ಕನ್ನಡಪ್ರಭ ವಾರ್ತೆ ಬೆಂಗಳೂರು
ವರದಕ್ಷಿಣೆ ಕಿರುಕುಳ ಹಾಗೂ ಪತ್ನಿಗೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದ ಆರೋಪದಡಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಕೆ.ಎಸ್.ಬೈರಪ್ಪ ಅವರನ್ನು ಕೆಂಗೇರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬೈರಪ್ಪ ಅವರು ನಗರ ಪೊಲೀಸ್ ಕಮಿಷನರ್ ಕಚೇರಿಯ ಕಂಟ್ರೋಲ್ ರೂಮ್ ವಿಭಾಗದಲ್ಲಿ ಪಿಎಸ್ಐ ಆಗಿ ಕೆಲಸ ಮಾಡುತ್ತಿದ್ದಾರೆ. ಬೈರಪ್ಪ ಪತ್ನಿ ರೇವತಿ ಎಂಬುವರು ನೀಡಿದ ದೂರಿನನ್ವಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಬೈರಪ್ಪ ಅವರನ್ನು ಬಂಧಿಸಲಾಗಿದೆ. ಕೃತ್ಯ ನಡೆದ ಸ್ಥಳ ಆಧರಿಸಿ ತಾವರೆಕೆರೆ ಪೊಲೀಸರಿಗೆ ಪ್ರಕರಣ ವರ್ಗಾವಣೆ ಮಾಡಲಾಗಿದೆ. ಮುಂದಿನ ತನಿಖೆಯನ್ನು ಅಲ್ಲಿನ ಪೊಲೀಸರು ನಡೆಸಲಿದ್ದಾರೆ ಎಂದು ನೈಋತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್ ತಿಳಿಸಿದ್ದಾರೆ.ಆರಂಭದಲ್ಲಿ ಕೆಂಗೇರಿ ಠಾಣೆಯ ಪೊಲೀಸರಿಗೆ ಬೈರಪ್ಪ ಅವರ ಪತ್ನಿ ರೇವತಿ ದೂರು ನೀಡಿದ್ದರು. ಆ ದೂರು ಆಧರಿಸಿ ಪೊಲೀಸರು ಜು.13ರಂದು ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಂಡಿದ್ದರು. ಬಳಿಕ, ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ್ದ ರೇವತಿ, ಪತಿಯ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು. ಇದೀಗ ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ವರದಕ್ಷಿಣೆಗಾಗಿ ಕಿರುಕುಳ!:ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚನಾಪುರ ನಿವಾಸಿಯಾಗಿರುವ ಬೈರಪ್ಪ ಅವರು 5 ವರ್ಷದ ಹಿಂದೆ ರೇವತಿ ಅವರನ್ನು ಮದುವೆ ಆಗಿದ್ದರು. ದಂಪತಿಗೆ 3 ವರ್ಷದ ಹೆಣ್ಣು ಮಗುವಿದೆ. ತಾನು ಪಿಎಸ್ಐ ಆಗಿದ್ದು, ಮದುವೆ ವೇಳೆ ವರದಕ್ಷಿಣೆ ಕೊಟ್ಟಿಲ್ಲ. ತವರು ಮನೆಯಿಂದ 50 ಲಕ್ಷ ರು. ತೆಗೆದುಕೊಂಡು ಬರುವಂತೆ ಒತ್ತಾಯಿಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಪತಿ ಮನೆಯವರೂ ಸಹ ಕಿರುಕುಳ ನೀಡಿದ್ದಾರೆ. ಪ್ರಶ್ನಿಸಿದ್ದಕ್ಕೆ ನನ್ನ ತಂದೆಗೆ ಮಚ್ಚಿನಿಂದ ಹಲ್ಲೆ ಮಾಡುವುದಾಗಿ ಬೆದರಿಸಿದ್ದರು ಎಂದು ರೇವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ವರದಕ್ಷಿಣೆ ವಿಚಾರಕ್ಕಾಗಿ ತನ್ನ ಮೇಲೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾರೆ. ಬೇರೆಯ ಯುವತಿಯ ಜತೆಗೆ ಸಲುಗೆ ಇದೆ. ಅದನ್ನು ಪ್ರಶ್ನಿಸಿದ್ದಕ್ಕೆ ವಿಚ್ಛೇದನ ನೀಡುವಂತೆ ಒತ್ತಾಯ ಮಾಡಿದ್ದಾರೆ ಎಂದು ರೇವತಿ ದೂರಿನಲ್ಲಿ ಆರೋಪಿಸಿದ್ದಾರೆ.
ಮಚ್ಚನ್ನು ಹಿಡಿದು ಹಲ್ಲೆಗೆ ಯತ್ನ:
ಪಿಎಸ್ಐ ಭೈರಪ್ಪ ಕಳೆದ ಕೆಲವು ಸಮಯದಿಂದ ತಮ್ಮ ಪತ್ನಿಗೆ ವರದಕ್ಷಿಣೆಗಾಗಿ ಮಾನಸಿಕ ಹಾಗೂ ದೈಹಿಕವಾಗಿ ತೀವ್ರ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಅವರ ಕೌಟುಂಬಿಕ ಕಲಹ ತಾರಕಕ್ಕೇರಿದಾಗ, ಪಿಎಸ್ಐ ಭೈರಪ್ಪ ಅವರು ಮನೆಯಲ್ಲಿದ್ದ ಮಚ್ಚನ್ನು ಹಿಡಿದು ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದರು ಎಂದು ಆರೋಪ ಕೇಳಿ ಬಂದಿದೆ. ಇದರ ವಿಡಿಯೋ ವೈರಲ್ ಆಗಿದೆ.
