ಕಾಡಾನೆಗಳ ದಾಳಿಗೆ ಇನ್ನೆಷ್ಟು ಜೀವ ಬಲಿಯಾಗಬೇಕು

KannadaprabhaNewsNetwork | Published : Jan 28, 2025 12:48 AM

ಸಾರಾಂಶ

ಬೇಲೂರು ತಾಲೂಕಿನಲ್ಲಿ ಸೋಮವಾರ ಒಂದೇ ದಿನ ನಾಲ್ವರ ಮೇಲೆ ಕಾಡಾನೆ ದಾಳಿ ನಡೆಸಿದೆ. ಕಾಫಿ ತೋಟಕ್ಕೆ ಕೆಲಸಕ್ಕೆಂದು ಹೋಗುತ್ತಿದ್ದ ಇಬ್ಬರು ಮಹಿಳೆಯರನ್ನು ಸೊಂಡಿಲಿನಿಂದ ಎಸೆದು ಗಾಯಗೊಳಿಸಿದೆ. ತಾಲೂಕಿನ ಬಿಕ್ಕೋಡು ಎಸ್ಟೇಟ್‌ನಲ್ಲಿ ಸೋಮವಾರ ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದ ಗೀತಾ (40) ಮತ್ತು ಹೇಮ (38) ಎಂಬ ಇಬ್ಬರು ಮಹಿಳೆಯರ ಮೇಲೆ ಕಾಡಾನೆ ದಾಳಿ ಮಾಡಿದೆ. ಗೀತಾ ಅವರ ಹೊಟ್ಟೆ ಮತ್ತು ತಲೆಗೆ ತೀವ್ರ ಗಾಯವಾಗಿದ್ದು, ಹೇಮ ಅವರ ಮುಖ ಮತ್ತು ಬಲ ಕೈಗೆ ಗಂಭೀರ ಪೆಟ್ಟಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಆಗೊಮ್ಮೆ ಈಗೊಮ್ಮೆ ಕಾಡಾನೆಗಳ ದಾಳಿಗಳಿಂದ ಕೆರಳುತ್ತಿದ್ದ ಮಲೆನಾಡಿಗರು ಇದೀಗ ಪ್ರತಿನಿತ್ಯದ ನಡೆಯುತ್ತಿರುವ ಕಾಡಾನೆ ದಾಳಿಯಿಂದ ಹೈರಾಣಾಗಿದ್ದಾರೆ. ಇದರೊಂದಿಗೆ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎನ್ನುವ ಕೂಗಿಗೆ ಅರ್ಥವೇ ಇಲ್ಲವಾಗಿದ್ದು, ಕಾಡಾನೆ ಹಾವಳಿ ಎನ್ನುವ ಸಮಸ್ಯೆ ಶಾಶ್ವತ ಪರಿಹಾರವೇ ಇಲ್ಲದ ಶಾಶ್ವತ ಸಮಸ್ಯೆಯಾಗಿ ಪರಿಣಮಿಸಿದೆ.ಕೆಲ ದಿನಗಳ ಹಿಂದಷ್ಟೇ ಆಲೂರು ತಾಲೂಕಿನ ಅಡಿಬೈಲು ರಂಗನಾಥಸ್ವಾಮಿ ಬೆಟ್ಟದ ಬಳಿ ಮನೆಗೆ ದಿನಸಿ ತರಲೆಂದು ಹೋದ ವೃದ್ಧರೊಬ್ಬರನ್ನು ಕಾಡಾನೆ ತುಳಿದು ಕೊಂದಿತ್ತು. ಇದಾಗಿ ಇನ್ನೂ ಒಂದು ವಾರವಾಗಿಲ್ಲ. ಆಗಲೇ ಬೇಲೂರು ತಾಲೂಕಿನಲ್ಲಿ ಸೋಮವಾರ ಒಂದೇ ದಿನ ನಾಲ್ವರ ಮೇಲೆ ಕಾಡಾನೆ ದಾಳಿ ನಡೆಸಿದೆ. ಕಾಫಿ ತೋಟಕ್ಕೆ ಕೆಲಸಕ್ಕೆಂದು ಹೋಗುತ್ತಿದ್ದ ಇಬ್ಬರು ಮಹಿಳೆಯರನ್ನು ಸೊಂಡಿಲಿನಿಂದ ಎಸೆದು ಗಾಯಗೊಳಿಸಿದೆ. ತಾಲೂಕಿನ ಬಿಕ್ಕೋಡು ಎಸ್ಟೇಟ್‌ನಲ್ಲಿ ಸೋಮವಾರ ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದ ಗೀತಾ (40) ಮತ್ತು ಹೇಮ (38) ಎಂಬ ಇಬ್ಬರು ಮಹಿಳೆಯರ ಮೇಲೆ ಕಾಡಾನೆ ದಾಳಿ ಮಾಡಿದೆ.

