ಎಲ್.ಎಸ್. ಶ್ರೀಕಾಂತ್‌ಕನ್ನಡಪ್ರಭ ವಾರ್ತೆ ಮೈಸೂರು
ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ರಂಗಾಸಕ್ತರಿಗಾಗಿ ರಂಗಾಯಣ ಆವರಣದಲ್ಲಿ ಆಯೋಜಿಸಿದ್ದ ನವರಾತ್ರಿ ಜನಪದ ರಂಗ ಉತ್ಸವ ಯಶಸ್ವಿಯಾಗಿ ನೆರವೇರಿತು.ದಸರಾ ಮಹೋತ್ಸವದ ಉದ್ಘಾಟನೆ ದಿನದಂದು ವನರಂಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಈ ಉತ್ಸವಕ್ಕೆ ಚಾಲನೆ ನೀಡಿದರು.
ನಂತರ ನಡೆದ ರಂಗ ಉತ್ಸವದಲ್ಲಿ ರಾಜ್ಯ ವಿವಿಧ ಜಿಲ್ಲೆಗಳ ಕಲಾವಿದರು ತಮ್ಮ ವಿಶಿಷ್ಟ ಕಲೆಗಳನ್ನು ಪ್ರದರ್ಶಿಸಿ, ರಂಗಾಸಕ್ತರಿಂದ ಚಪ್ಪಾಳೆ ಗಿಟ್ಟಿಸಿದರು.ಮೈಸೂರು ಗುರುರಾಜ್ ಮತ್ತು ತಂಡ ಮಂಟೇಸ್ವಾಮಿ ಕಾವ್ಯ, ಬಳ್ಳಾರಿಯ ಸಂಗನಕಲ್ಲು ಸಂಕಮೇಶ್ವರ ನಾಟಕ ಮಂಡಳಿಯ ರೇಣುಕಾ ಮಹಾತ್ಮೆ ಬಯಲಾಟ, ಹಾಸನ ಜಿಲ್ಲೆಯ ಹೂವಿನಹಳ್ಳಿ ಕಾವಲಿನ ಮಾಯಾವಿ ಇಂದ್ರಜಿತ್ ಅವರಿಂದ ಶ್ರೀ ರಾಜಾರಾಮ ತೊಗಲುಗೊಂಬೆ ಮೇಳ, ಬೆಳಗಾವಿ ಜಿಲ್ಲೆಯ ಸವದಿಯ ಶ್ರೀ ವೀರಭದ್ರೇಶ್ವರ ಕಲಾ ಸಂಘದ ಹಾಗೂ ಶ್ರೀ ಕೃಷ್ಣ ಪಾರಿಜಾತ ಕಂಪನಿಯಿಂದ ಶ್ರೀ ಕೃಷ್ಣ ಪಾರಿಜಾತ, ಕುಂದಾಪುರ ಕೊಂಡದಕುಳಿ, ಅಶ್ವಿನಿ ಕೊಂಡದಕುಳಿ ಮತ್ತು ತಂಡದಿಂದ ನರಕಾಸು ವಧೆ (ಯಕ್ಷಗಾನ).
ಬೆಳಗಾವಿ ಜಿಲ್ಲೆಯ ಅಮ್ಮಣಗಿ ಶ್ರೀ ಅಂಬಿಕಾ ದೇವಿ ಸಂಗ್ಯಾಬಾಳ್ಯ ಬಯಲಾಟ ಕಲಾಸಂಘದಿಂದ ಸಂಗ್ಯಾಬಾಳ್ಯ, ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೊನೆಹಳ್ಳಿಯ ಮೂಡಲಪಾಯ ಯಕ್ಷಗಾನ ಟ್ರಸ್ಟ್‌ನಿಂದ ಕರಿಭಂಟನ ಕಾಳಗ, ತುಮಕೂರಿನ ಡಾ. ಲಕ್ಷ್ಮಣದಾಸ್ ಮಿತ್ರ ಮಂಡಳಿಯಿಂದ ರಂಗಕೀರ್ತನ ಸಂಪಂದ ಪಾದುಕಾ ಪಟ್ಟಾಭಿಷೇಕ ನಾಟಕ ಪ್ರಸ್ತುತಪಡಿಸಿದರು.ಉತ್ಸವದ ಕಡೆ ದಿನ ಅ. 11ರಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದ ಸೂತ್ರದ ಬೊಂಬೆ ಮೇಳ, ಶ್ರೀ ರಾಮೇಶ್ವರ ಕೃಪಾಪೋಷಿತ ಯಕ್ಷಗಾನದಿಂದ ಸತ್ಯ ಹರಿಶ್ಚಂದ್ರ ಪ್ರಸ್ತುತಪಡಿಸುವರು.
