ಕನ್ನಡಪ್ರಭ ವಾರ್ತೆ ಕುಂದಾಪುರತಾಲೂಕಿನ ಬಳ್ಕೂರು ಸಾರ್ವಜನಿಕ ಗಣೇಶೋತ್ಸವದ ಗಣೇಶ ಮೂರ್ತಿ ವಿಸರ್ಜನೆ ವೇಳೆಯಲ್ಲಿ ಯುವಕರ ಗುಂಪೊಂದು ದರ್ಶನ್ ಕೈದಿ ನಂಬರ್ ಇರುವ ಟೀಶರ್ಟ್ ಧರಿಸಿ ಕುಣಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಬಳ್ಕೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಚೌತಿಯ ಮೂರನೇ ದಿನವಾದ ಸೋಮವಾರ ಗಣಪತಿ ಮೂರ್ತಿ ವಿಸರ್ಜನೆ ಅದ್ದೂರಿಯಾಗಿ ನಡೆದಿತ್ತು. ಮೂರ್ತಿ ವಿಸರ್ಜನೆ ವೇಳೆ ಬಳ್ಕೂರು ಚೋಣ್ ಗುಡ್ಡಿ ಫ್ರೆಂಡ್ಸ್ ಸದಸ್ಯರು ದರ್ಶನ್ ಕೈದಿ ನಂಬರ್ 6106 ಬರಹವುಳ್ಳ ಬಿಳಿ ಬಣ್ಣದ ಟೀ ಶರ್ಟ್ ಧರಿಸಿ ಡಿಜೆ ಸದ್ದಿಗೆ ಹೆಜ್ಜೆ ಹಾಕಿದ್ದರು.
ಆರೋಪಿಯಷ್ಟೆ... ಅಪರಾಧಿಯಲ್ಲ!ಘಟನೆ ನಡೆದು ನಾಲ್ಕೈದು ದಿನಗಳ ಬಳಿಕ ಚೋಣ್ ಗುಡ್ಡಿ ಫ್ರೆಂಡ್ಸ್ ಸದಸ್ಯರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಾಕಿದ್ದ ಫೋಟೊ ಹಾಗೂ ವೀಡಿಯೋ ದೃಶ್ಯಾವಳಿಗಳು ವೈರಲ್ ಆಗಿದ್ದು, ದರ್ಶನ್ ಅಭಿಮಾನಿಗಳ ನಡೆಗೆ ಪರ-ವಿರೋಧ ಚರ್ಚೆ ವ್ಯಕ್ತವಾಗುತ್ತಿದೆ. ಈ ನಡುವೆಯೂ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಅಭಿಮಾನಿಗಳು ‘ಕೈದಿ ನಂಬರ್ 6106 ಆರೋಪಿಯಷ್ಟೆ ಅಪರಾಧಿಯಲ್ಲ ಎಂಬ ಶೀರ್ಷಿಕೆಯ ಮೂಲಕ ಭಾರತದ ಸಂವಿಧಾನದ 19ನೇ ವಿಧಿಯ ಪ್ರಕಾರ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಲಾಯಿಸಲಾಗಿದೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.....................ಕೈದಿ ನಂಬರ್ ಟೀ ಶರ್ಟ್ ವಿಚಾರದಲ್ಲಿ ಯಾವುದೇ ಗಲಾಟೆ ನಡೆದಿಲ್ಲ. ಕೆಲ ಯುವಕರು ದರ್ಶನ್ ಕೈದಿ ನಂಬರ್ ಟೀಶರ್ಟ್ ಧರಿಸಿ ಮೆರವಣಿಗೆಗೆ ಬಂದಿದ್ದು, ಸಮಿತಿಯವರೆಲ್ಲರೂ ಅವರಿಗೆ ತಿಳಿಹೇಳಿದ್ದೆವು. ಬಳಿಕ ಎಲ್ಲರೂ ಟೀ ಶರ್ಟ್ ತೆಗೆದು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಈ ಬಗ್ಗೆ ಆದ ಗೊಂದಲಗಳು ಅಂದೇ ಬಗೆಹರಿಸಲಾಗಿತ್ತು. ಈಗ ಏಕೆ ಮುನ್ನಲೆಗೆ ಬಂತೋ ಗೊತ್ತಿಲ್ಲ.
। ಶ್ರೀಧರ ಉಡುಪ, ಅಧ್ಯಕ್ಷರು ಸಾರ್ವಜನಿಕ ಗಣೇಶೋತ್ಸವ ಸಮಿತಿ