- ಪ್ರತಿಭಾ ಪುರಸ್ಕಾರ- ವಾರ್ಷಿಕೊತ್ಸವದಲ್ಲಿ ಶ್ರೀ ನಾಲ್ವಡಿ ಶಾಂತಲಿಂಗ ಶ್ರೀ ಅಭಿಮತ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪೂಜೆಗಳಿಗೆ ಸ್ವಾಮೀಜಿಗಳನ್ನು ಕರೆಯುವ ಸಂಪ್ರದಾಯ ಕಮ್ಮಿಯಾಗುವ ಸಂದರ್ಭದಲ್ಲಿ ಏಕೆ ನಮ್ಮ ಮಕ್ಕಳಿಗೆ ವೈದಿಕ ಕಲಿಸಬೇಕೆಂಬ ಉದಾಸೀನತೆಯ ಸಂಕುಚಿತ ಭಾವನೆ ಜಂಗಮ ಸಮಾಜದ ಪೋಷಕರಲ್ಲಿ ಮೂಡದಿರಲಿ ಎಂದು ಕೇದಾರ ಪೀಠದ ನಿಯೋಜಿತ ಜಗದ್ಗುರು ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಹೊನ್ನಾಳಿ ನ್ಯಾಮತಿ ಅವಳಿ ತಾಲೂಕು ಬೇಡ ಜಂಗಮ ಸಮಾಜ ಸೇವಾ ಸಂಘವು ಹಿರೇಕಲ್ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಂಘದ ವಾರ್ಷಿಕೊತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವೈದಿಕ ಸಂಸ್ಕೃತಿಗೆ ಮಹತ್ವವಿದೆ. ಪೂಜಾ ಕಾರ್ಯ, ಧಾರ್ಮಿಕ ವಿಧಿ ವಿಧಾನಗಳು ಮಕ್ಕಳಲ್ಲಿ ಮೂಡಿಸಲು ಪೋಷಕರು ಪೂರಕವಾಗಿ ಕಾರ್ಯನಿರ್ವಹಿಸಬೇಕಿದೆ. ವೀರ ಮಹೇಶ್ವರರು ನಾಡಿನ ಶಿವಾಚಾರ್ಯರು, ಪಂಚಪೀಠಿಗಳು ಈ ಕಾರ್ಯಕ್ಕೆ ಒತ್ತುನೀಡಬೇಕಿದೆ ಎಂದರು.


ಧಾರ್ಮಿಕ ಪರಂಪರೆಗಳ ರಕ್ಷಣೆಗಾಗಿ ಐದು ಪೀಠಗಳು ಉಗಮಗೊಂಡು ಕಾರ್ಯನಿರ್ವಹಿಸುತ್ತಿವೆ. ಅಂತೆಯೇ ಶಿವಾಚಾರ್ಯ ಸ್ವಾಮೀಜಿಗಳು, ಮಠ, ಮಂದಿರಗಳ ಉದ್ಘಾಟನೆ, ತಾಲೂಕು ಗ್ರಾಮಗಳ ದೇವಸ್ಥಾನದ ಕಳಸಾರೋಹಣ ಕಾರ್ಯಗಳಿಗೆ ಮುಂದಾದರೆ ಶಿವಾಚಾರ್ಯರ ಅಡಿಯಲ್ಲಿ ವೀರಮಹೇಶ್ವರರು ಜಂಗಮ ಪರಂಪರೆಯಲ್ಲಿ ವ್ಯಕ್ತಿ ಜನನದ 8ನೇ ತಿಂಗಳು ಗರ್ಭಾವಸ್ಥೆಯಿಂದ ಜೀವನದ ಅಂತ್ಯಕ್ರಿಯವರೆಗೂ ವಿವಿಧ ಸಂದರ್ಭದಲ್ಲಿ ಧಾರ್ಮಿಕ ಪರಂಪರೆಯ ಕಾರ್ಯಗಳನ್ನು ನಡೆಸುತ್ತಿರುವುದು ನಿರಂತರವಾಗಿರಲಿದೆ ಎಂದರು.

ಲಿಂಗೈಕ್ಯ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಈ ಭಾಗದ ನಡೆದಾಡುವ ದೇವರಂತೆ ಜನತೆಯ ಗೌರವಕ್ಕೆ ಪಾತ್ರರಾಗಿದ್ದರು ಎಂದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್‌ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಗೋವಿನಕೋವಿ ಶಿವಾಚಾರ್ಯ ಮಹಾಲಿಂಗ ಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಭೈರನಹಳ್ಳಿ ಪಂಚಾಕ್ಷರಯ್ಯ ವಹಿಸಿದ್ದರು. ಸಮಾಜದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಸಮಾಜದ ಗೌರವ ಅಧ್ಯಕ್ಷ ರುದ್ರಯ್ಯ ಪದಾಧಿಕಾರಿಗಳಾದ ಕುಳಗಟ್ಟಿ ಬಸವರಾಜಯ್ಯ, ರುದ್ರಸ್ವಾಮಿ, ಬೆನಕನಹಳ್ಳಿ ಬಸವರಾಜಯ್ಯ, ಕೊಟ್ರೇಶ್ ಇನ್ನಿತರರಿದ್ದರು. ಪ್ರೀತಿ ಭರತ್ ಸ್ವಾಗತಿಸಿ, ಹೇಮಾ, ಸುನಂದ ಪ್ರಾರ್ಥನೆ ಸಲ್ಲಿಸಿದರು. ಶಿಕ್ಷಕ ಕೊಟ್ರೇಶ್ ನಿರೂಪಿಸಿ ಎಚ್.ಎಂ. ರುದ್ರೇಶ್ ವಂದಿಸಿದರು.

- - -

(ಕೋಟ್‌) ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕು ಜಂಗಮ ಸಮಾಜದ ಸಂಘಟನೆ ಮೂರು ವರ್ಷಗಳಿಂದ ನಡೆಸುತ್ತಿರುವ ಪ್ರತಿಭಾ ಪುರಸ್ಕಾರ, ಸಮಾಜದ ಕಾರ್ಯ ವಿವರಿಸಿ ಸಮಾಜಕ್ಕೆ 2 ಎಕರೆ ಜಮೀನು ಖರೀದಿಯ ಇಚ್ಛೆ ಪೂರ್ಣಗೊಳಿಸಲು ಎಲ್ಲರ ಸಹಕಾರ ಅತ್ಯಗತ್ಯ.

- ಎಂ.ರುದ್ರಯ್ಯ, ಗೌರವಾಧ್ಯಕ್ಷ.

- - -

-13ಎಚ್.ಎಲ್.ಐ2:

ಕಾರ್ಯಕ್ರಮವನ್ನು ಕಣ್ವಕುಪ್ಪೆ ಗವಿಮಠ ಶ್ರೀ ನಾಲ್ವಡಿ ಶಾಂತಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಹಿರೇಕಲ್ಠಟದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಜಿ, ಜಂಗಮ ಸಮಾಜದ ಗಣ್ಯರು, ಭಕ್ತರು ಇದ್ದರು.