ಜನಪದ ರಂಗ ಉತ್ಸವದ ಅಂಗವಾಗಿ ಪ್ರತಿದಿನ ಹೆಸರಾಂತ ವಿವಿಧ ಕಲಾವಿದರನ್ನು ಗೌರವಿಸಲಾಯಿತು.ಮೈಸೂರಿನ ನೀಲಗಾರ ಜನಪದ ಗಾಯಕ ಡಾ. ಮೈಸೂರು ಗುರುರಾಜ್, ಬಳ್ಳಾರಿ ಜಿಲ್ಲೆಯ ಹಿರಿಯ ಬಯಲಾಟ ಕಲಾವಿದರಾದ ಶ್ರೀ ವೀರನಗೌಡ ಮುದ್ದಟನೂರು, ಹಾಸನ ಜಿಲ್ಲೆಯ ಹಿರಿಯ ಕಲಾವಿದೆ ತೊಗಲು ಗೊಂಬೆಯಾಟದ ದಾಕ್ಷಾಯಿಣಿ, ಹಾಸನ ಜಿಲ್ಲೆಯ ಹಿರಿಯ ಕಲಾವಿದ ತೆಗಲುಗೊಂಬೆಯಾಟದ ಪ್ರಭಾವತಿ, ಬೆಳಗಾವಿ ಜಿಲ್ಲೆಯ ಶ್ರೀ ಕೃಷ್ಣ ಪಾರಿಜಾತ ಹಿರಿಯ ಕಲಾವಿದ ವಿಠಲ ಗೋವಿಂದ ಗುರುವ, ಕುಂದಾಪುರ ಕೊಂಡದಕುಳಿ ಯಕ್ಷಗಾನದ ಹಿರಿಯ ಕಲಾವಿದ ರಾಮಚಂದ್ರ ಗಣೇಶ ಹೆಗಡೆ, ಬೆಳಗಾವಿ ಜಿಲ್ಲೆಯ ಸಣ್ಣಾಟದ ಹಿರಿಯ ಕಲಾವಿದ ಡಾ. ಲಕ್ಷ್ಮೀಬಾಯಿ ಮಾದಾರ, ತಿಪಟೂರಿನ ಕೊನೆಹಳ್ಳಿಯ ಮೂಡಲಪಾಯ ಯಕ್ಷಗಾನ ಹಿರಿಯ ಕಲಾವಿದ ಎ.ಬಿ. ಶಂಕರಪ್ಪ, ಮೈಸೂರಿನ ವೃತ್ತಿರಂಗಭೂಮಿ ಹಿರಿಯ ಕಲಾವಿದೆ ಸರಸ್ವತಿ ಉರುಫ್ ಜುಲೇಖಾ ಬೇಗಂ ಅವರನ್ನು ಸನ್ಮಾನಿಸಲಾಯಿತು.
ಅ. 11ರಂದು ಮೈಸೂರಿನ ನತ್ತಿರಂಗಭೂಮಿ ಹಿರಿಯ ಕಲಾವಿ ಇಂದಿರಮ್ಮ ಅವರನ್ನು ಗೌರವಿಸಲಿದೆ.ಪ್ರತಿದಿನ ಸಂಜೆ ವನರಂಗದಲ್ಲಿ ಅಂತಾರಾಜ್ಯ ಕಲಾತಂಡಗಳಿಂದ ಜಾನಪದ ನೃತ್ಯ ಪ್ರದರ್ಶಿಸಿದರು.
ಉತ್ತರ ಪ್ರದೇಶ್ ಹೋಲಿ ನೃತ್ಯ, ಮಹಾರಾಷ್ಟ್ರದ ಲಾವಣಿ ನೃತ್ಯ, ತ್ರಿಪುರದ ಮಮಿತ ನೃತ್ಯ, ಮಧ್ಯಪ್ರದೇಶದ ಬದಾಯಿ ನೃತ್ಯ, ಒಡಿಸ್ಸಾದ ಬದಾನ್ ನೃತ್ಯ, ಕೇರಳ ಸಿಂಗಾರಿ ಮೇಳಂ, ತಮಿಳುನಾಡಿನ ಕರಗಂ ನೃತ್ಯ, ರಾಜಸ್ಥಾನದ ಚಕ್ರಿ ನೃತ್ಯ, ಉತ್ತರಖಾಂಡದ ಥಡಿಯಾ ಚಾಫ್ಲಾ ಹಾಗೂ ಹರಿಯಾಮದ ಘೋಮರ್ ನೃತ್ಯ ಪ್ರದರ್ಶಿಸಿದರು.