ಕನ್ನಡಪ್ರಭ ವಾರ್ತೆ ಬೆಂಗಳೂರು

ಜಾಗದ ವಿಚಾರಕ್ಕೆ ಗಲಾಟೆ ನಡೆದು ಗುಂಪೊಂದು ಖಾಸಗಿ ವಸತಿ ಶಾಲೆಗೆ ನುಗ್ಗಿ ದಾಂಧಲೆ ನಡೆಸಿ ಕಿಟಕಿ ಬಾಗಿಲನ್ನು ಧ್ವಂಸಗೊಳಿಸಿರುವ ಘಟನೆ ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ಕೆ.ನಾರಾಯಣಪುರದಲ್ಲಿರುವ ಸೋಮವಾರ ಸಂಜೆ ನಡೆದಿದೆ.

ಶಾಲೆಯ ಮಾಲೀಕತ್ವ ವಿಚಾರವಾಗಿ 2 ಗುಂಪುಗಳ ನಡುವೆ ಶಾಲೆಯ ಆವರಣದಲ್ಲಿಯೇ ಗಲಾಟೆ ನಡೆದಿದೆ. ಈ ವೇಳೆ ಕೆಲವರು ದಾಂಧಲೆ ನಡೆದಿದ್ದಾರೆ. ವಿಷಯ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಈ ಸಂಬಂಧ ದೂರು-ಪ್ರತಿ ದೂರು ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.

ಗಲಾಟೆಯ ವೇಳೆ ಒಂದು ಗುಂಪು ವಸತಿ ಶಾಲೆಯ ಕಿಟಕಿ ಮತ್ತು ಬಾಗಿಲುಗಳನ್ನು ದ್ವಂಸಗೊಳಿಸಿ, ಸಿಬ್ಬಂದಿಯ ಮೇಲೆ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಈ ವೇಳೆ ಶಾಲೆಯ ಒಳಗಡೆ ಇದ್ದ ಮತ್ತೊಂದು ಗುಂಪು ಹೊರಗಡೆ ಗಲಾಟೆ ಮಾಡುತ್ತಿದ್ದವರ ಮೇಲೆ ಖಾರದಪುಡಿ ನೀರನ್ನು ಎರಚಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಹರಸಾಹಸ ಪಟ್ಟು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈ ವೇಳೆ ಕೆಲ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಹರಿದಾಡಿದ ಸುಳ್ಳು ಸುದ್ದಿ:


ಶಾಲೆಯ ಮಾಲೀಕತ್ವ ವಿಚಾರವಾಗಿ ವಿವಾದವಿದ್ದು, ಈ ಸಂಬಂಧ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ಮುಸ್ಲಿಂ ಧರ್ಮ ಗುರುಗಳು ವಸತಿ ಶಾಲೆ ಮೇಲೆ ದಾಳಿ ಮಾಡಿದ್ದಾರೆ ಎಂದು ಒಂದು ಸುಳ್ಳು ಸುದ್ದಿ ಹರಿದಾಡತೊಡಗುತ್ತದೆ. ಇದರಿಂದ ಕೆರಳಿದ ಒಂದು ಗುಂಪು ಶಾಲೆ ಆವರಣಕ್ಕೆ ನುಗ್ಗಿ ಕಿಟಕಿ ಮತ್ತು ಬಾಗಿಲನ್ನು ಹೊಡೆದು ಹಾಕಿ ದಾಂಧಲೇ ಮಾಡುತ್ತದೆ. ಒಳಗಡೆ ಇದವರು ಖಾರದ ಪುಡಿ ಎರಚಿದ್ದಾರೆ.

ಜಾಗದ ಬಗ್ಗೆ ವಿವಾದ:

ಮುಂಬೈನಲ್ಲಿರುವ ಹಲ್‌ ಜಾಮಿಯ ಮೊಹಮದೀಯ ಮನ್ಸೂರ ಟ್ರಸ್ಟ್‌ಗೆ ಈ ಜಾಗ ಸೇರಿಬೇಕು ಎನ್ನಲಾಗಿದೆ. ಮತ್ತೊಂದೆಡೆ ನಗರದಲ್ಲಿರುವ ಟ್ರಸ್ಟ್‌ವೊಂದರ ಅಧ್ಯಕ್ಷ ಅಜೀಜ್‌ ಉದ್ದೀನ್‌ ಎಂಬುವರಿಗೆ ಈ ಜಾಗ ಸೇರಿದ್ದಾಗಿದೆ ಎಂಬ ವಿವಾದವಿದೆ. ಈ ಬಗ್ಗೆ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ಸುಳ್ಳು ಸುದ್ದಿ ಹರಿದಾಡಿದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.