ಗೀತಾ ಅವರ ಹೊಟ್ಟೆ ಮತ್ತು ತಲೆಗೆ ತೀವ್ರ ಗಾಯವಾಗಿದ್ದು, ಹೇಮ ಅವರ ಮುಖ ಮತ್ತು ಬಲ ಕೈಗೆ ಗಂಭೀರ ಪೆಟ್ಟಾಗಿದೆ. ಗಾಯಗೊಂಡ ಮಹಿಳೆಯರನ್ನು ತಕ್ಷಣವೇ ಬೇಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಜನವಸತಿ ಪ್ರದೇಶದಲ್ಲೂ ಓಡಾಟ: ಬೇಲೂರು ತಾಲೂಕಿನ ಅರೇಹಳ್ಳಿ ಭಾಗದಲ್ಲಿ ಹೆಚ್ಚು ಕಾಡಾನೆ ಹಾವಳಿ ಕಂಡುಬರುತ್ತಿದೆ. ಬಿಕ್ಕೋಡು, ಮಲಸಾವರ, ಅರೇಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಂತರವಾಗಿ ಕಾಡಾನೆಗಳು ದಾಳಿ ಮಾಡುತ್ತಲೇ ಇವೆ. ರೈತರು ಹಾಗೂ ಕಾಫಿ ಬೆಳೆಗಾರರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕಾಡಾನೆಗಳು ಹಾಳು ಮಾಡುತ್ತಿವೆ. ಸಾಕಷ್ಟು ಬೆಳೆ ನಷ್ಟ ಮಾಡುತ್ತಿವೆ. ಅದರಲ್ಲೂ ಭೀಮ ಎನ್ನುವ ಕಾಡಾನೆ ಜನವಸತಿ ಪ್ರದೇಶದಲ್ಲೇ ಅಡ್ಡಾಡುತ್ತದೆ. ಆಹಾರ ಬೇಕೆಂದರೆ ರೌಡಿಗಳ ರೀತಿ ತೋಟಗಳಿಗೆ ನುಗ್ಗುತ್ತದೆ. ಇಲ್ಲವೇ ಮನೆಗಳಲ್ಲಿ ಸಂಗ್ರಹಿಸಿಟ್ಟ ದವಸ ಧಾನ್ಯಗಳ ವಾಸನೆ ಹಿಡಿದು ಮನೆಗಳ ಮೇಲೆ ದಾಳಿ ಮಾಡಿ ಕಿಟಕಿ ಬಾಗಿಲನ್ನೇ ಮುರಿದು ಬತ್ತ ಅಕ್ಕಿ ಮೂಟೆಗಳನ್ನು ಹೊತ್ತೊಯ್ದು ತಿನ್ನುತ್ತಿದೆ. ಇದರ ಗೂಂಡಾ ವರ್ತನೆಯಿಂದ ಜನರು ರೋಸಿಹೋಗಿದ್ದಾರೆ.

