ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಅಭಿವೃದ್ಧಿ ಪ್ರಾಕಾರದಿಂದ(ಬಿಡಿಎ) ಹಂಚಿಕೆ ಮಾಡಿರುವ ನಿವೇಶನಗಳಲ್ಲಿ ಗುತ್ತಿಗೆ ಮತ್ತು ಕರಾರು ಪತ್ರದ ಪ್ರಕಾರ ನಿಗದಿತ ಅವಧಿಯೊಳಗೆ ( ಐದು ವರ್ಷ) ಮನೆ ಅಥವಾ ಕಟ್ಟಡ ನಿರ್ಮಿಸದ ಮಾಲೀಕರಿಗೆ ವಿಧಿಸುತ್ತಿದ್ದ ಶೇ.10ರಷ್ಟು ದಂಡ ಶುಲ್ಕ ಪರಿಷ್ಕರಣೆ ಮಾಡಿ ಶೇ.2.5 ರಿಂದ ಶೇ.10 ರವರೆಗೆ ನಾಲ್ಕು ವಿಭಾಗಗಳಲ್ಲಿ ದರ ನಿಗದಿ ಮಾಡಲಾಗಿದೆ.

2024 ಸೆಪ್ಟೆಂಬರ್‌ 23ರ ಅಧಿಸೂಚನೆಯಂತೆ ಮಾರ್ಗಸೂಚಿ ದರದ ಶೇ.10ರಷ್ಟು ಖಾಲಿ ನಿವೇಶನ ದಂಡವನ್ನಾಗಿ ವಿಧಿಸಲಾಗುತ್ತಿತ್ತು. ಆದರೆ, ಸಾರ್ವಜನಿಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ದಂಡ ಮರುಪರಿಷ್ಕರಣೆ ಮಾಡುವಂತೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಪರಿಷ್ಕರಣೆ ಮಾಡಲಾಗಿದೆ. ಆದರೆ ಈ ದಂಡ ಶುಲ್ಕವು ನಾಡಪ್ರಭು ಕೆಂಪೇಗೌಡ ಬಡಾವಣೆ ಮತ್ತು ಅರ್ಕಾವತಿ ಬಡಾವಣೆಗಳಿಗೆ ಅನ್ವಯವಾಗುವುದಿಲ್ಲ.

ಪ್ರಾಧಿಕಾರದಿಂದ ನೋಂದಾಯಿಸಲಾದ ಗುತ್ತಿಗೆ ಹಾಗೂ ಮಾರಾಟ ಒಪ್ಪಂದ ಪತ್ರದ ಪ್ರಕಾರ ನಿಗದಿತ ಅವಧಿಯೊಳಗೆ ಕಟ್ಟಡ ನಿರ್ಮಿಸದೇ, ನಂತರದ ಅವಧಿಯಲ್ಲಿ ಕಟ್ಟಡ ನಿರ್ಮಿಸಿರುವ ಪ್ರಕರಣಗಳಲ್ಲಿ ಕಟ್ಟಡ ನಿರ್ಮಾಣವಾದ ದಿನಾಂಕದಿಂದ ಚಾಲ್ತಿಯಲ್ಲಿದ್ದ ಮಾರ್ಗಸೂಚಿ ದರಕ್ಕೆ ಪರಿಷ್ಕೃತ ದರ ಅನ್ವಯವಾಗಲಿದೆ.

