ನಗರದ ಕೆಇಬಿ ಆವರಣದಲ್ಲಿ ವಿದ್ಯುತ್ ಸಮಸ್ಯೆ ಬಗೆ ಹರಿಸುವಂತೆ ಆಗ್ರಹಿಸಿ ರೈತ ಭಾರತ ಪಕ್ಷದಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 4ನೇ ದಿನ ಪೂರೈಸಿದೆ.
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಕೆಇಬಿ ಆವರಣದಲ್ಲಿ ವಿದ್ಯುತ್ ಸಮಸ್ಯೆ ಬಗೆ ಹರಿಸುವಂತೆ ಆಗ್ರಹಿಸಿ ರೈತ ಭಾರತ ಪಕ್ಷದಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 4ನೇ ದಿನ ಪೂರೈಸಿದೆ.4ನೇ ದಿನದ ಧರಣಿಗೆ ಕರ್ನಾಟಕ ರಾಜ್ಯ ಅಂಗವಿಕಲರ ಪಾಲಕರ ಒಕ್ಕೂಟದ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿ ಕೆಇಬಿ ಮುಖ್ಯ ಅಧೀಕ್ಷಕರ ಮೂಲಕ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಶೋಕ ವಾಲಿಕಾರ ಮಾತನಾಡಿ, ಕಳೆದ 4 ದಿನಗಳಿಂದ ವಿದ್ಯುತ್ ಸಮಸ್ಯೆ ಬಗೆ ಹರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಹಾಗೂ ಹೆಸ್ಕಾಂ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಕಣ್ಣು ಮುಚ್ಚಾಲೆ ಆಟ ಆಡುವ ಮೂಲಕ ತಮಗೆ ಏನು ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ಖಂಡನೀಯ. ಕೂಡಲೇ ಸಾರ್ವಜನಿಕರು ಹಾಗೂ ರೈತರಿಗೆ ಆಗುತ್ತಿರುವ ವಿದ್ಯುತ್ ಸಂಪರ್ಕ ಸಮಸ್ಯೆಯನ್ನು ಬಗೆ ಹರಿಸಬೇಕು. ಒಂದು ವೇಳೆ ಸಮಸ್ಯೆ ಬಗೆ ಹರಿಸದಿದ್ದರೇ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಕರ್ನಾಟಕ ರಾಜ್ಯ ಅಂಗವಿಕಲರ ಪಾಲಕರ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಉಮರಾಣಿ ಮಾತನಾಡಿ, ರಾಜ್ಯದಲ್ಲಿ ಎಲ್ಲಿಯೂ ಇಲ್ಲದ ಸಮಸ್ಯೆಯನ್ನು ಕೇವಲ ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಸೃಷ್ಟಿ ಮಾಡಿ ನಿರಂತರ ಸಾರ್ವಜನಿಕರಿಗೆ ಕಿರುಕುಳ ಕೊಡುತ್ತಿರುವುದು ನಾಗರಿಕ ಸಮಾಜ ಒಪ್ಪುವಂತದಲ್ಲ. ಕೂಡಲೇ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಒದಗಿಸಿ ಸಾರ್ವಜನಿಕರಿಗೆ ವಿದ್ಯುತ್ ಸಂಪರ್ಕ ಒದಗಿಸಬೇಕು. ಇಲ್ಲವಾದಲ್ಲಿ ಮುಂದೆ ಆಗುವ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ ಎಂದರು.
ಹುಣಶ್ಯಾಳ ಪಿಬಿಯ ಸಂಗನಬಸವ ಮಹಾಸ್ವಾಮಿಗಳು ಹೋರಾಟ ಬೆಂಬಲಿಸಿ ಮಾತನಾಡಿ, ಜನಪರವಾಗಿರಬೇಕಾದ ಸರ್ಕಾರ ಸಮಸ್ಯೆಗಳನ್ನು ಸೃಷ್ಟಿ ಮಾಡಿ ಜನರು ಬೀದಿಗಿಳಿದು ಹೋರಾಟ ಮಾಡುವಂತೆ ಮಾಡುವುದು ಪ್ರಜಾಪ್ರಭುತ್ವ ವಿರೋಧ ನೀತಿಯಾಗಿದೆ. ಸರ್ಕಾರ ಮತ್ತು ಅಧಿಕಾರಿಗಳು ನ್ಯಾಯಯುತ ಹೋರಾಟಕ್ಕೆ ಸ್ಪಂದಿಸಿ ಕೂಡಲೇ ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ, ಜಿಲ್ಲಾಧ್ಯಕ್ಷ ವಿನೋದ ಖೇಡ, ಕರ್ನಾಟಕ ರಾಜ್ಯ ಅಂಗವಿಕಲರ ಪಾಲಕರ ಒಕ್ಕೂಟದ ಸಂತೋಷ ಕಲಗುಡಿ, ಅಂಬಣ್ಣ ಗುನ್ನಾಪೂರ, ರಾಜು ತಡಗಲಿ, ಸೋಮಶೇಖರ ಮೆಂಡೇಗಾರ, ರಾಜು ಕುಮಟಗಿ, ಮಲ್ಲಿಕಾರ್ಜುನ ಲಂಗೂಟಿ, ಅನೀಲ ಪವಾರ, ಮಲ್ಲಪ್ಪ ದೊಡಮನಿ, ಅಶೋಕ ಚೊಳಕೆ, ಸಂಜು ಬೆಳ್ಳೆನ್ನವರ, ಚಂದು ತೊನಶ್ಯಾಳ, ಅಂಬಿಕಾ ಕೊಪ್ಪದ, ಪರಶುರಾಮ ಗಾಯಕವಾಡ, ಪ್ರವೀಣ ಹೇರಲಗಿ, ಮೊಹ್ಮದ್ ರಫೀಕ್ ಬಾಗವಾನ ಮುಖಂಡರಾದ ಆನಂದ ಕುಮಾರ ಜಂಬಗಿ, ಅನೀಲ ಇಕ್ಕಡೆ, ನೀಲಾಂಬಿಕಾ ಬಿರಾದಾರ, ಸುಂದರ ಚವ್ಹಾಣ, ಲಾಯಪ್ಪ ಇಂಗಳೆ, ಪ್ರಕಾಶ ಸಬರದ, ಶಿವರಾಜ ಪಾಟೀಲ, ಸೌಮ್ಯಾ ನಾರಾಯಣಕರ, ಎಂ.ಎಚ್.ಜಹಾಗೀರದಾರ, ಮೈನುದ್ದೀನ್ ಪಟೇಲ, ಸಲೀಂ ಮುಲ್ಲಾ, ಎಸ್.ಎಸ್.ಜೂಗೂರ, ಚಾಂದಸಾಬ್ ಗೊಳಸಂಗಿ, ಸಾದೀಕಹುಸೇನ್ ಮುಶ್ರೀಫ್, ಸಂತೋಷಕುಮಾರ ಎನ್.ಎಚ್.ಹಸನಶೇಖ, ಬಿ.ವಿ.ಮಣ್ಣೂರ, ಎನ್.ಎಸ್.ಅಪರಾದ, ಮೌನೇಶ ಪಾಟೀಲ, ಇಸ್ಮಾಯಿಲ್ ಸುತಾರ, ಸವಿತಾ ದೇಸಾಯಿ, ಶಿವಶಂಕರ ತೋಟದ, ಎಸ್.ಎಸ್. ಉಪ್ಪಲದಿನ್ನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.