ಕನ್ನಡಪ್ರಭ ವಾರ್ತೆ ಹಾಸನವಿದ್ಯಾರ್ಥಿಗಳಲ್ಲಿರುವ ಚಂಚಲತೆಯನ್ನು ಹೋಗಲಾಡಿಸಿ ಅವರಲ್ಲಿ ಏಕಾಗ್ರತೆಯನ್ನು ತರಿಸುವುದು ಅಧ್ಯಾಪಕರಿಗೆ ಸವಾಲಿನ ಕೆಲಸವಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯರಾದ ಪರಮೇಶ್ವರ ಭಟ್ ಅಭಿಪ್ರಾಯಿಸಿದರು.ನಗರದ ವಿಜಯಶಾಲೆಯಲ್ಲಿ ನಡೆದ ಗಣೇಶ ಚತುರ್ಥಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಾ, ವಿದ್ಯಾರ್ಥಿಗಳಲ್ಲಿ ಕಲಿಕೆ ಹೇಗಿರಬೇಕೆಂದರೆ ಶಿಕ್ಷಕರು ಹೇಳುವ ಕಥೆಯನ್ನು ಮನಗೊಟ್ಟು ಆಲಿಸಿ ನಂತರ ಆ ಕಥೆಯನ್ನು ವಿದ್ಯಾರ್ಥಿಗಳು ವೇದಿಕೆಯಲ್ಲಿ ಮನಮುಟ್ಟುವಂತೆ ಅಭಿನಯಿಸುವಂತಿರಬೇಕು. ಇದು ಶಿಕ್ಷಣದ ನಿಜವಾದ ಪರಿಕಲ್ಪನೆ. ಜಗತ್ತಿನಲ್ಲಿ ತಾಯಿ ತಂದೆ ಹಾಗೂ ಗುರುಗಳಿಗಿಂತ ಮಿಗಿಲಾದ ದೇವರಿಲ್ಲ, ಅವರಿಗೆ ಪ್ರತಿ ದಿನ ನಮಸ್ಕಾರ ಮಾಡುವ ಮೂಲಕ ಗೌರವ ಸಲ್ಲಿಸಬೇಕು ಎನ್ನುವುದನ್ನು ಗಣೇಶ-ಸುಬ್ರಹ್ಮಣ್ಯರ ಕಥೆಯ ಮೂಲಕ ವಿವರಿಸಿದರು. ಶಿಕ್ಷಕರು ನೀಡುವ ಜ್ಞಾನದೊಂದಿಗೆ ವಿದ್ಯಾರ್ಥಿಗಳು ಸ್ವಯಂ ನಿರಂತರ ಕಲಿಕೆಯ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾ ಸುಜ್ಞಾನಿಗಳಾಗಬೇಕೆಂದರು.ಶಾಲಾ ಸಂಸ್ಥಾಪಕ ನಿರ್ದೇಶಕರಾದ ತಾರಾ ಎಸ್. ಸ್ವಾಮಿಯವರು ಮಾತನಾಡುತ್ತಾ, ರಾಸಾಯನಿಕ ಮಿಶ್ರಣದಿಂದ ಮಾಡಿದ ಗಣಪತಿ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸಿದಾಗ ಜಲಮಾಲಿನ್ಯ ಉಂಟಾಗಿ ಜಲಚರ ವಾಸಿಗಳಿಗೆ ತೊಂದರೆಯಾಗುತ್ತದೆ. ನಮ್ಮ ಪೂರ್ವಜರು ನದಿ, ಬೆಟ್ಟ, ಪ್ರಕೃತಿಯನ್ನು ಪೂಜಿಸಿಕೊಂಡು ಬಂದಿದ್ದಾರೆ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಆಚರಣೆಗಳು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿವೆ. ನಾವು ಆಚರಿಸುವ ಧಾರ್ಮಿಕ ಆಚರಣೆಗಳು ಪರಿಸರಕ್ಕೆ ಪೂರಕವಾಗಿರಬೇಕು. ಪುರಾಣ ಪುಣ್ಯಕಥೆಗಳನ್ನು ವೈಜ್ಞಾನಿಕವಾಗಿ ತರ್ಕ ಮಾಡದೆ ಮನಕುಲದ ಏಳಿಗೆಗಾಗಿ ಮತ್ತು ಪರಿಸರ ಸಂರಕ್ಷಣೆಗಾಗಿ ಅವುಗಳಲ್ಲಿರುವ ನೀತಿಯನ್ನು ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಪ್ರಾಂಶುಪಾಲ ನಂದೀಶ ಕೆ. ಎಸ್ ಅವರು ಗಣೇಶನ ಅಂಗಾಂಗಗಳ ವೈಚಾರಿಕ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳು ತಾವು ತಯಾರಿಸಿದ್ದ ಹಾಗೂ ಸಂಗ್ರಹಿಸಿದ್ದ 126 ವಿವಿಧ ಬಗೆಯ ಗಣಪತಿ ಮೂರ್ತಿಗಳು ವೀಕ್ಷಕರ ಮನಸೂರೆಗೊಂಡವು. ಒಂದನೇ ತರಗತಿಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಮನ ಮೋಹಕವಾಗಿತ್ತು. ಮತ್ತು ಅವರೇ ಸಂಪೂರ್ಣ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಕಾರ್ಯಕ್ರಮದಲ್ಲಿ ಶಾಲಾ ಶೈಕ್ಷಣಿಕ ಮುಖ್ಯಸ್ಥೆ ಲಕ್ಷ್ಮೀಯವರು ಹಾಡಿದ ಗಣೇಶನ ಕುರಿತ ಭಕ್ತಿಗೀತೆಯು ನೆರೆದಿದ್ದವರ ಮನಸೂರೆಗೊಂಡಿತು. ಈ ವೇಳೆ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.