ಕನ್ನಡಪ್ರಭ ವಾರ್ತೆ ಬೇಲೂರು ಅಸಂಘಟಿತ ಕಾರ್ಮಿಕ ಕಾರ್ಡ್ ನೀಡಲಾಗುತ್ತಿದ್ದು, ಅದನ್ನು ಎಲ್ಲಾ ಕಾರ್ಮಿಕ ವರ್ಗದವರು ಪಡೆಯುವಂತೆ ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕ ವಿಜಯಕುಮಾರ್ ತಿಳಿಸಿದರು.
ಪಟ್ಟಣದ ಕಾರ್ಮಿಕ ಇಲಾಖೆಯಲ್ಲಿ ಅಸಂಘಟಿತ ಕಾರ್ಮಿಕರಿಗೆ ನೋಂದಣಿ ಅಭಿಯಾನದಲ್ಲಿ ಕಾರ್ಮಿಕ ಕಾರ್ಡನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ಸಾರಿಗೆ, ಟೈಲರ್ ಹಾಗೂ ಫೋಟೋಗ್ರಫಿ ಕಾರ್ಮಿಕರಿಗೆ ನೋಂದಣಿ ಮಾಡುವ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಲವತ್ತಕ್ಕೂ ಹೆಚ್ಚು ಕಾರ್ಮಿಕರಿಗೆ ನೋಂದಣಿ ಮಾಡಿಸಲಾಯಿತು. ಶೇ.92ಕ್ಕಿಂತ ಹೆಚ್ಚು ಕಾರ್ಮಿಕರು ಅಸಂಘಟಿತ ಕ್ಷೇತ್ರದಲ್ಲಿ ದುಡಿಯುತ್ತಿದ್ದು, ರಾಜ್ಯದಲ್ಲಿ 2.35 ಕೋಟಿ ಕಾರ್ಮಿಕರುಗಳಿದ್ದು, ಅವರಲ್ಲಿ 1.70 ಕೋಟಿ ಕಾರ್ಮಿಕರು ಅಸಂಘಟಿತ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.ಬಹುತೇಕ ಕಾರ್ಮಿಕರು ಶಾಸನಬದ್ದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ, ಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸಬೇಕಾಗಿದೆ. ಆ ನಿಟ್ಟಿನಲ್ಲಿ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳುಬೇಕು. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಈಗಾಗಲೇ 144 ಅಸಂಘಟಿತ ಕಾರ್ಮಿಕರುಗಳನ್ನು ಗುರುತಿಸಿದ್ದು, ಖಾಸಗಿ, ವಾಣಿಜ್ಯ, ಸಾರಿಗೆ, ಪತ್ರಿಕಾ ವಿತರಕರು, ಇತರೆ ಕಾರ್ಮಿಕರಿಗೆ ರು. 5 ಲಕ್ಷಗಳ ಅಪಘಾತ ಪರಿಹಾರ ಯೋಜನೆಯನ್ನು ಜಾರಿಗೆ ತಂದಿರುತ್ತದೆ ಎಂದರು.
ಅಂಬೇಡ್ಕರ್ ಸಹಾಯ ಸಂಘ ಅಭಿವೃದ್ಧಿ ಯೋಜನೆ ಅಡಿ ತಾಲೂಕು ಛಾಯಾಗ್ರಹಕ ಸಂಘ, ಚನ್ನಕೇಶವ ಟ್ಯಾಕ್ಸಿ ಕಾರ್ಮಿಕರು ಮಾಲೀಕರ ಸಂಘ, ತಾಲೂಕು ಟೈಲರ್ ಸಂಘ ಸೇರಿದಂತೆ ಇತರ ಸಂಘ ಸಂಸ್ಥೆಯವರು ನೋಂದಣಿ ಅಭಿಯಾನದಲ್ಲಿ ಪಾಲ್ಗೊಂಡು ಕಾರ್ಮಿಕ ಕಾರ್ಡನ್ನು ಪಡೆದಿರುತ್ತಾರೆ. ಇದೇ ರೀತಿ ಹೆಚ್ಚು ಕಾರ್ಮಿಕರು ನೋಂದಾಯಿಸಿಕೊಳ್ಳಲು ಮುಂದೆ ಬಂದರೆ ಎರಡು ದಿನಕ್ಕೊಮ್ಮೆ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ಕಾರ್ಮಿಕ ಇಲಾಖೆಯಲ್ಲಿ ಹಮ್ಮಿಕೊಳ್ಳಲಾಗುತ್ತದೆ. ತಾಲೂಕಿನ ಎಲ್ಲಾ ವರ್ಗದ ಕಾರ್ಮಿಕರು ನೋಂದಣಿ ಅಭಿಯಾನದ ಸಹಾಯವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕ ವಲಯದ ಡಾಟಾ ಎಂಟ್ರಿ ಆಪರೇಟರ್ ಕಾವ್ಯ, ತಾಲೂಕು ಛಾಯಾಗ್ರಾಹಕ ಸಂಘದ ಅಧ್ಯಕ್ಷ ಎ ರಾಘವೇಂದ್ರ ಹೊಳ್ಳ, ಮಾಜಿ ಅಧ್ಯಕ್ಷ ಎ ಬಿ ಪ್ರಕಾಶ್ ನಾಯಕ್, ಮಂಜುನಾಥ್ ರುದ್ರೇಶ್ ಹಾಜರಿದ್ದರು.