬಳಿಕ ಈ ಮೂವರು ನನ್ನನ್ನು ಅಶ್ಲೀಲ ಮತ್ತು ಅವಾಚ್ಯ ಶಬ್ದಗಳಿಂದ ಬೈದರು. ಈ ವೇಳೆ ನಾನು ಪೊಲೀಸರಿಗೆ ಕರೆ ಮಾಡಲು ಮುಂದಾದಾಗ, ಮೊಬೈಲ್ ಕಸಿದುಕೊಳ್ಳಲು ಪ್ರಯತ್ನಿಸಿದರು. ಪಾನಮತ್ತ ಇಬ್ಬರು ವ್ಯಕ್ತಿಗಳು ನಾನು ಮುಂದೆ ಹೋಗದಂತೆ ಹಿಡಿದುಕೊಂಡರು. ಒಬ್ಬ ನನ್ನ ಮುಖಕ್ಕೆ ಹೊಡೆದು ಕನ್ನಡಕ ಮುರಿದು ಹಾಕಿದ. ಈ ವೇಳೆ ನಾನು ತಕ್ಷಣ ಮೊಬೈಲ್‌ನಲ್ಲಿ ಆತನ ಫೋಟೋ ತೆಗೆದೆ. ಆಗ ಆ ಮೂವರು ಸೇರಿ ನನ್ನನ್ನು ಬಲವಂತವಾಗಿ ಹಿಡಿದು ಮೊಬೈಲ್ ಕಿತ್ತುಕೊಂಡು ಫೋಟೋ ಡಿಲೀಟ್ ಮಾಡಿದರು. ಕೂಗಾಟ ಕೇಳಿಸಿಕೊಂಡು ಕಟ್ಟಡದ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಬಂದು ಗಲಾಟೆ ಬಿಡಿಸಿದರು. ಈ ಮೂವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
