ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ವ್ಯಕ್ತಿಯೊಬ್ಬರಿಗೆ ಮಂಜೂರಾಗಿದ್ದ ಬಿಡಿಎ ನಿವೇಶನವನ್ನು ನಕಲಿ ದಾಖಲೆ ಸೃಷ್ಟಿಸಿ ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡು ವಂಚಿಸಿದ್ದ ಬಿಡಿಎ ನಿವೃತ್ತ ನೌಕರ ಸೇರಿ ಮೂವರು ಆರೋಪಿಗಳನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಗುಬ್ಬಲಾಳ ಕ್ರಾಸ್‌ನ ಎಂಕೆಎಸ್ ಲೇಔಟ್ ನಿವಾಸಿ ಚಿಕ್ಕರಾಯಿ (68), ನಾಗರಬಾವಿ 2ನೇ ಹಂತದ ಮುರಳೀಧರ್(60) ಮತ್ತು ವಸಂತನಗರದ ಮಂಜುನಾಥ್(48) ಬಂಧಿತರು. ಬಿಡಿಎ ವಿಜಿಲೆನ್ಸ್ ವಿಭಾಗದ ಇನ್ಸ್‌ಪೆಕ್ಟರ್ ಎ.ಪಿ.ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣದ ವಿವರಲಕ್ಷ್ಮೀದೇವಮ್ಮ ಎಂಬುವರ ಪತಿ ಎಲ್.ಬೈಲಪ್ಪ ಅವರಿಗೆ ಬಿಡಿಎ 2006ರಲ್ಲಿ ಅರ್ಕಾವತಿ ಬಡಾವಣೆ 2ನೇ ಹಂತದಲ್ಲಿ 40/60 ಅಳತೆಯ ನಿವೇಶನ ಹಂಚಿಕೆ ಮಾಡಿತ್ತು. ಈ ನಿವೇಶನ ಬೈಲಪ್ಪ ಅವರ ಹೆಸರಿಗೆ ನೋಂದಣಿಯಾಗಿತ್ತು. ಬಳಿಕ ಬೈಲಪ್ಪ ಅವರು ಬದಲಿ ನಿವೇಶನ ಕೂರಿ ಬಿಡಿಎಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ 2018ನೇ ಸಾಲಿನಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯ 3ನೇ ಬ್ಲಾಕ್‌ನಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಲಾಗಿತ್ತು.
ನಕಲಿ ದಾಖಲೆ ಸೃಷ್ಟಿಸಿ ನೋಂದಣಿಈ ನಡುವೆ 2029ರ ಸೆ.19ರಂದು ಬೈಲಪ್ಪ ಮೃತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತರ ಪತ್ನಿ ಲಕ್ಷ್ಮೀದೇವಮ್ಮ ಅವರು ನಿವೇಶನದ ಹಕ್ಕು ವರ್ಗಾವಣೆ ಕೋರಿ ಬಿಡಿಎ ಸಂಪರ್ಕಿಸಿದ್ದರು. ಈ ವೇಳೆ ದಾಖಲೆಗಳ ಪರಿಶೀಲನೆ ವೇಳೆ ಅಪರಿಚಿತ ವ್ಯಕ್ತಿ ತಾನೇ ಬೈಲಪ್ಪ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಅರ್ಜಿ ಸಲ್ಲಿಸಿ ಬದಲಿ ನಿವೇಶನವನ್ನು ತನ್ನ ಹೆಸರಿಗೆ ನೋಂದಣಿ ಮಾಡಿಕೊಂಡಿರುವುದು ಕಂಡು ಬಂದಿತ್ತು. ಈ ಸಂಬಂಧ ಲಕ್ಷ್ಮೀದೇವಮ್ಮ ಅವರು ಕಾನೂನು ಕ್ರಮ ಕೈಗೊಳ್ಳುವಂತೆ ಬಿಡಿಎಗೆ ಮನವಿ ಮಾಡಿದ್ದರು.
ಆಂತರಿಕ ತನಿಖೆಯಲ್ಲಿ ವಂಚನೆ ಬೆಳಕಿಗೆ:ಅದರಂತೆ ಬಿಡಿಎ ಅಧಿಕಾರಿಗಳ ಆಂತರಿಕ ವಿಚಾರಣೆ ವೇಳೆ ಬಿಡಿಎಯಲ್ಲಿ ಕರ್ತವ್ಯ ನಿರ್ವಹಿಸಿ ಈಗ ನಿವೃತ್ತಿಯಾಗಿರುವ ಸಹಾಯಕ ಚಿಕ್ಕರಾಯಿ, ನಕಲಿ ಬೈಲಪ್ಪನ ಮಗ ಮಂಜುನಾಥ ಹಾಗೂ ಬ್ರೋಕರ್ ಮುರಳೀಧರ್ ಸೇರಿಕೊಂಡು ನಕಲಿ ದಾಖಲೆ ಸೃಷ್ಟಿಸಿ ನಿವೇಶನವನ್ನು ಅಕ್ರಮವಾಗಿ ನೋಂದಣಿ ಮಾಡಿಕೊಂಡು ವಂಚಿಸಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಬಿಡಿಎ ವಿಜಿಲೆನ್ಸ್ ವಿಭಾಗದ ಇನ್ಸ್‌ಪೆಕ್ಟರ್ ಎ.ಪಿ. ಕುಮಾರ್ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಂಚಕರ ಬಗ್ಗೆ ಎಚ್ಚರದುಷ್ಕರ್ಮಿಗಳು ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ನಿವೇಶನಗಳನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡು ವಂಚಿಸುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರು ಇಂತಹ ವಂಚಕರ ಬಗ್ಗೆ ಎಚ್ಚರ ವಹಿಸುವಂತೆ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.