ಕನ್ನಡಪ್ರಭ ವಾರ್ತೆ ಗೋಕಾಕ
ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಳಿಗೆ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರು ಬರೆದ ಪತ್ರಗಳನ್ನು ಸೋಮವಾರ ಬೆಳಗ್ಗೆ ಶಾಸಕರ ಕಚೇರಿಯಲ್ಲಿ ವಿದ್ಯಾರ್ಥಿಗಳಿಗೆ ರವಾನಿಸಲಾಯಿತು. ಗೋಕಾಕ ಶೈಕ್ಷಣಿಕ ವಲಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ತಮ್ಮ ಪತ್ರದ ಮೂಲಕ ಹುರಿದುಂಬಿಸುತ್ತಿರುವ ಶಾಸಕ ರಮೇಶ ಜಾರಕಿಹೊಳಿ ಈ ಬಾರಿಯೂ ಮಕ್ಕಳಿಗೆ ಪತ್ರಗಳನ್ನು ಬರೆದು ಅವರಿಗೆ ಆತ್ಮಸ್ಥೈರ್ಯ ತುಂಬಿಸುವ ಕಾರ್ಯ ಮಾಡಿದ್ದಾರೆ.ಪತ್ರದಲ್ಲೇನಿದೆ: 10ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ನಮ್ಮ ಗೋಕಾಕ ಶೈಕ್ಷಣಿಕ ವಲಯದ ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಕಳೆದ ಹತ್ತು ವರ್ಷಗಳಿಂದ ನಮ್ಮ ತಾಲೂಕಿನ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ವಲಯದ ನುರಿತ - ಉತ್ಸಾಹಿ ಗುರು ಬಳಗ ಅತ್ಯಂತ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ನಿಮ್ಮ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಿದೆ. ಈಗ ಇರುವ ಸಮಯ ಸದುಪಯೋಗ ಪಡಿಸಿಕೊಂಡು ಚನ್ನಾಗಿ ಅಭ್ಯಾಸ ಮಾಡಿ. ಒಳ್ಳೆಯ ಅಂಕಗಳೊಂದಿಗೆ ಉತ್ತೀರ್ಣರಾಗಿ ನಿಮ್ಮ ತಂದೆ ತಾಯಿ ಕನಸು ನನಸು ಮಾಡಿ. ಗುರುಗಳಿಗೆ ಮತ್ತು ನಮ್ಮ ತಾಲೂಕಿಗೆ ಕೀರ್ತಿ ತರುವಂತಹ ಸಾಧನೆ ಮಾಡುತ್ತಿರೆಂಬ ವಿಶ್ವಾಸ ನನಗಿದೆ. ದಿನ ನಿತ್ಯದ ಅಭ್ಯಾಸದ ಜೊತೆಗೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನಹರಿಸಿ, ಉತ್ತಮ ಸಾಧನೆಗೆ ನಿರಂತರ ಅಭ್ಯಾಸದಲ್ಲಿ ತೊಡಗಿ, ನಿಮ್ಮ ಭವಿಷ್ಯ ಉಜ್ವಲವಾಗಲಿ. ಮನೆಯಲ್ಲಿ ಅಪ್ಪ, ಅಮ್ಮ ಹಾಗೂ ಹಿರಿಯರಿಗೆ ಹೊಸ ವರ್ಷದ ಶುಭಾಶಯಗಳೊಂದಿಗೆ ನನ್ನ ನಮಸ್ಕಾರ. ನಿಮಗೆ ಶುಭವಾಗಲಿ. ತಮ್ಮ ಪ್ರೀತಿಯ ಶಾಸಕ ರಮೇಶ ಜಾರಕಿಹೊಳಿ.ಈ ವೇಳೆ ಮಾಜಿ ಜಿಪಂ ಸದಸ್ಯ ಟಿ.ಆರ್. ಕಾಗಲ, ಎಂ.ಎಲ್ ತೋಳಿನವರ, ಶಾಸಕರ ಕಚೇರಿ ಸಹಾಯಕ ಸುರೇಶ ಸನದಿ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ಸುರೇಶ ಪತ್ತಾರ, ಯಲ್ಲಪ್ಪ ನಂದಿ ಸೇರಿದಂತೆ ಇತರರು ಇದ್ದರು.