ಒಂದು ವೇಳೆ ಸದರಿ ಮಾರ್ಗಸೂಚಿ ದರ ಲಭ್ಯವಿಲ್ಲದಿದ್ದಲ್ಲಿ ಗುತ್ತಿಗೆ ಹಾಗೂ ಮಾರಾಟ ಒಪ್ಪಂದ ಪತ್ರದಲ್ಲಿನ ದರದಂತೆ ಗುತ್ತಿಗೆ ಹಾಗೂ ಮಾರಾಟ ಒಪ್ಪಂದ ಪತ್ರದ ದಿನಾಂಕದಿಂದ ಪ್ರಸ್ತುತ ದಿನಾಂಕದವರೆಗೂ ಎಂಸಿಎಲ್‌ಆರ್‌ (ನಿಧಿ ಆಧಾರಿತ ಸಾಲ ದರದ ಕನಿಷ್ಠ ವೆಚ್ಚ) ಮತ್ತು ಶೇ.2 ಬಡ್ಡಿ ಪಾವತಿಸಬೇಕು. ಇಲ್ಲವೇ ಪ್ರಸ್ತುತ ದಿನಾಂಕದಲ್ಲಿನ ಚಾಲ್ತಿಯಲ್ಲಿರುವ ಮಾರ್ಗಸೂಚಿ ದರದ ಮೇಲೆ ನಿವೇಶದನ ಅಳತೆಗೆ ಅನುಗುಣವಾಗಿ ಶೇಕಡವಾರು ಲೆಕ್ಕಾಚಾರ ಮಾಡಿ ಮೇಲಿನ ಎರಡು ದರಗಳಲ್ಲಿ ಕಡಿಮೆ ದರವನ್ನು ಖಾಲಿ ನಿವೇಶನ ದಂಡವಾಗಿ ಪಾವತಿಸಬೇಕಿದೆ.


ಖಾಲಿ ನಿವೇಶನ ದಂಡ ಪಾವತಿಸಲು ಇಚ್ಛೆ ಇಲ್ಲದವರು, ನಿವೇಶನವನ್ನು ಪ್ರಾಧಿಕಾರಕ್ಕೆ ಹಿಂದಿರುಗಿಸಿ, ಪಾವತಿಸಿರುವ ಮೊತ್ತದಲ್ಲಿ ಶೇ.12.5ರಷ್ಟನ್ನು ಕಳೆದು ಬಾಕಿ ಮೊತ್ತವನ್ನು ಹಿಂಪಡೆಯಲು ಸ್ವತಂತ್ರರಾಗಿರುತ್ತಾರೆ. ದಂಡ ಪಾವತಿಸುವಂತೆ ಹಿಂಬರಹ ನೀಡಿದ 90 ದಿನಗಳಲ್ಲಿ ಪಾವತಿಸದಿದ್ದಲ್ಲಿ ಎಸ್‌ಬಿಐನ ಎಂಸಿಎಲ್‌ಆರ್‌ (ಮಾರ್ಜಿನಲ್‌ ಕಾಸ್ಟ್‌ ಆಫ್‌ ಫಂಡ್‌ ಬೇಸಿಡ್‌ ಲೆಂಡಿಂಗ್‌ ರೇಟ್‌) ಮತ್ತು ಶೇ.2 ಬಡ್ಡಿ ದರವನ್ನು ವಿಧಿಸಲಾಗುವುದು. ಈಗಾಗಲೇ ಖಾಲಿ ನಿವೇಶನ ದಂಡವನ್ನು ಪಾವತಿಸಿರುವ ಹಂಚಿಕೆದಾರರಿಗೆ ಇದು ಅನ್ವಯಿಸುವುದಿಲ್ಲ. ಅದರಂತೆ ಪಾವತಿಸಿರುವ ಮೊತ್ತವನ್ನು ಯಾವುದೇ ಸಂದರ್ಭದಲ್ಲಿ ಹಿಂತಿರುಗಿಸುವುದಿಲ್ಲ ಎಂದು ಬಿಡಿಎ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಷ್ಟೆಷ್ಟು ದಂಡ ಶುಲ್ಕ ಏರಿಕೆ

ನಿವೇಶನದ ಅಳತೆಮಾರ್ಗಸೂಚಿ ದರದಂತೆ ದಂಡ

20-30 ನಿವೇಶನ (0 ಯಿಂದ 600 ಚ.ಅಡಿ)ಶೇ.2.5 ರಷ್ಟು

30-40 ನಿವೇಶನ (601 ರಿಂದ 1200)ಶೇ.5ರಷ್ಟು

40-60 ನಿವೇಶನ (1201 ರಿಂದ 2400)ಶೇ.7.5ರಷ್ಟು

60-40 ಹಾಗೂ ಮೇಲ್ಪಟ್ಟ ನಿವೇಶನ (2401 ಮತ್ತು ಮೇಲ್ಪಟ್ಟು )ಶೇ.10ರಷ್ಟು