ಕರವೇ ಎಂಎನ್ ಆರ್ ರಾಜು ಕಾಂಗ್ರೆಸ್ ಸೇರ್ಪಡೆ

KannadaprabhaNewsNetwork | Published : Apr 24, 2024 2:22 AM

ಸಾರಾಂಶ

ನಮ್ಮ ಕಾಂಗ್ರೆಸ್ ನ ತತ್ವ, ಸಿದ್ಧಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಾಜು ಅವರ ನೇತೃತ್ವದಲ್ಲಿ ಬೆಂಬಲ ಸೂಚಿಸಿದ್ದಾರೆ. ಇವರೆಲ್ಲರೂ ಸಂಸದ ಡಿ.ಕೆ.ಸುರೇಶ್ ಅವರ ಗೆಲುವಿಗೆ ಶ್ರಮಿಸಲಿದ್ದಾರೆ.

ಸಂಸದ ಸುರೇಶ್ ಸಮ್ಮುಖದಲ್ಲಿ ಕಾರ್ಯಕರ್ತರೊಂದಿಗೆ ರಾಜು ಸೇರ್ಪಡೆ

ಕನ್ನಡಪ್ರಭ ವಾರ್ತೆ ರಾಮನಗರ

ಸಂಸದ ಡಿ.ಕೆ.ಸುರೇಶ್ ಅವರ ನಾಯಕತ್ವ ಹಾಗೂ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂಎನ್ಆರ್ ರಾಜು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಕಾಂಗ್ರೆಸ್ ಮುಖಂಡ ರೈಡ್ ನಾಗರಾಜು ಅವರ ನೇತೃತ್ವದಲ್ಲಿ ಸಂಸದ ಸುರೇಶ್ ಅವರ ಸಮ್ಮುಖದಲ್ಲಿ ರಾಜುರವರು ವೇದಿಕೆ ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ಪಕ್ಷ ಸೇರಿದರು.

ಈ ವೇಳೆ ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ನಮ್ಮ ಕಾಂಗ್ರೆಸ್ ಪಕ್ಷದ ತತ್ವ ಹಾಗೂ ಸಿದ್ಧಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಾಜು ಅವರ ನೇತೃತ್ವದಲ್ಲಿ ಬೆಂಬಲ ಸೂಚಿಸಿದ್ದಾರೆ. ಇವರೆಲ್ಲರೂ ಸಂಸದ ಡಿ.ಕೆ.ಸುರೇಶ್ ಅವರ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಮಾತನಾಡಿದ ರಾಜು, ಸಂಸದ ಡಿ.ಕೆ.ಸುರೇಶ್ ಅವರ ಕನ್ನಡ ಪರ ಹೋರಾಟ ನಾನು ಕಾಂಗ್ರೆಸ್ ಸೇರ್ಪಡೆಗೊಳ್ಳಲು ಮುಖ್ಯ ಕಾರಣವಾಗಿದೆ. ಇನ್ನು ಸುರೇಶ್ ಅವರು ಸಹ ಕನ್ನಡ ಪರ ಹೋರಾಟಗಾರರ ಮೇಲಿನ ಎಲ್ಲಾ ಕೇಸ್ಗಳನ್ನು ಹಿಂಪಡೆಯಲಿಕ್ಕೆ ಸರಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ಈ ಹಿಂದೆ ಸಂಸದರಾಗಿದ್ದ ವೇಳೆ ದೇಶದಲ್ಲಿಯೇ ಪ್ರಥಮ ಹಾಗೂ ಮಾದರಿಯಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕ್ಷೇತ್ರದಾದ್ಯಂತ ನಿರ್ಮಾಣ ಮಾಡಿದರು. ಆ ಮೂಲಕ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜನತೆ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡುವ ಮೂಲಕ ಆಧುನಿಕ ಭಗೀರಥನಾಗಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.

ಕಬ್ಬಡಿ ಬಾಬು, ಆರ್ಬಿಎಲ್ ಲೋಕೇಶ್, ದೇವರಾಜು, ನಾಗರಾಜು, ಸಾಗರ್, ವಿನಯ್, ಸುನೀಲ್, ಸುರೇಶ್, ಶಿವರಾಜು, ರಘುರಾಂ ಹಾಜರಿದ್ದರು.

----------------------------

23ಕೆಆರ್ ಎಂಎನ್ 6.ಜೆಪಿಜಿ

ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂಎನ್ಆರ್ ರಾಜು ಕಾಂಗ್ರೆಸ್ ಸೇರ್ಪಡೆಯಾದರು.

---------------------------

Share this article