ಕೆಲ ತಿಂಗಳುಗಳ ಹಿಂದಷ್ಟೇ ಬೇರೊಂದು ಆನೆಯಿಂದ ತಿವಿಸಿಕೊಂಡು ಹಿಂಭಾಗದ ತೊಡೆಯಲ್ಲಿ ದೊಡ್ಡ ಗಾಯವಾಗಿ ಗಾಯ ಕೀವುಗಟ್ಟಿ ಹುಳು ಬಿದ್ದು, ನೋವಿನಿಂದ ಒದ್ದಾಡುತ್ತಿತ್ತು. ಈ ವೇಳೆ ಎಲಿಫೆಂಟ್ ಟಾಸ್ಕ್‌ಫೋರ್ಸ್‌ನಲ್ಲಿರುವ ಯುವಕರು ಜೀವದ ಹಂಗು ತೊರೆದು ಇದೇ ಭೀಮನಿಗೆ ಔಷಧಿ ಹಚ್ಚಿದ್ದರು. ಆದರೆ, ಅಂದು ಸಾಯುವ ಹಂತಕ್ಕೆ ಹೋಗಿದ್ದ ಭೀಮ ಇಂದು ಚೇತರಿಸಿಕೊಂಡು ಮತ್ತದೆ ಚಾಳಿ ಮುಂದುವರಿಸಿ ಜನರ ಕೋಪಕ್ಕೆ ಗುರಿಯಾಗಿದ್ದಾನೆ. -----------------------------*ಬಾಕ್ಸ್‌1 : ತೋಟಗಳನ್ನು ಹಾಳು ಬಿಡಬೇಕಾಗುತ್ತದೆ ಈಗಾಗಲೇ ಕಾರ್ಮಿಕರ ಕೊರತೆಯಿಂದಾಗಿ ಕಾಫಿ ತೋಟಗಳನ್ನು ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಅದರಲ್ಲೂ ಅಸ್ಸಾಂ ಸೇರಿದಂತೆ ಉತ್ತರ ಭಾರತದ ಕಾರ್ಮಿಕರು ಸಿಗುತ್ತಿರುವುದರಿಂದ ಹೇಗೋ ತೋಟಗಳಲ್ಲಿ ಕೆಲಸ ಮಾಡಿಸುತ್ತಿದ್ದೇವೆ. ಹೀಗೆ ಪ್ರತಿನಿತ್ಯ ಕಾಡಾನೆಗಳು ದಾಳಿ ಮಾಡುತ್ತಿರುವುದರಿಂದ ಕಾರ್ಮಿಕರು ತೋಟಗಳಿಗೆ ಬರಲು ಹೆದರುತ್ತಿದ್ದಾರೆ. ಹಾಗಾಗಿ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಾವು ತೋಟಗಳನ್ನು ಹಾಳುಬಿಡಬೇಕಾಗುತ್ತದೆ. ನ್ಯಾನ್ಸಿ ಪಿಂಟೋ, ಕಾಫಿ ಬೆಳೆಗಾರರು, ಅರೇಹಳ್ಳಿ * ಬಾಕ್ಸ್‌ 2- ಪರಿಹಾರದ ಹಣ ತಗೊಂಡು ಏನು ಮಾಡುವುದು? ಕಾಡಾನೆಗಳನ್ನು ನಿಯಂತ್ರಣ ಮಾಡಲಾಗದ ಸರ್ಕಾರ ಕಾಡಾನೆಗಳಿಂದ ಸತ್ತವರ ಕುಟುಂಬಕ್ಕೆ 15 ಲಕ್ಷ ರು. ಪರಿಹಾರದ ಹಣವನ್ನೇನೋ ಕೊಡುತ್ತದೆ. ಆದರೆ, ಮನೆಗೆ ಆಧಾರವಾಗಿದ್ದವರೇ ಇಲ್ಲವಾದ ಮೇಲೆ ಆ 15 ಲಕ್ಷ ಹಣ ತೆಗೆದುಕೊಂಡು ಏನು ಮಾಡುವುದು, ಆ 15 ಲಕ್ಷದಿಂದಲೇ ಎಲ್ಲಾ ಸಿಗುತ್ತದೆಯೇ?. ಲಕ್ಷ್ಮಿ, ಬಿಕ್ಕೋಡು ನಿವಾಸಿ.

Share this article