ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) ಹಗರಣ ಸಂಬಂಧ ಮುಡಾದ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ಬಂಧಿಸಿದ್ದಾರೆ.ನೋಟಿಸ್ ಹಿನ್ನೆಲೆಯಲ್ಲಿ ಶಾಂತಿನಗರದ ಇ.ಡಿ.ಕಚೇರಿಗೆ ಮಂಗಳವಾರ ವಿಚಾರಣೆಗೆ ಹಾಜರಾಗಿದ್ದ ದಿನೇಶ್ ಕುಮಾರ್ ಅವರನ್ನು ಇ.ಡಿ.ಅಧಿಕಾರಿಗಳು ಕೆಲ ಕಾಲ ವಿಚಾರಣೆ ನಡೆಸಿದ ಬಳಿಕ ಸಂಜೆ ಬಂಧಿಸಿದರು.
ಬಳಿಕ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಇ.ಡಿ.ಅಧಿಕಾರಿಗಳ ಮನವಿ ಮೇರೆಗೆ ಹೆಚ್ಚಿನ ವಿಚಾರಣೆಗಾಗಿ ದಿನೇಶ್ ಕುಮಾರ್ ಅವರನ್ನು ಇ.ಡಿ.ವಶಕ್ಕೆ ನೀಡಿದರು.ದಿನೇಶ್ ಕುಮಾರ್ ಅವರು 2022ರಲ್ಲಿ ಮುಡಾ ಆಯುಕ್ತರಾಗಿದ್ದರು. ಇವರ ಅವಧಿಯಲ್ಲಿ 50:50ರ ಅನುಪಾತದಲ್ಲಿ ನೂರಾರು ಕೋಟಿ ರು. ಮೌಲ್ಯದ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪ ಕೇಳಿ ಬಂದಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಕೋಟ್ಯಂತರ ರು. ಮೌಲ್ಯದ 14 ಬದಲಿ ನಿವೇಶನ ಕೊಡಿಸುವಲ್ಲಿ ಪ್ರಭಾವ ಬೀರಿರುವ ಆರೋಪ ಕೇಳಿ ಬಂದಿತ್ತು.
ದಿನೇಶ್ ನಿವಾಸದ ಮೇಲೆ ದಾಳಿ ಮಾಡಿದ್ದ ಇ.ಡಿ:ಈ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಇ.ಡಿ.ಅಧಿಕಾರಿಗಳು, 2024ರ ಅ.28ರಂದು ದಿನೇಶ್ ಕುಮಾರ್ ಅವರ ಬಾಣಸವಾಡಿ ಮನೆ ಮೇಲೆ ದಾಳಿ ನಡೆಸಿ ಶೋಧಿಸಿದ್ದರು. ಈ ವೇಳೆ ವಾಯು ವಿಹಾರಕ್ಕೆ ತೆರಳಿದ್ದ ದಿನೇಶ್ ಕುಮಾರ್ ಇ.ಡಿ.ದಾಳಿ ವಿಚಾರ ತಿಳಿದು ಬಂಧನದ ಭೀತಿಯಿಂದ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಶೋಧ ಕಾರ್ಯದ ಬಳಿಕ ವಿಚಾರಣೆಗೆ ಹಾಜರಾಗುವಂತೆ ಇ.ಡಿ.ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದರು. ನೋಟಿಸ್ ಹಿನ್ನೆಲೆಯಲ್ಲಿ ನ.9ರಂದು ಇ.ಡಿ.ಅಧಿಕಾರಿಗಳ ಎದುರು ಹಾಜರಾಗಿದ್ದ ದಿನೇಶ್ ಕುಮಾರ್ ವಿಚಾರಣೆ ಎದುರಿಸಿದ್ದರು.
400 ಕೋಟಿ ರು. ಮೌಲ್ಯದ 252 ನಿವೇಶನ ಜಪ್ತಿ:ಮುಡಾ ಹಗರಣ ಸಂಬಂಧ ಇ.ಡಿ ಅಧಿಕಾರಿಗಳು ಸುಮಾರು 400 ಕೋಟಿ ರು. ಮೌಲ್ಯದ 252 ಮುಡಾ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಅನರ್ಹ ಘಟಕಗಳು/ವ್ಯಕ್ತಿಗಳಿಗೆ ಪರಿಹಾರದ ರೂಪದಲ್ಲಿ ನಿವೇಶನ ಹಂಚಿಕೆಯಲ್ಲಿ ಮುಡಾ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಸೇರಿ ಇತರೆ ಮಾಜಿ ಆಯುಕ್ತರು ಪ್ರಮುಖ ಪಾತ್ರ ವಹಿಸಿರುವುದು ಇ.ಡಿ.ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ನಿವೇಶನ ಅಕ್ರಮ ಹಂಚಿಕೆ ಮಾಡಲು ನಗದು, ಚರ ಹಾಗೂ ಸ್ಥಿರ ಆಸ್ತಿಗಳ ರೂಪದಲ್ಲಿ ಲಂಚ ಪಡೆದಿರುವ ಬಗ್ಗೆ ಇ.ಡಿ.ಅಧಿಕಾರಿಗಳು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು.
ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಆರೋಪ ಕೇಳಿ ಬಂದ ಬೆನ್ನಲ್ಲೇ ಮುಡಾ ಆಯುಕ್ತ ದಿನೇಶ್ ಕುಮಾರ್ ಅವರನ್ನು ರಾಜ್ಯ ಸರ್ಕಾರ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಹುದ್ದೆಗೆ ವರ್ಗಾಯಿಸಿತ್ತು. ಸರ್ಕಾರದ ಈ ಆದೇಶ ತೀವ್ರ ಟೀಕೆಗೆ ಗುರಿಯಾದ ಹಿನ್ನೆಲೆಯಲ್ಲಿ ವರ್ಗಾವಣೆ ಆದೇಶವನ್ನು ರದ್ದುಗೊಳಿಸಲಾಗಿತ್ತು. ಬಳಿಕ ಅಕ್ರಮ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ದಿನೇಶ್ ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿತ್ತು.